ಬೆಂಗಳೂರು: ರಾಜ್ಯ ಸರ್ಕಾರವು ‘ಯಶಸ್ವಿನಿ’ ಯೋಜನೆಯಡಿ 200ಕ್ಕೂ ಅಧಿಕ ಚಿಕಿತ್ಸೆಗಳ ದರವನ್ನು ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಯೋಜನೆಯಡಿ ನೋಂದಣಿಗೆ ಖಾಸಗಿ ಆಸ್ಪತ್ರೆಗಳು ಒಲವು ತೋರುತ್ತಿದ್ದು, ಆಸ್ಪತ್ರೆಗಳ ಜಾಲ ರಾಜ್ಯದಾದ್ಯಂತ ವಿಸ್ತರಣೆಯಾಗುತ್ತಿದೆ.
ಸಹಕಾರ ಸಂಘದ ಸದಸ್ಯರು ಹಾಗೂ ಅವರ ಕುಟಂಬದ ಸದಸ್ಯರ ಹಿತದೃಷ್ಟಿಯಿಂದ ಸರ್ಕಾರವು 2023ರ ಜನವರಿಯಲ್ಲಿ ‘ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್’ ಮೂಲಕ ಈ ಯೋಜನೆಗೆ ಮರುಚಾಲನೆ ನೀಡಿತ್ತು. ಆ ವೇಳೆ ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿರುವ ಚಿಕಿತ್ಸೆಗಳು ಹಾಗೂ ದರ ಪಟ್ಟಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಆದರೆ, ಚಿಕಿತ್ಸಾ ಪ್ಯಾಕೇಜ್ ದರ ಕಡಿಮೆ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ನೋಂದಣಿಗೆ ನಿರಾಸಕ್ತಿ ತೋರಿದ್ದವು. ಇದರಿಂದಾಗಿ ಸರ್ಕಾರವು ಹಲವು ಚಿಕಿತ್ಸೆಗಳ ದರವನ್ನು ಪರಿಷ್ಕರಿಸಿ, ಶೇ 300ರವರೆಗೂ ದರ ಹೆಚ್ಚಳ ಮಾಡಿದೆ. ಪರಿಣಾಮ ಯೋಜನೆ ಪ್ರಾರಂಭವಾದಾಗ 370 ಇದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ, ಈಗ 600ರ ಗಡಿ ದಾಟಿದೆ.
ಸಹಕಾರಿ ಇಲಾಖೆಯ ಮೂಲಕ 2003ರಲ್ಲಿ ಆರಂಭಗೊಂಡಿದ್ದ ಈ ಯೋಜನೆಯನ್ನು 2018ರ ಮೇ 31ರಂದು ಸ್ಥಗಿತಗೊಳಿಸಿ, ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿತ್ತು. ಆದರೆ, ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಎಪಿಎಲ್ ಕುಟುಂಬದ ಸದಸ್ಯರಿಗೆ ಶೇ 30 ರಷ್ಟು ಚಿಕಿತ್ಸಾ ವೆಚ್ಚವನ್ನು ಮಾತ್ರ ಪಡೆಯಲು ಅವಕಾಶವಿತ್ತು. ಅದು ಕೂಡ ಸರ್ಕಾರಿ ಆಸ್ಪತ್ರೆಗಳಿಗೆ ಮೊದಲು ದಾಖಲಾಗಿ, ಅಲ್ಲಿ ಚಿಕಿತ್ಸೆ ಲಭ್ಯವಿರದಿದ್ದಲ್ಲಿ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಶಿಫಾರಸು ಆಧಾರದಲ್ಲಿ ತೆರಳಬೇಕಾಗಿತ್ತು. ಇದರಿಂದಾಗಿ ಯೋಜನೆಯಡಿ ಚಿಕಿತ್ಸೆ ತೊಡಕಾಗಿತ್ತು. ಇದನ್ನು ಮನಗಂಡ ಸರ್ಕಾರ, ಯಶಸ್ವಿನಿ ಯೋಜನೆಯನ್ನು ಮರುಜಾರಿ ಮಾಡಿದೆ.
ಯೋಜನೆಗೆ ಹೋಲಿಕೆ: ‘ಯಶಸ್ವಿನಿ’ ಯೋಜನೆಯ ದರ ಪರಿಷ್ಕರಣೆ ವೇಳೆ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯ ದರ ಪಟ್ಟಿಯನ್ನೂ ಪರಿಗಣಿಸಿ, ಎರಡೂ ಯೋಜನೆಯ ಚಿಕಿತ್ಸಾ ಪ್ಯಾಕೇಜ್‌ಗಳ ಹೋಲಿಕೆ ಮಾಡಲಾಗಿದೆ. ಯಾವ ಯೋಜನೆಯಲ್ಲಿ ಚಿಕಿತ್ಸಾ ಪ್ಯಾಕೇಜ್ ದರ ಗರಿಷ್ಠ ಇದೆಯೋ ಅದನ್ನು ಉಳಿಸಿಕೊಳ್ಳಲಾಗಿದೆ. ಇದರ ಜತೆಗೆ ‘ಸಿಸೇರಿಯನ್ ಹೆರಿಗೆ’, ‘ಮಿಟ್ರಲ್ ಕವಾಟ’ ಸರಿಪಡಿಸುವಿಕೆ ಶಸ್ತ್ರಚಿಕಿತ್ಸೆ, ಬೆನ್ನುಮೂಳೆ ಶಸ್ತ್ರಚಿಕಿತ್ಸೆ, ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಸೇರಿ ವಿವಿಧ ಶಸ್ತ್ರಚಿಕಿತ್ಸೆಗಳ ದರವನ್ನು ಪರಿಷ್ಕರಿಸಿ, ಹೆಚ್ಚಳ ಮಾಡಲಾಗಿದೆ.
‘ಯೋಜನೆಯಡಿ ಅಳವಡಿಸಿಕೊಂಡಿರುವ ಚಿಕಿತ್ಸೆಗಳ ಪ್ಯಾಕೇಜ್ ದರ ಕಡಿಮೆಯೆಂದು ಖಾಸಗಿ ಆಸ್ಪತ್ರೆಗಳ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯಿಂದ ಆಕ್ಷೇಪಗಳು ಬಂದಿದ್ದವು. ದರ ಪರಿಷ್ಕರಣೆ ಮಾಡುವಂತೆ ಇಲಾಖೆಯ ನಿಬಂಧಕರು ಹಾಗೂ ಯಶಸ್ವಿನಿ ಟ್ರಸ್ಟ್‌ಗೆ ಮನವಿ ಸಲ್ಲಿಸಿದ್ದರು. ಇದರಿಂದಾಗಿ ಕೆಲ ಚಿಕಿತ್ಸೆಗಳ ದರ ಪರಿಷ್ಕರಣೆ ಮಾಡಲಾಗಿತ್ತು. ಬಳಿಕ ಅನೇಕ ಆಸ್ಪತ್ರೆಗಳು ಯೋಜನೆಯಡಿ ಬಂದಿವೆ. ಇನ್ನಷ್ಟು ಆಸ್ಪತ್ರೆಗಳನ್ನು ಯೋಜನೆಯಡಿ ತರುವ ಪ್ರಯತ್ನ ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಸಹಕಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಅಂಕಿ–ಅಂಶಗಳು 637 ಯೋಜನೆಯಡಿ ನೋಂದಾಯಿತ ನೆಟ್ವರ್ಕ್ ಆಸ್ಪತ್ರೆಗಳು 602 ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು 2,128 ಯೋಜನೆಯಡಿ ಲಭ್ಯವಾಗುವ ಚಿಕಿತ್ಸೆಗಳು 206 ದರ ಪರಿಷ್ಕರಣೆಗೆ ಒಳಗಾದ ಚಿಕಿತ್ಸೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.