ADVERTISEMENT

ಕುಡಿಯುವ ನೀರಿಗಾಗಿ ಹೊರಮಾವು ನಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 19:24 IST
Last Updated 13 ಜೂನ್ 2024, 19:24 IST
ಹೊರಮಾವು ವಾರ್ಡ್‌ನ ನಿವಾಸಿಗಳು ಎಚ್‌ಆರ್‌ಬಿಆರ್ ಬಡಾವಣೆಯ ಜಲಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಹೊರಮಾವು ವಾರ್ಡ್‌ನ ನಿವಾಸಿಗಳು ಎಚ್‌ಆರ್‌ಬಿಆರ್ ಬಡಾವಣೆಯ ಜಲಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಕೆ.ಆರ್.ಪುರ: ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಜಲಮಂಡಳಿ ಅಧಿಕಾರಿಗಳ ವಿರುದ್ಧ ಹೊರಮಾವು ವಾರ್ಡ್‌ ನಿವಾಸಿಗಳು ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿರುವ ಜಲಮಂಡಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಒಳಪಡುವ ಹೊರಮಾವು ವಾರ್ಡ್‌ನ ಬಾಬುಸಾಪಾಳ್ಯ, ಚೇಳಿಕೆರೆ, ಹೊರಮಾವು ಆಗರ, ಕೆ.ನಾರಾಯಣಪುರ, ನಾಗೇನಹಳ್ಳಿ ಸೇರಿದಂತೆ ವಿವಿಧ ಬಡಾವಣೆಯಲ್ಲಿ ನೀರಿನ ಅಭಾವ ವಿಪರೀತವಾಗಿದೆ. ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ಜಲಮಂಡಳಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಬೆಂಗಳೂರಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹೊರಮಾವು ವಾರ್ಡ್‌ನಲ್ಲಿ ಎರಡು ಲಕ್ಷ ಜನಸಂಖ್ಯೆ ಇದ್ದು, ನೀರಿಗೆ ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ. ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಜಲಮಂಡಳಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತ ಬರುತ್ತಿದಾರೆ. ವಾರ್ಡ್‌ನಲ್ಲಿ ಕೊಳವೆಬಾವಿಗಳು ಬರಿದಾಗಿದ್ದು, ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಕೆ.ಆರ್.ಪುರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಂಪತ್ ದೂರಿದರು.

ADVERTISEMENT

ಬಿಬಿಎಂಪಿ ಕಾವೇರಿ ನೀರು ಒದಗಿಸುವ 110 ಹಳ್ಳಿಯ ಯೋಜನೆಯಿಂದ ಕಾವೇರಿ ನೀರು ಪೂರೈಸದೇ ಜಲಮಂಡಳಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಮಳೆಗಾಲ ಆರಂಭವಾದರೂ ನೀರು ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಜಲಮಂಡಳಿಯ ಹಿರಿಯ ಅಧಿಕಾರಿ ಕಾರ್ಯನಿರ್ವಾಹಕ ಎಂಜಿನಿಯರ್‌ ಚನ್ನಬಸವಯ್ಯ ಅವರನ್ನು ಕೇಳಿದರೆ ಉದ್ದಟತನ ತೋರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಲವು ತಿಂಗಳುಗಳಿಂದ ಕುಡಿಯುವ ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಕಾವೇರಿ ನೀರು ಸರಬರಾಜು ಮಾಡುತ್ತೇವೆ ಎಂದು ಈಗಾಗಲೇ ಹಣ ಕಟ್ಟಿಸಿಕೊಂಡು ಕಾವೇರಿ ನೀರು ಇಲ್ಲಿಯವರೆಗೆ ನೀಡಿಲ್ಲ’ ಎಂದು ಚೇಳಿಕೆರೆ ನಿವಾಸಿ ಜಾನ್ಸಿ ದೂರಿದರು.

ಮುಖಂಡರಾದ ನಾಗೇನಹಳ್ಳಿ ನಾಗೇಶ್, ಆಗರ ಆನಂದ್, ಗುಂಡಾಲಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.