ADVERTISEMENT

ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಖಲೀಲಅಹ್ಮದ ಶೇಖ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
<div class="paragraphs"><p>ಬೆಂಗಳೂರಿನ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದಲ್ಲಿ ಮಾನಸಿಕ ಅಸ್ವಸ್ಥರು ತೋಟಗಾರಿಕೆ ಕೃಷಿ ಚಟುವಟಿಕೆಗಳು ಮಾಡುತ್ತಿರುವುದು. </p></div>

ಬೆಂಗಳೂರಿನ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದಲ್ಲಿ ಮಾನಸಿಕ ಅಸ್ವಸ್ಥರು ತೋಟಗಾರಿಕೆ ಕೃಷಿ ಚಟುವಟಿಕೆಗಳು ಮಾಡುತ್ತಿರುವುದು.

   

–ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

ಬೆಂಗಳೂರು: ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳ ಮೇಲಿನ ಒತ್ತಡ ನಿವಾರಣೆ ಮತ್ತು ಆರೋಗ್ಯಪೂರ್ಣ ಬದುಕು ಕಟ್ಟಿಕೊಡಲು ‘ತೋಟಗಾರಿಕೆ ಚಿಕಿತ್ಸೆ’ ಎಂಬ ಹೊಸ ಪದ್ಧತಿ ಆರಂಭಿಸಲಾಗಿದೆ.

ADVERTISEMENT

‘ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ ಸಂಸ್ಥೆ’ಯು (ಎಪಿಡಿ) ಹೊಸ ಬಗೆಯ ಪ್ರಕೃತಿ ಚಿಕಿತ್ಸೆಯನ್ನು ಪರಿಚಯಿಸಿದೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಹಿಂಭಾಗದಲ್ಲಿರುವ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದೆ. ಇದರ ಫಲಿತಾಂಶವನ್ನು ಗಮನಿಸಿ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸುವ ಯೋಜನೆಯನ್ನು ಎಪಿಡಿ ಹಾಕಿಕೊಂಡಿದೆ.

‘ತೋಟಗಾರಿಕೆ ತರಬೇತಿ ಹಾಗೂ ಪ್ರಕೃತಿ ಚಿಕಿತ್ಸೆ’ ಎಂಬ ಯೋಜನೆಗೆ ಬಾಷ್‌ ಗ್ಲೋಬಲ್‌ ಸಾಫ್ಟ್‌ವೇರ್‌ ಕಂಪನಿಯು ಹಣಕಾಸಿನ ನೆರವು ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮುಕ್ಕಾಲು ಎಕರೆ ಜಮೀನು ನೀಡಿ ಉಸ್ತುವಾರಿ ವಹಿಸಿಕೊಂಡಿದೆ. 2023 ನವೆಂಬರ್‌ನಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಾಗಿತ್ತು.

‘ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳು ತೋಟಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಪ್ರಕೃತಿಯ ಜೊತೆಗೆ ಬೆರೆತು ಮಾನಸಿಕ ಅಸ್ವಸ್ಥತೆ ನಿವಾರಣೆಗೆ ಸಹಕಾರಿಯಾಗಲಿದೆ. ಔಷಧೀಯ ಸಸ್ಯಗಳನ್ನು ಸ್ಪರ್ಶಿಸುವುದರಿಂದ, ಅವುಗಳ ಸುವಾಸನೆಯನ್ನು ಆಸ್ವಾದಿಸುವುದರಿಂದ ಅವರಲ್ಲಿ ಮಾನಸಿಕವಾಗಿ ಬದಲಾವಣೆ ಆಗಲಿದೆ. ಒತ್ತಡ ನಿವಾರಣೆ ಹಾಗೂ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ’ ಎಂದು ಎಪಿಡಿ ಸಂಸ್ಥೆಯ ರೇಣುಕಾ ಸಿದ್ಧಸಮುದ್ರಾ ಮಾಹಿತಿ ನೀಡಿದರು.

‘ಇಂತಹ ಜನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಈ ಯೋಜನೆ ಸಹಕಾರಿಯಾಗಲಿದೆ. ಇವರ ಶ್ರಮದಿಂದ ಈಗಾಗಲೇ ಒಂದು ಕೈತೋಟವೂ ನಿರ್ಮಾಣವಾಗಿದೆ. ಅದರಲ್ಲಿ ಹೂವಿನ ಗಿಡಗಳು ಹಾಗೂ 65 ಬಗೆಯ ಔಷಧೀಯ ಸಸ್ಯಗಳನ್ನು ನೆಡಲಾಗಿದೆ. ಟೊಮೆಟೊ, ಬದನೆಕಾಯಿ, ಪಾಲಕ್, ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಮುಂತಾದವುಗಳನ್ನು ಬೆಳೆಸಿ ಮಾರಾಟ ಮಾಡಿ ₹3 ಸಾವಿರ ಆದಾಯವನ್ನು ಪಡೆಯಲಾಗಿದೆ’ ಎಂದು ವಿವರಿಸಿದರು.

ಪ್ರಾಯೋಗಿಕ ತರಬೇತಿ: ಸಸ್ಯಗಳು ಮತ್ತು ಅವುಗಳ ಅಗತ್ಯ, ತೋಟಗಾರಿಕೆ ಉಪಕರಣಗಳ ಪರಿಚಯ, ಕಳೆ ತೆಗೆಯುವುದು, ತರಕಾರಿ ಬೆಳೆಯುವುದು ಮತ್ತು ಔಷಧೀಯ ಸಸ್ಯಗಳ ಪರಿಚಯ, ಪುಷ್ಪಗುಚ್ಛಗಳನ್ನು ತಯಾರಿಸುವ ವಿಧಾನ, ರಾಸಾಯನಿಕ ಗೊಬ್ಬರದ ಬಳಕೆ, ಉದ್ಯಾನದ ನಿರ್ವಹಣೆ, ಸಸಿಗಳ ಪೋಷಣೆ ಮಾಡುವುದು ಸೇರಿದಂತೆ ಸಮಗ್ರ ತೋಟಗಾರಿಕೆ ಕೃಷಿ ಚಟುವಟಿಕೆಗಳ ಕುರಿತು ಪ್ರಾಥಮಿಕ ತಿಳಿವಳಿಕೆ ನೀಡಲಾಗುತ್ತಿದೆ.

‘ಕಹಿ ಘಟನೆಗಳನ್ನು ಮರೆಯಲು ಸಹಕಾರಿ’

‘ಮಾನಸಿಕ ಅಸ್ವಸ್ಥರು ಪ್ರತಿನಿತ್ಯ ಎರಡು ಗಂಟೆ ತೋಟಗಾರಿಕೆ ತರಬೇತಿಯಲ್ಲಿ ಪಾಲ್ಗೊಳ್ಳುವುದರಿಂದ ಅವರಲ್ಲಿ ನವಚೈತನ್ಯ ಜೀವನೋತ್ಸಾಹ ಆಶಾಭಾವನೆ ಮೂಡುತ್ತದೆ. ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯಲು ಸಹಕಾರಿಯಾಗಿದ್ದು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ತೋಟದಲ್ಲಿ ಕೆಲಸ ಮಾಡುವುದರಿಂದ ಚೆನ್ನಾಗಿ ಊಟ ಮತ್ತು ನಿದ್ದೆ ಮಾಡುತ್ತಾರೆ’ ಎಂದು ರೇಣುಕಾ ಸಿದ್ಧಸಮುದ್ರಾ ತಿಳಿಸಿದರು.

ಮಾನಸಿಕ ಅಸ್ವಸ್ಥರ ಕ್ರಿಯಾಶೀಲತೆ ಹಾಗೂ ಆರೋಗ್ಯ ಸುಧಾರಿಸಲು ಸುಸ್ಥಿರ ತೋಟಗಾರಿಕೆ ತರಬೇತಿ ಕೇಂದ್ರದ ಮೂಲಕ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ ಇದು ಸಹಕಾರಿಯಾಗಿದೆ.
-ಎಸ್. ಸಿದ್ರಾಮಣ್ಣ, ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ನಗರ ಜಿಲ್ಲೆ
ಬೆಂಗಳೂರಿನ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದಲ್ಲಿ ಮಾನಸಿಕ ಅಸ್ವಸ್ಥರೊಬ್ಬರು ಗಿಡಗಳಿಗೆ ನೀರೂಣಿಸುತ್ತಿರುವುದು –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಸಮನ್ವಯ ಸುಸ್ಥಿರ ತೋಟಗಾರಿಕೆ ಕೇಂದ್ರದಲ್ಲಿ ಮಾನಸಿಕ ಅಸ್ವಸ್ಥರು ತರಕಾರಿ ಬೆಳೆಗಳಿಗೆ ಗೊಬ್ಬರು ಹಾಕುತ್ತಿರುವುದು. –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.