ಬೆಂಗಳೂರು: ಹೂಳಿನಿಂದ ಕೂಡಿದ ರಾಜಕಾಲುವೆ, ಕೆಸರು ತುಂಬಿದ ರಸ್ತೆ, ಖಾಲಿ ಆಗಿರುವ ಮನೆಗಳು. ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯ ಹೊಸಕೆರೆಹಳ್ಳಿ ವಾರ್ಡ್‌ನಲ್ಲಿ ಪ್ರತಿ ಮಳೆಗಾಲದ ಸಂದರ್ಭ ಕಂಡುಬರುವ ಸಾಮಾನ್ಯ ದೃಶ್ಯಗಳಿವು.
ಮಳೆ ನೀರು ಮನೆಗೆ ನುಗ್ಗದಂತೆ ನೀರು ಸೋರಿಕೆ ನಿರೋಧಕ ಬಾಗಿಲುಗಳನ್ನು ಅಳವಡಿಸಿಕೊಂಡ ಮನೆಯೂ ನಿಮಗೆ ಇಲ್ಲಿ ಕಾಣಸಿಗುತ್ತದೆ. ಈ ಬಾಗಿಲು ಅಳವಡಿಸಿಕೊಳ್ಳಲು ₹75 ಸಾವಿರ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ ಎಂದರೆ, ಇಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಬಹುದು.
2020ರ ಸೆಪ್ಟೆಂಬರ್‌ನಲ್ಲಿ ಮತ್ತು 2021ರ ಏಪ್ರಿಲ್‌ನಲ್ಲಿ ಸುರಿದ ಭಾರಿ ಮಳೆಗೆ ಇಲ್ಲಿನ ಅನೇಕ ಮನೆಗಳು ಜಲಾವೃತವಾಗಿದ್ದವು. ಗುರುದತ್ತ ಬಡಾವಣೆಯಲ್ಲಿ ತಡೆಗೋಡೆಯೇ ಕೊಚ್ಚಿ ಹೋಗಿತ್ತು. ಕಾರು, ಬೈಕುಗಳು ರಸ್ತೆಯಲ್ಲಿ ತೇಲಿ ಹೋಗಿದ್ದವು. ಬೆಲೆಬಾಳುವ ಪೀಠೋಪಕರಣಗಳು, ಯಂತ್ರೋಪಕರಣಗಳಿಗೆ ಹಾನಿಯಾಗಿತ್ತು. ಈ ಪೈಕಿ, ಕೆಲವು ಮನೆಗಳಿಗೆ ತಲಾ ₹25 ಸಾವಿರ ಪರಿಹಾರ ನೀಡಿದ ಬಿಬಿಎಂಪಿ, ಬಹುತೇಕ ಮನೆಗಳತ್ತ ತಿರುಗಿಯೂ ನೋಡಿಲ್ಲ.
ಅರೆಬರೆ ಕಾಮಗಾರಿ: ಕಳೆದ ಬಾರಿಯ ಹಾನಿಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು, ಈ ವಾರ್ಡ್‌ನಲ್ಲಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವುದು, ಮಳೆ ನೀರು ಸರಾಗವಾಗಿ ಹರಿಯಲು ಮಳೆನೀರುಗಾಲುವೆ, ದೊಡ್ಡ ಚರಂಡಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಆದರೆ, ಈ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದ್ದು, ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಚಿಕ್ಕದಾಗಿರುವ ರಸ್ತೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಬಡಾವಣೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆಯನ್ನೂ ಉಂಟು ಮಾಡಿದೆ.
ವಾರ್ಡ್ ಸಂಖ್ಯೆ 161ರಲ್ಲಿರುವ ಪ್ರಮೋದ್ ಬಡಾವಣೆಯ ಕಡೆಯಲ್ಲಿನ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ, ಕಾಲುವೆ ಪಕ್ಕದಲ್ಲಿರುವ ಎಲ್ಲ ಮನೆಗಳಿಗೆ ಈ ಗೋಡೆ ರಕ್ಷಣೆ ಒದಗಿಸುವುದಿಲ್ಲ. ಗೋಡೆಯನ್ನು ಅರ್ಧದವರೆಗೆ ಮಾತ್ರ ನಿರ್ಮಿಸಿದ್ದು, ಜೋರು ಮಳೆ ಸುರಿದರೆ ಇಲ್ಲಿನ ಮನೆಗಳಿಗೆ ಮತ್ತೆ ಹಾನಿಯಾಗುವುದು ನಿಶ್ಚಿತ.
‘ವಿಶಾಲವಾಗಿರುವ ರಾಜಕಾಲುವೆ, ಕೆಲವು ಪ್ರಭಾವಿಗಳು ಇರುವ ಮನೆ, ಕಲ್ಯಾಣಮಂಟಪಗಳು ಇದ್ದ ಕಡೆ ಇದ್ದಕ್ಕಿದ್ದಂತೆ ಸುಮಾರು 15 ಅಡಿಯಷ್ಟು ಕಡಿತವಾಗಿದೆ. ರಾಜಕಾಲುವೆಗಿಂತ ತಗ್ಗಿನ ಪ್ರದೇಶದಲ್ಲಿ ಒಳಚರಂಡಿ ನಿರ್ಮಿಸಿದ್ದು, ಕಾಲುವೆಗೆ ಸರಾಗವಾಗಿ ಸಾಗದ ನೀರು ತುಂಬಿ, ಒಳಚರಂಡಿಗೆ ಬರುತ್ತಿದೆ. ಒಳಚರಂಡಿಯೂ ತುಂಬಿದರೆ ಆ ನೀರು ಸೀದಾ ಮನೆಗೆ ನುಗ್ಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಿವಾಸಿಯೊಬ್ಬರು ಹೇಳಿದರು.
‘ನನಗೆ 14 ವರ್ಷದ ಮಗನಿದ್ದಾನೆ. ರಾತ್ರಿಯ ವೇಳೆ ಮಳೆ ಸುರಿಯಲು ಆರಂಭಿಸಿದರೆ ಸಾಕು ಇದ್ದಕ್ಕಿದ್ದಂತೆ ಅವನು ಬೆವರತೊಡಗುತ್ತಾನೆ. ಅಷ್ಟು ಆತಂಕದಲ್ಲಿ ನಾವು ಸಮಯ ಕಳೆಯಬೇಕಾಗಿದೆ’ ಎಂದು ಅವರು ಹೇಳಿದರು.
‘ಮಳೆಗಾಲ ಬರುತ್ತಿದ್ದಂತೆ ಹಲವರು ಮನೆಗಳನ್ನು ಖಾಲಿ ಮಾಡುತ್ತಾರೆ. ಅನಿವಾರ್ಯವಾಗಿ ನಾವು ಈ ಪ್ರದೇಶದಲ್ಲಿ ಇರಬೇಕಾಗಿದೆ’ ಎಂದು ಮತ್ತೊಬ್ಬ ನಿವಾಸಿ ಅಳಲು ತೋಡಿಕೊಂಡರು.
ಮುಂದುವರಿದ ನಿರ್ಲಕ್ಷ್ಯ: ಹೊಸಕೆರೆಹಳ್ಳಿಯು ಪದ್ಮನಾಭನಗರ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೂ, ಕ್ಷೇತ್ರದ ಅಂಚಿನಲ್ಲಿ ಇದೆ. ರಾಜಕಾಲುವೆಯ ಒಂದು ಬದಿ ಪದ್ಮನಾಭನಗರ ಕ್ಷೇತ್ರದಲ್ಲಿದ್ದರೆ, ಮತ್ತೊಂದು ತುದಿ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಸೇರಿದೆ. ಎರಡೂ ಕ್ಷೇತ್ರದ ಶಾಸಕರ ನಡುವೆ ‘ಹೊಣೆ ವರ್ಗಾವಣೆ’ ಆಗುತ್ತಿರುವುದರಿಂದಲೂ ರಾಜಕಾಲುವೆ ಕಾಮಗಾರಿ ಸೇರಿದಂತೆ ಯಾವುದೇ ಕಾರ್ಯಗಳು ಸಕಾಲದಲ್ಲಿ ಮುಗಿಯುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ನೀರು ಸೋರಿಕೆ ನಿರೋಧಕ ಬಾಗಿಲು!
ಮಳೆ ನೀರು ಮನೆಯೊಳಗೆ ನುಗ್ಗುವುದರಿಂದ ಅಪಾರ ಹಾನಿ ಎದುರಿಸಿದ್ದ ಪ್ರಮೋದ್ ಬಡಾವಣೆಯ ನಿವಾಸಿ, ವಕೀಲರಾದ ದೀಪಕ್ ಹೊಸ ಉಪಾಯವನ್ನೇ ಮಾಡಿದ್ದಾರೆ. ಮನೆಯ ಗೇಟ್ ಹಾಗೂ ಮನೆಯ ಬಾಗಿಲಿನ ನಡುವೆ, ನೀರು ಸೋರಿಕೆ ನಿರೋಧಕ (ವಾಟರ್ ಪ್ರೂಫ್) ಗೇಟ್ ಅಳವಡಿಸಿದ್ದಾರೆ.
ಹಡಗಿನೊಳಗೆ ನೀರು ನುಗ್ಗದಿರಲು ಅಳವಡಿಸುವ ಬಾಗಿಲನ್ನು ಮುಂಬೈನಿಂದ ತರಿಸಿದ್ದು, ಇದಕ್ಕಾಗಿ ₹75 ಸಾವಿರ ಖರ್ಚು ಮಾಡಿದ್ದಾರೆ. 6.2 ಅಡಿ ಎತ್ತರದ ಈ ಬಾಗಿಲನ್ನು ಹಾಕಿಬಿಟ್ಟರೆ ಒಂದು ಹನಿ ನೀರೂ ಒಳನುಗ್ಗುವುದಿಲ್ಲ.
‘ಜೋರು ಮಳೆ ಸುರಿದಾಗಲೆಲ್ಲ ನೀರು ಮನೆಯೊಳಗೆ ಬಂದು ಪೀಠೋಪಕರಣಗಳೆಲ್ಲ ಹಾಳಾಗುತ್ತಿದ್ದವು. ಅನಿವಾರ್ಯವಾಗಿ ಈ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು’ ಎಂದು ದೀಪಕ್ ಹೇಳಿದರು.
‘ಕೋವಿಡ್ ಕಾರಣದಿಂದ ವಿಳಂಬ’
‘ಪ್ರಮೋದ್ ಬಡಾವಣೆಯಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಅರೆಬರೆಯಾಗಿಲ್ಲ. ₹1ಕೋಟಿ ಅನುದಾನ ಬಿಡುಗಡೆಯಾಗಿತ್ತು. ಅದಕ್ಕೆ ಆಗುವಷ್ಟು ತಡೆಗೋಡೆ ನಿರ್ಮಿಸಲಾಗಿದೆ. ಇನ್ನೂ 200 ಮೀಟರ್‌ನಷ್ಟು ಗೋಡೆ ಕಟ್ಟಬೇಕಾಗಿದೆ. ಇದಕ್ಕಾಗಿ ₹5 ಕೋಟಿ ಅನುದಾನ ಅಗತ್ಯವಿದೆ ಎಂದು ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಚರಂಡಿ ನೀರು ಸರಾಗವಾಗಿ ಹೋಗಲು, ವಾಲ್ವ್ ಮತ್ತು ಪೈಪ್‌ಗಳನ್ನು ಹಾಕಿ ಸರಿಪಡಿಸಲಾಗುವುದು. ರಾಜಕಾಲುವೆಗೆ ನೀರು ಸೇರುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದೂ ಅವರು ಹೇಳಿದರು.
‘ಗುರುದತ್ತ ಬಡಾವಣೆ ಮತ್ತು ದತ್ತಾತ್ರೇಯ ಬಡಾವಣೆ ವ್ಯಾಪ್ತಿಯಲ್ಲಿ ಮಳೆನೀರುಗಾಲುವೆ ಮತ್ತು ದೊಡ್ಡ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕ್ರೇಟಿಂಗ್ ಅಳವಡಿಸಲಾಗುತ್ತಿದೆ. ಕೋವಿಡ್ ಇದ್ದುದರಿಂದ ಕಾರ್ಮಿಕರು ಸಿಗದೆ ಕಾಮಗಾರಿ ವಿಳಂಬವಾಗಿದೆ. ಎಲ್ಲರಿಗೂ ಅನುಕೂಲವಾಗುವ ಕೆಲಸ ನಡೆಯುತ್ತಿದ್ದಾಗ, ಸಂಚಾರ ದಟ್ಟಣೆ ಸೇರಿದಂತೆ ಬೇರೆ ಅನಾನುಕೂಲಗಳು ಆಗುವುದು ಸಹಜ’ ಎಂದು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ಹೇಳಿದರು.
‘ಈ ಕಾಮಗಾರಿಗೆ ಒದಗಿಸಿದ ಅನುದಾನ ಕಡಿಮೆ ಇತ್ತು. ಮುಖ್ಯಮಂತ್ರಿಯವರ ಸೂಚನೆಯಂತೆ ಬೇರೆ ಯೋಜನೆಯ ಹಣವನ್ನು ಇದಕ್ಕೆ ನೀಡಿದ್ದು, ಅಂದಾಜು ₹3 ಕೋಟಿ ಅನುದಾನ ಒದಗಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
***
ರಾಜಕಾಲುವೆಗೆ ತಡೆಗೋಡೆ ಕಟ್ಟಿರುವುದರಿಂದ ನೀರು ನುಗ್ಗುವುದು ತಪ್ಪಬಹುದು. ಆದರೆ, ಚರಂಡಿ ಮತ್ತು ಮೋರಿಗಳನ್ನು ಮುಚ್ಚಿಬಿಟ್ಟಿದ್ದಾರೆ. ಅದನ್ನು ಸರಿ ಮಾಡಿಸಬೇಕು
- ಅಣ್ಣೇಗೌಡ, ಪ್ರಮೋದ್ ಬಡಾವಣೆ ನಿವಾಸಿ
ಮಳೆ ನೀರು ರಾಜಕಾಲುವೆಯನ್ನು ಸರಾಗವಾಗಿ ಸೇರುವಂತೆ ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಈ ಕಾಮಗಾರಿ ಆದಷ್ಟು ಬೇಗ ಮುಗಿದರೆ ಅನುಕೂಲವಾಗುತ್ತದೆ
- ಜೆ. ಚಂದ್ರಶೇಖರ್, ಗುರುದತ್ತ ಬಡಾವಣೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.