ADVERTISEMENT

ಹೊರಮಾವು: ಇದು ಕೆಸರುಗದ್ದೆಯಲ್ಲ, ರಸ್ತೆ!

ವಾರ್ಡ್‌ ಸಂಖ್ಯೆ 25–26ರಲ್ಲಿ ಅವ್ಯವಸ್ಥೆ l ಮಕ್ಕಳನ್ನು ಹೊರಗೆ ಕಳುಹಿಸಲು ಆತಂಕ

ಗುರು ಪಿ.ಎಸ್‌
Published 30 ಸೆಪ್ಟೆಂಬರ್ 2019, 19:50 IST
Last Updated 30 ಸೆಪ್ಟೆಂಬರ್ 2019, 19:50 IST
ಹೊರಮಾವು ವಾರ್ಡ್‌ನ ರಸ್ತೆ
ಹೊರಮಾವು ವಾರ್ಡ್‌ನ ರಸ್ತೆ   

ಬೆಂಗಳೂರು: ಕೆಸರುಗದ್ದೆಯ ರೂಪ ತಳೆದಿರುವ ಇಲ್ಲಿನ ರಸ್ತೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹೊರಮಾವುವಿನ ವಾರ್ಡ್‌ ಸಂಖ್ಯೆ 25 ಮತ್ತು 26ರ ವ್ಯಾಪ್ತಿಯಲ್ಲಿ ಒಂದೊಂದು ರಸ್ತೆಯನ್ನು ನಾಲ್ಕು ಬಾರಿ ಅಗೆಯಲಾಗಿದೆ. ಇಲ್ಲಿ ಕಾಮಗಾರಿ ಎಂದರೆ ರಸ್ತೆ ಅಗೆಯುವುದು ಮಾತ್ರ!

ನೀರಿನ ಪೈಪ್‌ಲೈನ್‌ ಹಾಕಲು ಒಮ್ಮೆ, ಒಳಚರಂಡಿ ಪೈಪ್‌ಗಳನ್ನು ಹಾಕಲು ಮತ್ತೊಮ್ಮೆ, ಮ್ಯಾನ್‌ಹೋಲ್‌ ಅಳವಡಿಸಲು ಇನ್ನೊಮ್ಮೆ, ಮ್ಯಾನ್‌ ಹೋಲ್‌ಗೆ ರಿಸಿವಿಂಗ್‌ ಚೇಂಬರ್‌ ಹಾಕಲು ಮತ್ತೆ ರಸ್ತೆ ಅಗೆಯಲಾಗಿದೆ.

ಈ ಎರಡು ವಾರ್ಡ್‌ಗಳ ವ್ಯಾಪ್ತಿಯಲ್ಲಿ ಒಟ್ಟು 11 ಗ್ರಾಮಗಳಿವೆ. 110 ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ, ಈ ಗ್ರಾಮಗಳಿಗೆ ಒಳಚರಂಡಿ ಸಂಪರ್ಕ ಹಾಗೂ ನೀರು ಪೂರೈಕೆಯ ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ನಡೆದಿದೆ.

ADVERTISEMENT

ಹೊರಮಾವು, ಅಗರ, ರಾಮಮೂರ್ತಿನಗರ, ಕೆ.ಚನ್ನಸಂದ್ರ, ಎನ್‌ಆರ್‌ಐ ಲೇಔಟ್‌, ಕಲ್ಕರೆ ಮುಖ್ಯರಸ್ತೆಗಳೇ ಅಲ್ಲದೆ, ನಗರೇಶ್ವರ ನಾಗೇನಹಳ್ಳಿ,ಕೊತ್ತನೂರು, ಕ್ಯಾಸನಳ್ಳಿ, ಸೋನಿಯಾಗಾಂಧಿ ನಗರ, ವಡ್ಡರ ಪಾಳ್ಯ, ಹೊರಮಾವು, ಅಗರ, ಮಹೇಶ್ವರ ನಗರ, ಹೊಯ್ಸಳ ನಗರದ ಅಡ್ಡರಸ್ತೆಗಳನ್ನೂ ಅಗೆಯಲಾಗಿದೆ.

ಮಕ್ಕಳನ್ನು ಹೊರಕಳುಹಿಸಲು ಆತಂಕ:

‘ಸೈಕಲ್‌ನಲ್ಲೇ ಮಕ್ಕಳು ಶಾಲೆ–ಕಾಲೇಜಿಗೆ ಹೋಗಿ ಬರುತ್ತಿದ್ದರು. ಇಲ್ಲಿನ ಎಲ್ಲ ರಸ್ತೆಗಳು ಈಗ ಕೆಸರುಗದ್ದೆಯ ರೂಪವನ್ನು ಪಡೆದಿವೆ. ಸೈಕಲ್‌ನಲ್ಲಿ ಸ್ವಲ್ಪ ದೂರ ಹೋದರೂ ಜಾರಿ ಬೀಳುತ್ತಿದ್ದಾರೆ. ಮಕ್ಕಳನ್ನು ಹೊರಗೆ ಕಳುಹಿಸಲು ಆತಂಕವಾಗುತ್ತಿದೆ’ ಎನ್ನುತ್ತಾರೆ ಎನ್‌ಆರ್‌ಐ ಲೇಔಟ್‌ನ ಪರಿಮಳಾ ಪ್ರಕಾಶ್.

ಆರೇಳು ತಿಂಗಳಿನಿಂದ ಈ ಪ್ರದೇಶಗಳಲ್ಲಿ ಇದೇ ಸ್ಥಿತಿ ಇದೆ. ಎರಡು ತಿಂಗಳ ಹಿಂದೆ ನಿವಾಸಿಗಳು ಸೇರಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿದ್ದಾರೆ.

ಸಂಸದ, ಶಾಸಕ, ಮೇಯರ್‌, ಪಾಲಿಕೆ ಆಯುಕ್ತರನ್ನೂ ಭೇಟಿಯಾಗಿ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ನೀರು ನಿಂತ ರಸ್ತೆ ಮೇಲೆ ‘ಹಡಗು’ ಇಟ್ಟು ಪ್ರತಿಭಟಿಸಿದ್ದಾರೆ. ಆದರೂ ಕಾಮಗಾರಿ ‘ರಸ್ತೆ ಅಗೆಯುವುದಕ್ಕೆ’ ಸೀಮಿತವಾಗಿದೆ.

ಎಸ್‌ಟಿಪಿಯೇ ಇಲ್ಲ!:‘ಜಲಮಂಡಳಿ ಒಳಚರಂಡಿ ಪೈಪ್‌ಲೈನ್‌ ಅಳವಡಿಸುತ್ತಿದೆ. ಕಲುಷಿತ ನೀರು ಹೋಗಲು ಎಸ್‌ಟಿಪಿಗೆ ಸಂಪರ್ಕ ಕಲ್ಪಿಸಬೇಕು. ಆದರೆ, ಎಸ್‌ಟಿ‍ಪಿ ನಿರ್ಮಾಣ ಕಾರ್ಯವನ್ನೂ ಕೈಗೊಂಡಿಲ್ಲ. ರಾಂಪುರ ಕೆರೆ ಬಳಿ ಎಸ್‌ಟಿಪಿ ಕಟ್ಟಲು ಉದ್ದೇಶಿಸಿದ್ದಾರೆ. ಈಗ ಕಾಮಗಾರಿ ಆರಂಭಿಸಿದರೂ ಈ ಎಸ್‌ಟಿಪಿ ಪೂರ್ಣಗೊಳಿಸಲು ಒಂದು ವರ್ಷವಾದರೂ ಬೇಕು. ಇವರು ಯಾವುದಕ್ಕೆ ಒಳಚರಂಡಿ ಪೈಪ್‌ಲೈನ್‌ ಸಂಪರ್ಕ ಕಲ್ಪಿಸುತ್ತಾರೆ ಎಂಬುದೇ ತಿಳಿಯುತ್ತಿಲ್ಲ’ ಎನ್ನುತ್ತಾರೆ ಕಲ್ಕೆರೆಯ ನಿವಾಸಿ ರಮೇಶ್.

ಬೈರತಿ ವಿರುದ್ಧ ಕಿಡಿ: ‘ಶಾಸಕತ್ವದಿಂದ ಅನರ್ಹಗೊಂಡಿರುವ ಬೈರತಿ ಬಸವರಾಜ್‌ ಅವರು ಪ್ರತಿನಿಧಿಸುತ್ತಿದ್ದ ಕೆ.ಆರ್. ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವಾರ್ಡ್‌ಗಳಿವೆ.

ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ನ್ಯಾಯಾಲಯದ ಸುತ್ತಾಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರು ಆರಂಭಿಸಿದ ಅರೆಬರೆ ಕಾಮಗಾರಿಗಳಿಂದ ಜನರು ಪಡಿಪಾಡಲು ಪಡುತ್ತಿದ್ದಾರೆ. ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ ಅವರಿಗೆ ಜನರ ಕಷ್ಟದ ಅರಿವಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಿದ್ದೆವು. ಅವರು ಸ್ವಂತ ಹಿತಾಸಕ್ತಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಿಂತ ಕಾಮಗಾರಿಯಿಂದಾಗಿ ನಾವು ತ್ರಿಶಂಕು ಸ್ಥಿತಿಯಲ್ಲಿದ್ದೇವೆ’ ಎಂದು ನಿವಾಸಿಗಳು ಆಕ್ರೋಶ ಹೊರ ಹಾಕಿದರು.

ಕ್ಷೇತ್ರಕ್ಕೆ ಈ ಬಾರಿ ಹೆಚ್ಚು ಅನುದಾನ ಘೋಷಣೆಯಾಗಿದೆ. ಆದರೆ, ಇನ್ನೂ ಯಾವುದೂ ಬಿಡುಗಡೆಯಾಗಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದ ನಂತರ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ನಡೆಯುತ್ತಿದೆ. ಆದರೆ, ಮಳೆ ಬಂದರೆ ಮತ್ತೆ ರಸ್ತೆ ಹದಗೆಟ್ಟು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಅಳಲು.

‘ಜನರ ಸಹಕಾರವೂ ಬೇಕು’

‘ನಮ್ಮದು ದೊಡ್ಡ ವಾರ್ಡ್‌. ಹಂತ–ಹಂತವಾಗಿ ಕೆಲಸ ನಡೆಯುತ್ತಿದೆ. ಜಲಮಂಡಳಿಗೆ ಶುಲ್ಕ ಕಟ್ಟಿ ಕಾವೇರಿ ನೀರು ಸಂಪರ್ಕ ತೆಗೆದುಕೊಳ್ಳಿ ಎಂದರೆ ಯಾರೂ ಕೇಳುತ್ತಿಲ್ಲ. ಆದರೆ, ರಸ್ತೆ ಅಗೆದರೆ ಮಾತ್ರ ಏಕೆ ಅಗೆಯುತ್ತೀರಿ ಎಂದು ಪ್ರಶ್ನಿಸುತ್ತಾರೆ. ಮತ್ತೆ ಕೆಲವರು ಅವರ ಮನೆ ಎದುರಿನ ರಸ್ತೆ ಅಗೆಯದಿದ್ದರೂ, ನಮ್ಮ ರಸ್ತೆಯಲ್ಲಿ ಕಾಮಗಾರಿ ನಡೆಸುವುದಿಲ್ಲವೇ ಎಂದೂ ಪ್ರಶ್ನಿಸುತ್ತಾರೆ. ರಸ್ತೆ ದುರಸ್ತಿ ಕಾರ್ಯ ಬೇಗ ಪೂರ್ಣಗೊಳ್ಳಲು ಜನರ ಸಹಕಾರವೂ ಬೇಕು’ ಎನ್ನುತ್ತಾರೆ ವಾರ್ಡ್‌ 25ರ ಸದಸ್ಯರಾದ ರಾಧಮ್ಮ ವೆಂಕಟೇಶ್.

‘ಅನುದಾನವನ್ನೇ ಬಳಸಲಾಗಿಲ್ಲ’

‘ಕಳೆದ ವರ್ಷ ವಾರ್ಡ್‌ಗೆ ಮಂಜೂರಾಗಿರುವ ಹಣವನ್ನೇ ವಿನಿಯೋಗಿಸಲು ಆಗಿಲ್ಲ. ಯಾವುದಕ್ಕೂ ಜಾಬ್‌ಕೋಡ್‌ ಸಿಕ್ಕಿಲ್ಲ’ ಎನ್ನುತ್ತಾರೆ ವಾರ್ಡ್‌ 26ರ ಸದಸ್ಯರಾದ ಪದ್ಮಾವತಿ ಶ್ರೀನಿವಾಸ್.

‘110 ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಸ್ತೆ ಅಗೆದಿದ್ದಾರೆ. ಆದರೆ, ನಿರೀಕ್ಷಿಸಿದಂತೆ ಕಾಮಗಾರಿ ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಯ್ತು. ಯಾರೂ ಮಾತು ಕೇಳುವುದಿಲ್ಲ. ಜನ ಪ್ರಶ್ನಿಸುತ್ತಾರೆ. ಹೊರಗೆ ಓಡಾಡಲು ಆಗುತ್ತಿಲ್ಲ’ ಎಂದು ಹೇಳಿದರು.

ಮುಖ್ಯರಸ್ತೆಯಾದರೂ ಸರಿ ಮಾಡಿಸಿ..

ಆರೇಳು ತಿಂಗಳುಗಳಿಂದ ರಸ್ತೆ ಸ್ಥಿತಿ ಹೀಗೆಯೇ ಇದೆ. ಹಲವು ಬಾರಿ ಮನವಿ ಮಾಡಿಕೊಂಡ ನಂತರ ಈಗ ಕೆಲಸ ನಡೆಯುತ್ತಿದೆ. ವಾರ್ಡ್‌ 25 ಮತ್ತು 26ರಲ್ಲಿ ಎಂಟು ಮುಖ್ಯರಸ್ತೆಗಳು ಇವೆ. ಇವುಗಳನ್ನು ಆದ್ಯತೆ ಮೇರೆಗೆ ದುರಸ್ತಿಗೊಳಿಸಬೇಕು. ಒಂದೊಂದು ಪ್ರದೇಶದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿದ ನಂತರವೇ, ಮತ್ತೊಂದು ಪ್ರದೇಶದಲ್ಲಿನ ರಸ್ತೆ ಅಗೆಯಲು ಪ್ರಾರಂಭಿಸಿದರೆ ತೊಂದರೆಯಾಗುವುದಿಲ್ಲ.

-ಉದಯಗಿರಿ, ರಾಮಮೂರ್ತಿ ನಗರ

ಮುಖ್ಯಮಂತ್ರಿ ಬಂದರೆ ರಸ್ತೆ ರಿಪೇರಿ !

ಮುಖ್ಯಮಂತ್ರಿ ಭೇಟಿ ನೀಡುತ್ತಾರೆ ಎಂದು ಕಲ್ಕೆರೆ ಮುಖ್ಯರಸ್ತೆಯನ್ನು ಮೂರೇ ದಿನದಲ್ಲಿ ಸರಿಪಡಿಸಿದರು. ಉಳಿದ ರಸ್ತೆಗಳನ್ನೂ ತ್ವರಿತವಾಗಿ ದುರಸ್ತಿಪಡಿಸಲು ಸಮಸ್ಯೆಯೇನು? ಗಣ್ಯರು ಬಂದರೆ ಮಾತ್ರ ಕೆಲಸ
ಮಾಡಬೇಕು ಎಂಬ ಭಾವನೆ ಅಧಿಕಾರಿಗಳಲ್ಲಿ ಮನೆ ಮಾಡಿದೆ.

-ರಾಘವೇಂದ್ರ ಅಡಿಗ, ಹೊರಮಾವು

* ವಾರ್ಡ್‌ಗೆ ₹120 ಕೋಟಿ ಬಂದಿದೆ. ಜಾಬ್‌ಕೋಡ್‌ ಸಿಗಬೇಕಿದೆ. ಸದ್ಯ, ಹದಗೆಟ್ಟಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಸಲಾಗುತ್ತಿದೆ

- ರಾಧಮ್ಮ ವೆಂಕಟೇಶ್‌, ಸದಸ್ಯೆ, ವಾರ್ಡ್‌ ಸಂಖ್ಯೆ 25

* 'ಕಳೆದ ವರ್ಷ ವಾರ್ಡ್‌ಗೆ ಮಂಜೂರಾಗಿರುವ ಹಣವನ್ನೇ ವಿನಿಯೋಗಿಸಲು ಆಗಿಲ್ಲ. ಯಾವುದಕ್ಕೂ ಜಾಬ್‌ಕೋಡ್‌ ಸಿಕ್ಕಿಲ್ಲ

- ಪದ್ಮಾವತಿ ಶ್ರೀನಿವಾಸ್, ಸದಸ್ಯೆ, ವಾರ್ಡ್‌ ಸಂಖ್ಯೆ 26

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.