ಯಲಹಂಕ: ‘ಕೀಟನಾಶಕ ಮತ್ತು ಕಳೆನಾಶಕಗಳ ಸಿಂಪಡಣೆಯಿಂದ ಜೇನು ಹುಳುಗಳ ಸಂತತಿ ಕ್ಷೀಣಿಸುತ್ತಿದ್ದು, ಇದರಿಂದ ಆಹಾರ ಉತ್ಪಾದನೆ ಮೇಲೆ ಗಂಭೀರವಾದ ಪರಿಣಾಮ ಬೀರಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಕೆ.ನಾರಾಯಣಗೌಡ ಕಳವಳ ವ್ಯಕ್ತಪಡಿಸಿದರು.
ಕೃಷಿ ವಿಶ್ವವಿದ್ಯಾಲಯದ ಜೇನು ಕೃಷಿ ವಿಭಾಗದ ವತಿಯಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಶುಕ್ರವಾರ ಆಯೋಜಿಸಿದ್ದಸುಸ್ಥಿರ ಹೆಜ್ಜೇನು ಕೊಯ್ಲು ಕಾರ್ಯಾಗಾರ ಮತ್ತು ರಕ್ಷಣಾ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೇನು ಹುಳುಗಳ ಪರಾಗಸ್ಪರ್ಶದಿಂದ ಆಹಾರ ಉತ್ಪಾದನೆ ಗಣನೀಯವಾಗಿ ವೃದ್ಧಿಯಾಗುತ್ತದೆ. ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಮೂಲಕ ಸುಸ್ಥಿರ ಕೃಷಿ ಮಾಡುವುದರಿಂದ ಜೇನು ಹುಳ ಮತ್ತು ಇತರ ಕೀಟಗಳನ್ನು ಸಂರಕ್ಷಿಸಬಹುದು’ ಎಂದರು.
‘ಜೇನು ತುಪ್ಪದಲ್ಲಿ ಔಷಧೀಯ ಗುಣಗಳು ಅಧಿಕವಾಗಿದ್ದು, ಆರೋಗ್ಯಕ್ಕೆ ಉಪಯುಕ್ತ. ಜೇನಿನಿಂದ ಬೆಳೆಗಳ ಉತ್ಪಾದನೆ ಹೆಚ್ಚಾಗುವ ಜೊತೆಗೆ ರೈತರ ಆದಾಯವೂ ವೃದ್ಧಿಯಾಗುತ್ತದೆ’ ಎಂದು ಹೇಳಿದರು.
ಜೇನು ಕೃಷಿ ವಿಭಾಗದ ಮುಖ್ಯಸ್ಥ ಕೆ.ಟಿ.ವಿಜಯ ಕುಮಾರ್,‘ನಗರದ ಬೃಹತ್ ಕಟ್ಟಡಗಳಲ್ಲಿ ಸ್ವಾಭಾವಿಕವಾಗಿ ಹೆಜ್ಜೇನು ಗೂಡು ಕಟ್ಟಿಕೊಳ್ಳುತ್ತವೆ. ರೈತಸ್ನೇಹಿ ಮತ್ತು ಪರಾಗಸ್ಪರ್ಶದ ಪ್ರಾಮುಖ್ಯತೆ ತಿಳಿಯದ
ಅನೇಕರು, ಜೇನು ಕುಟುಂಬಗಳಿಗೆ ಕೀಟನಾಶಕ ಸಿಂಪಡಿಸಿ ನಾಶಪಡಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಜೇನು ಹುಳುಗಳನ್ನು ಕೊಲ್ಲದೆ, ಸುಲಭವಾಗಿ ಸ್ಥಳಾಂತರಿಸಬಹುದಾದ ತಾಂತ್ರಿಕ ಸಂರಕ್ಷಣಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಾಗಾರದ ಉದ್ದೇಶ’
ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.