ಬೆಂಗಳೂರು: ‘ಒಂದು ರೀತಿಯಲ್ಲಿ ನಾವು ಬಳಸಿ ಬಿಸಾಡಿದ ವಸ್ತುಗಳಂತೆ. ಜನರಷ್ಟೇ ಅಲ್ಲ, ವಿಧಿಯೂ ನಮ್ಮನ್ನು ಇದೇ ರೀತಿ ನಡೆಸಿಕೊಂಡಿದೆ’ ಎಂದು ನೋವಿನ ನಗೆ ಬೀರಿದ ರಾತ್ರಿ ನಿರಾಶ್ರಿತ. ಅವನ ಮಾತುಗಳನ್ನು ಕೇಳುತ್ತಿದ್ದರೆ, ನಮ್ಮ ಜನಪ್ರತಿನಿಧಿಗಳ ನಿಷ್ಕಾಳಜಿ, ಅಧಿಕಾರಿಗಳ ತಾತ್ಸಾರ ಹಾಗೂ ಜಡ್ಡುಗಟ್ಟಿದ ವ್ಯವಸ್ಥೆ ಕಣ್ಮುಂದೆ ಬರುತ್ತದೆ.
ನಗರದಲ್ಲಿ ರೈಲು, ಬಸ್ ನಿಲ್ದಾಣಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ, ಮೇಲ್ಸೇತುವೆಯ ಕೆಳಗೆ ರಾತ್ರಿ ವೇಳೆ ಆಶ್ರಯ ಪಡೆಯುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂಗವೈಕಲ್ಯ, ದುಡಿಯುವ ಶಕ್ತಿ ಕಸಿದುಕೊಂಡ ವಯಸ್ಸು, ಕುಟುಂಬದ ನಿರ್ಲಕ್ಷ್ಯ, ಚಿಕ್ಕಂದಿನಲ್ಲಿಯೇ ಮನೆಯವರನ್ನು ಬಿಟ್ಟು ಓಡಿ ಬರುವಂತೆ ಮಾಡಿದ ಸಿಟ್ಟು–ಹಟ, ಬಂಧು–ಬಳಗವನ್ನೆಲ್ಲ ಕಸಿದುಕೊಂಡ ವಿಧಿ, ಯಾವುದೇ ಕೆಟ್ಟ ಗಳಿಗೆಯಲ್ಲಿನ ಮನಸ್ತಾಪ ಅಥವಾ ಒಂದು ಹೊತ್ತಿನ ಊಟಕ್ಕೂ ದುಡಿಯಲೇಬೇಕಾದ ಅನಿವಾರ್ಯತೆ ಇವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ.
ಕಷ್ಟ ಚಳಿಗಿಂತ ಕ್ರೂರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಶಿವಾಜಿನಗರ ಕಂಟೋನ್ಮೆಂಟ್, ಯಶವಂತಪುರ ರೈಲು ನಿಲ್ದಾಣ, ಕೆ.ಆರ್. ಮಾರುಕಟ್ಟೆ ಬಳಿಯ ಮೇಲ್ಸೇತುವೆಯ ಕೆಳಗೆ ಹೀಗೆ, ನಗರದ ಹಲವು ಬಸ್ ಮತ್ತು ರೈಲು ನಿಲ್ದಾಣಗಳು, ಮಾರುಕಟ್ಟೆ ಪ್ರದೇಶಗಳಲ್ಲಿ ನಿರಾಶ್ರಿತರು ರಾತ್ರಿ ಕಳೆಯುತ್ತಾರೆ. ರಾತ್ರಿ 11ರ ನಂತರ ಈ ಸ್ಥಳಗಳಿಗೆ ಬರುವ ಇವರು, ಬೆಳಿಗ್ಗೆ 4.30ರ ವೇಳೆಗೆ ಜಾಗ ಖಾಲಿ ಮಾಡುತ್ತಾರೆ.
‘ಹಾಸಿಗೆ, ಹೊದಿಕೆ ಎಲ್ಲ ವ್ಯವಸ್ಥೆ ಇದ್ದರೂ ನಾವು ಮನೆಯಲ್ಲಿ ಮಲ ಗಿದ್ದಾಗ ಚಳಿ ಸಹಿಸಲು ಆಗುವುದಿಲ್ಲ. ಈ ಬಯಲಲ್ಲಿ ಹೀಗೆ ಮಲಗುತ್ತೀರಲ್ಲ, ಚಳಿ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರೆ, ‘ಅಪ್ಪ, ಅಮ್ಮ ಇಲ್ಲ. ಗಂಡನನ್ನೂ ಕಳೆದುಕೊಂಡಿದ್ದೇನೆ. ಮಕ್ಕಳನ್ನು ತಂಗಿಯ ಮನೆಯಲ್ಲಿ ಬಿಟ್ಟಿದ್ದೇನೆ. ಒಳ್ಳೆಯ ಕೆಲಸ ಮಾಡಲು ಹೆಚ್ಚು ಓದಿಲ್ಲ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತೇನೆ. ಯಶವಂತಪುರದಲ್ಲಿ ನಿಲ್ಲುವ ರೈಲುಗಳಲ್ಲಿ ಆಗಾಗ ಭಿಕ್ಷೆ ಬೇಡುತ್ತೇನೆ. ಬದುಕಿನ ಕಷ್ಟದ ನಡುವೆ, ಈ ಕೊರೆಯುವ ಚಳಿ ಯಾವ ಲೆಕ್ಕ’ ಎಂದು ಹೇಳುತ್ತಾರೆ ಹರಿಹರದ ಗೀತಮ್ಮ.
ದುಡಿಮೆಯ ಅನಿವಾರ್ಯತೆ: ನಿರ್ಗತಿಕರು ಮಾತ್ರವಲ್ಲ, ಹೂವು–ಸೊಪ್ಪು ಮಾರುವವರು, ಬಸ್‌ಗಳು ತಪ್ಪಿದವರು, ಸರ್ಕಾರದ ವಿವಿಧ ಯೋಜನೆಗಳ ನೆರವು ಕೋರಲು ಪರ ಊರಿನಿಂದ ಬಂದವರು, ಕೊನೆಯ ಬಸ್ ಅಥವಾ ರೈಲು ತಪ್ಪಿಸಿಕೊಂಡವರು ಕೂಡ ಹೀಗೆ ನಿಲ್ದಾಣಗಳ ಎದುರು, ಬೀದಿ ಬದಿಯಲ್ಲಿ ರಾತ್ರಿ ಮಲಗುತ್ತಾರೆ.
ಬಂಗಾರಪೇಟೆ, ಜೋಲಾರ್‌ಪೇಟೆ ಮತ್ತಿತರ ಕಡೆಗಳಿಂದ ಸೊಪ್ಪು, ಹೂವು ಮಾರುವವರು ಬೆಂಗಳೂರಿಗೆ ಬರುತ್ತಾರೆ. ತಮ್ಮ ಊರಿನಿಂದ ನಿತ್ಯ ಹೊರಡುವ ಕೊನೆಯ ರೈಲು ಹತ್ತುವ ಇವರು, ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಆವರಣದಲ್ಲಿಯೇ ರಾತ್ರಿ ಉಳಿಯುತ್ತಾರೆ. ಬೆಳಿಗ್ಗೆ ಸೊಪ್ಪು–ಹೂವು ಮಾರಾಟದ ನಂತರ ಊರಿಗೆ ಮರಳುತ್ತಾರೆ. ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಇಂತಹ ‘ತಾತ್ಕಾಲಿಕ ನಿರಾಶ್ರಿತರ’ ಸಂಖ್ಯೆ ಹೆಚ್ಚು.
ಛತ್ರಗಳಲ್ಲಿ ಮದುವೆ ಅಡುಗೆ ತಯಾರಿಸುವ, ಊಟ ಬಡಿಸುವ ಕೆಲಸ ಮಾಡುವವರು, ಸಿನಿಮಾಗಳಲ್ಲಿ ‘ಕ್ರೌಡ್ ಸೀನ್’ಗಳಲ್ಲಿ ಕಾಣಿಸಿಕೊಳ್ಳುವ ಸಹಕಲಾವಿದರು, ಗಾರೆ ಕೆಲಸ ಮಾಡುವವರು ಮೆಜೆಸ್ಟಿಕ್ ರೈಲು ನಿಲ್ದಾಣದ ಆವರಣದಲ್ಲಿ ಉಳಿದುಕೊಳ್ಳುತ್ತಾರೆ. ಅಂದರೆ, ವಾರದಲ್ಲಿ ಒಂದೆರಡು ದಿನ ಮಾತ್ರ ಕೆಲಸ ಮಾಡುವ ಇಂಥವರು, ಬೆಂಗಳೂರಿನಲ್ಲಿ ಬಾಡಿಗೆಗೆ ರೂಮು ಮಾಡಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ.
‘ನಿತ್ಯ ಕೆಲಸ ಸಿಕ್ಕರೆ, ಐದಾರು ಜನ ಸೇರಿ ಬಾಡಿಗೆ ರೂಮ್ ಹಿಡಿಯಬಹುದು. ಆದರೆ, ಇಂದು ಕೆಲಸವಿದ್ದರೆ ಮೂರು ದಿನ ಇರುವುದಿಲ್ಲ. ಹೀಗಾಗಿ, ಇಲ್ಲಿಯೇ ಬಂದು ಮಲಗುತ್ತೇವೆ’ ಎಂದು ಹಲವರು ಹೇಳುತ್ತಾರೆ.
ಹೆಚ್ಚದ ಪುನರ್‌ವಸತಿ ಕೇಂದ್ರಗಳು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂಬತ್ತು ಪುನರ್‌ವಸತಿ ಕೇಂದ್ರಗಳನ್ನು ತೆರೆಯ ಲಾಗಿದೆ. ನಿರಾಶ್ರಿತರ ಸಂಖ್ಯೆಗೆ ಹೋಲಿಸಿದರೆ, ಇವುಗಳ ಸಂಖ್ಯೆ ತೀರಾ ಕಡಿಮೆ. ಇನ್ನು, ಹಲವರಿಗೆ ಇಂತಹ ಕೇಂದ್ರಗಳ ಬಗ್ಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ನಿರಾಶ್ರಿತರಲ್ಲಿ ಅರಿವು ಮೂಡಿಸಲು, ಪ್ರಚಾರ ಕಾರ್ಯ ಕೈಗೊಳ್ಳಲು ಕೂಡ ಬಿಬಿಎಂಪಿ ಮುಂದಾಗಿಲ್ಲ.
ಏನೇನಿದೆ ವ್ಯವಸ್ಥೆ?: ಈ ಪುನರ್‌ವಸತಿ ಅಥವಾ ಆಶ್ರಯ ಕೇಂದ್ರಗಳಲ್ಲಿ ಹಾಸಿಗೆ, ಹೊದಿಕೆ, ದಿಂಬು ಗಳನ್ನು ನೀಡಲಾಗುತ್ತದೆ. ಲಗೇಜ್ ಇಟ್ಟುಕೊಳ್ಳಲು ಪ್ರತ್ಯೇಕ ಕಪಾಟು, ಕುಡಿಯಲು ಶುದ್ಧ ನೀರು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇದೆ. ವೃದ್ಧರಿಗೆ ಮತ್ತು ಅಶಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನೂ ನೀಡಲಾಗುತ್ತದೆ. ಆದರೆ, ಒಂದು ಕೇಂದ್ರದಲ್ಲಿ 40ರಿಂದ 50 ಜನ ಮಾತ್ರ ಉಳಿದುಕೊಳ್ಳಬಹುದಾಗಿದೆ.
ತಪ್ಪು ಕಲ್ಪನೆ: ‘ಇಂತಹ ಪುನರ್‌ವಸತಿ ಕೇಂದ್ರ ಗಳಿಗೆ ಹೋದರೆ ನಮ್ಮನ್ನು ಕೂಡಿ ಹಾಕುತ್ತಾರೆ. ಹೊರಗೆ ಬಿಡುವುದಿಲ್ಲ ಮತ್ತು ಈ ಕೇಂದ್ರಗಳಲ್ಲಿ ಸ್ವಚ್ಛತೆ ಇರುವುದಿಲ್ಲ ಎಂಬ ತಪ್ಪುಕಲ್ಪನೆ ನಿರಾಶ್ರಿತರಲ್ಲಿದೆ. ಹೀಗಾಗಿ, ಈ ಕೇಂದ್ರಗಳತ್ತ ಅವರು ಬರುವುದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.
ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕುರಿತು ಮಾಹಿತಿ ಇರುವುದಿಲ್ಲ. ಒಮ್ಮೆ ಇಂತಹ ಕೇಂದ್ರಕ್ಕೆ ಬಂದರೆ, ಅವರು ಇಲ್ಲಿಯೇ ಉಳಿಯಲು ಬಯಸುತ್ತಾರೆ ಎಂದು ಅವರು ಹೇಳಿದರು.
ಶೀಘ್ರದಲ್ಲಿಯೇ ಟೆಂಡರ್: ‘ಪುನರ್ ವಸತಿ ಕೇಂದ್ರಗಳ ಸಂಖ್ಯೆ ಕಡಿಮೆ ಇರು ವುದರಿಂದ ಬಹಳಷ್ಟು ಜನ ಈಗಲೂ ಬೀದಿ ಬದಿಯಲ್ಲಿ ಮಲಗುತ್ತಿದ್ದಾರೆ. ಈಗ ಒಂಬತ್ತು ಕೇಂದ್ರಗಳಿದ್ದು, ಮತ್ತೆ ಎಂಟು ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಕೇಂದ್ರಗಳ ಆರಂಭಕ್ಕೆ ಅನುಮೋದನೆ ದೊರೆತಿದ್ದು, ಒಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು’ ಎಂದು ಅಧಿಕಾರಿ ಹೇಳಿದರು.
ಟೆಂಡರ್ ಮೂಲಕ ಏಜೆನ್ಸಿಗೆ ನೀಡಲಾಗುತ್ತದೆ. ಯಾವುದಾದರೂ ಸರ್ಕಾರೇತರ ಸಂಸ್ಥೆ ಏಜೆನ್ಸಿ ಪಡೆಯುತ್ತದೆ. ತುಳಸಿ ತೋಟದಲ್ಲಿಎರಡು, ಕೆ.ಆರ್. ಮಾರುಕಟ್ಟೆ ಹತ್ತಿರ ಒಂದು ಹಾಗೂ ಕುಂಬಾರಗುಂಡಿ ಬಳಿ ಮೂರು ಕೇಂದ್ರಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದರು.
ಎಲ್ಲ ಕೇಂದ್ರಗಳು ಆರಂಭವಾದ ಮೇಲೆ,ಪೊಲೀಸರು ಮತ್ತು ಆಟೊ ಚಾಲಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇಂತಹ ಕೇಂದ್ರಗಳ ಬಗ್ಗೆ ನಿರಾಶ್ರಿತರಿಗೆ ಮಾಹಿತಿ ನೀಡುವಂತೆ ಅವರನ್ನು ಕೋರಲಾಗುವುದು ಎಂದು ಅವರು ಹೇಳಿದರು.
ಅನುಕಂಪದ ಮನಸುಗಳೂ ಅನೇಕ
ಬೀದಿ ಬದಿಯಲ್ಲಿ, ರೈಲು, ಬಸ್ ನಿಲ್ದಾಣಗಳ ಆವರಣದಲ್ಲಿ ಮಲಗುವ ನಿರಾಶ್ರಿತರಿಗೆ ನಿತ್ಯ ಊಟ ನೀಡುವ, ಆಗಾಗ ಹೊದಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಅನೇಕ ಸಹೃದಯರು. ಪ್ರಚಾರ ಬಯಸದ ಇವರು, ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ನಡೆದುಕೊಳ್ಳುತ್ತಾರೆ.
‘ಸೇಠ್‌ಜಿ ಒಬ್ಬರು ನಿತ್ಯ ಇಲ್ಲಿಗೆ (ಯಶವಂತಪುರ ರೈಲು ನಿಲ್ದಾಣ) ಬರುತ್ತಾರೆ. 25 ಜನಕ್ಕೆ ಊಟ ಮತ್ತು ಹೊದಿಕೆ ನೀಡಿ ಹೋಗುತ್ತಾರೆ. ಅವರು ತಮ್ಮ ಹೆಸರನ್ನೂ ಹೇಳಿಕೊಂಡಿಲ್ಲ’ ಎಂದು ಟ್ಯಾಕ್ಸಿ ಚಾಲಕ ಅಹಮದ್ ಹೇಳಿದರು.
ಇದೇ ರೀತಿ, ಆರ್.ಕೆ. ಗ್ರೂಪ್‌ನ ಕೆಲವು ನೌಕರರು, ಇಂತಹ ನಿರಾಶ್ರಿತರಿಗೆ ಬೆಡ್‌ಶೀಟ್‌ಗಳನ್ನು ವಿತರಿಸುವ ದೃಶ್ಯ ಕಂಡು ಬಂತು.
‘ಐದು ವರ್ಷಗಳಿಂದ ನಾವು ಈ ಕಾರ್ಯ ಮಾಡುತ್ತಿದ್ದೇವೆ. ಪ್ರತಿ ಡಿಸೆಂಬರ್‌ನಿಂದ ಜನವರಿಯವರೆಗೆಮೆಜೆಸ್ಟಿಕ್, ಶಿವಾಜಿನಗರ, ಯಶವಂತಪುರ, ಮಾರುಕಟ್ಟೆ ಪ್ರದೇಶದಲ್ಲಿ ನಿರಾಶ್ರಿತರಿಗೆ ಇವುಗಳನ್ನು ನೀಡುತ್ತೇವೆ’ ಎಂದು ಆರ್.ಕೆ. ಗ್ರೂಪ್ ಕಂಪನಿಯ ರಾಜ್ ಹೇಳಿದರು.
ಕರುಣೆ–ಕರ್ತವ್ಯದ ನಡುವಿನ ಒದ್ದಾಟ
ಬಹುತೇಕ ನಿರಾಶ್ರಿತರು ಆರ್‌ಪಿಎಫ್ ಪೊಲೀಸರ ಬಗ್ಗೆ ಆರೋಪಗಳ ಮಳೆಯನ್ನೇ ಸುರಿಸಿದರೆ, ಹಲವರು ಪೊಲೀಸರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.
‘ಎಂಥದ್ದೇ ದೊಡ್ಡ ಆಕಾರವಿದ್ದರೂ, ಕೊರೆಯುವ ಚಳಿಗೆ ಮುದುಡಿ ಮಲಗಿದವರನ್ನು ಎದ್ದು ಓಡಿಸಲು ಮನಸಿಗೆ ತುಂಬಾ ಸಂಕಟವಾಗುತ್ತದೆ. ಅದರಲ್ಲಿಯೂ, ವೃದ್ಧರು, ಅಂಗವಿಕಲರು ಮಲಗಿದ್ದರೆ ಸುಮ್ಮನಿರುತ್ತೇವೆ. ಆದರೆ, ಉನ್ನತ ಅಧಿಕಾರಿಗಳು ಬಂದಾಗ ಇವರನ್ನು ನೋಡಿದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಇವರ ಬಗ್ಗೆ ಕರುಣೆ ತೋರುವುದೋ, ಕರ್ತವ್ಯಕ್ಕೆ ಗಮನ ಕೊಡುವುದೋ ಎಂಬ ಸಂದಿಗ್ಧದಲ್ಲಿ ನಾವು ಇರುತ್ತೇವೆ’ ಎಂದು ಪೊಲೀಸರೊಬ್ಬರು ಹೇಳಿದರು.
5,000ಬಿಬಿಎಂಪಿ ನಡೆಸಿದ ಗಣತಿ ಪ್ರಕಾರ ನಗರದಲ್ಲಿನ ನಿರಾಶ್ರಿತರ ಅಂದಾಜು ಸಂಖ್ಯೆ
08ಹೆಚ್ಚುವರಿ ಪುನರ್‌ವಸತಿ ಕೇಂದ್ರಗಳ ನಿರ್ಮಾಣಕ್ಕೆ ಶೀಘ್ರ ಟೆಂಡರ್
ಪುನರ್‌ವಸತಿ ಕೇಂದ್ರಗಳು
*ಮರ್ಫಿ ಟೌನ್
*ರಾಜಾಜಿನಗರ ಬಳಿಯ ರಾಮಮಂದಿರ
*ಗೂಡ್‌ಶೆಡ್ ರಸ್ತೆಯಲ್ಲಿ ಎರಡು
*ಉಪ್ಪಾರಪೇಟೆ
*ದಾಸರಹಳ್ಳಿ
*ಬೊಮ್ಮನಹಳ್ಳಿ
*ಹೂಡಿ
*ಯಲಹಂಕ
ಇದು ಕಥೆಯಲ್ಲ ಜೀವನ!
*ರೈಲು ನಿಲ್ದಾಣದಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಯಾರಾದರೂ ತಪ್ಪಿಸಿಕೊಂಡರೆ, ಆರ್‌ಪಿಎಫ್ ಪೊಲೀಸರ ಕಣ್ಣು ನಮ್ಮ ಮೇಲೆ ಬೀಳುತ್ತದೆ. ನಮ್ಮನ್ನೇ ಎಳೆದುಕೊಂಡು ಹೋಗಿ ಕೋರ್ಟ್‌ನಲ್ಲಿ ನಿಲ್ಲಿಸುತ್ತಾರೆ. ನನ್ನ ಹೆಸರು ಜೀವನ್‌ಗೌಡ. ಆದರೆ, ನ್ಯಾಯಾಧೀಶರ ಎದುರು ದೇವರಾಜ್ ಎಂದು ಹೇಳುವಂತೆ ಸೂಚನೆ ನೀಡಿದ್ದರು. ನನ್ನ ಸ್ನೇಹಿತನ ಹೆಸರೂ ಬೇರೆ ಇದ್ದರೂ, ಅವನ ಹೆಸರನ್ನು ಮುರುಗನ್ ಎಂದು ಹೇಳಿಸಿದರು. ಪೊಲೀಸರ ಭಯಕ್ಕೆ, ಕೋರ್ಟ್‌ನಿಂದ ಹೊರಬಂದರೆ ಸಾಕು ಎಂಬ ಕಾರಣಕ್ಕೆ ಸುಳ್ಳು ಹೇಳಿದೆವು. ನ್ಯಾಯಾಧೀಶರು ಎಚ್ಚರಿಕೆ ನೀಡಿ ಕಳುಹಿಸಿದರು.
*ಓಕಳಿಪುರ ರೈಲು ನಿಲ್ದಾಣದ ಬಳಿ ಮಲಗಿದ್ದ 76 ಜನರನ್ನು ಆರ್‌ಪಿಎಫ್ ಪೊಲೀಸರು ಎಳೆದೊಯ್ದಿದ್ದರು. ರೂಮ್ ಒಂದರಲ್ಲಿ ಕೂಡಿ ಹಾಕಿದರು. ಒಬ್ಬೊಬ್ಬರು ನೂರು ರೂಪಾಯಿ ಕೊಟ್ಟರೆ ಬಿಡುತ್ತೇವೆ, ಇಲ್ಲದಿದ್ದರೆ ಇಲ್ಲ ಎಂದರು. ನಮ್ಮ ಬಳಿ ಅಷ್ಟೂ ಇರಲಿಲ್ಲ. ತಿಂಡಿ–ಊಟ ಕೊಡದೆ ಒಂದೂವರೆ ದಿನ ಹಾಗೇ ಇಟ್ಟುಕೊಂಡರು. ಡಾನ್ಸ್ ಮಾಡಿಸಿದರು. ಹಣೆಗೆ ಗನ್ ಇಟ್ಟು ಹೆದರಿಸಿದರು. ನಾವು ಕೂಲಿ ಮಾಡುತ್ತಿದ್ದವರೊಬ್ಬರಿಗೆ ಕರೆ ಮಾಡಿ, ಅವರಿಂದ ₹500 ಕೊಡಿಸಿದ ಮೇಲೆ ಐದು ಜನರನ್ನು ಬಿಟ್ಟು ಕಳಿಸಿದರು ಎಂದು ಹೆದರಿಕೊಂಡೇ ಹೇಳುತ್ತಾರೆ ರೈಲು ನಿಲ್ದಾಣ ಬಳಿಯ ಫುಟ್‌ಪಾತ್‌ನಲ್ಲಿಯೇ ಮಲಗುವ ವಿಜಯ್.
*ರಾಜಕೀಯ ಕಾರ್ಯಕ್ರಮವಿದ್ದಾಗ ಸಾರ್ವಜನಿಕರಿಗೆ ಊಟ ಬಡಿಸುವ ಕೆಲಸಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಅನ್ನ–ಸಾರಿನ ಬಕೆಟ್, ಸೌಟು ಹಿಡಿದು ಕೈ ನೋವು ಬಂದಿದೆ, ವಿಶ್ರಾಂತಿ ಕೊಡಿ ಎಂದರೂ ನಮ್ಮ ನೋವನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಒಬ್ಬರಿಗೆ ದಿನಕ್ಕೆ ಸಾವಿರ ರೂಪಾಯಿ ಕೊಟ್ಟರೂ, ನಮ್ಮನ್ನು ಕರೆದುಕೊಂಡು ಹೋದ ಗುತ್ತಿಗೆದಾರ ನಮಗೆ ಐನೂರು ರೂಪಾಯಿ ಮಾತ್ರ ಕೊಡುತ್ತಾನೆ. ಕೂಲಿ ಕಡಿಮೆಯಾಯಿತು, ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದರೆ, ನಮಗೆ ಇಲ್ಲಿ (ಮೆಜೆಸ್ಟಿಕ್ ರೈಲು ನಿಲ್ದಾಣದ ಎದುರು) ಮಲಗಲು ಅವಕಾಶ ನೀಡದಿರಲು ಪೊಲೀಸರಿಗೆ ಅವನೇ ಲಂಚ ಕೊಡುತ್ತಾನೆ. ಆರ್‌ಪಿಎಫ್ ಪೊಲೀಸರು ಸ್ಟೇಷನ್‌ಗೆ ಕರೆದುಕೊಂಡು ಹೋಗಿ ದೌರ್ಜನ್ಯ ನಡೆಸುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಹಲವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.