ADVERTISEMENT

ಹೂವಿನಾಯಕನಹಳ್ಳಿ: ಅಭಿವೃದ್ಧಿಗೊಂಡ ಕೆರೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 18:29 IST
Last Updated 1 ಮೇ 2022, 18:29 IST
ಸಂಸದ ಸದಾನಂದ ಗೌಡ ಅವರು ಕೆರೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಸಂಸದ ಸದಾನಂದ ಗೌಡ ಅವರು ಕೆರೆ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು   

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಐಟಿಸಿ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಹೂವಿನಾಯಕನಹಳ್ಳಿ ಗ್ರಾಮದ ಕೆರೆಯನ್ನು ಸಂಸದ ಡಿ.ವಿ.ಸದಾನಂದಗೌಡ ಅವರು ಲೋಕಾರ್ಪಣೆಗೊಳಿಸಿದರು.

‘ಅಲ್ಪಾವಧಿಯಲ್ಲಿ ಹೆಚ್ಚಿನ ತೆರಿಗೆ ಸಂಗ್ರಹಿಸುವ ಮೂಲಕ ಮೂಲಸೌಕರ್ಯ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ಈ ಪಂಚಾಯಿತಿಯು ಮುಂಚೂಣಿಯಲ್ಲಿದೆ. ಜನರ ಜೀವನಾಡಿಯಾಗಿರುವ ಕೆರೆಯನ್ನು ಅಭಿವೃದ್ಧಿಗೊಳಿಸಿರುವುದು ಶ್ಲಾಘನೀಯ. ಕೆರೆಯಲ್ಲಿ ನೀರಿನ ಸಂಗ್ರಹ ಹೆಚ್ಚುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಇದರಿಂದ ಜನರು, ಜಾನುವಾರುಗಳು ಹಾಗೂ ಕೃಷಿಗೆ ಉಪಯೋಗವಾಗಲಿದೆ’ ಎಂದು ಸದಾನಂದ ಗೌಡ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಜಗದೀಶ್, ‘ಐಟಿಸಿ ಸಂಸ್ಥೆಯ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿಯಲ್ಲಿ ₹ 40 ಲಕ್ಷ ದೇಣಿಗೆ ನೀಡುವ ಮೂಲಕ ಕೆರೆಯನ್ನು ಅಭಿವೃದ್ಧಿಪಡಿಸಲು ಕೈಜೋಡಿಸಿದೆ. ಹಲವು ವರ್ಷಗಳಿಂದ ನಿರುಪಯುಕ್ತವಾಗಿದ್ದ ಕೆರೆಯ ಹೂಳು ತೆಗೆಯಿಸಿ, ಸುತ್ತಲೂ ಏರಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಇತರೆ ಕೆರೆಗಳನ್ನು ಅಭಿವೃದ್ಧಿಪಡಿಸಲಿದ್ದೇವೆ’ ಎಂದರು.

ADVERTISEMENT

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಗಿರೀಶ್, ಎನ್.ಮುನೇಗೌಡ, ಬಿಜೆಪಿ ಮುಖಂಡರಾದ ದೊಡ್ಡಬಸವರಾಜು, ಡಿ.ಜಗನ್ನಾಥ್, ಟಿ.ಪಿ.ಪ್ರಕಾಶ್, ದೀಪು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.