ಬೆಂಗಳೂರು: ‘ಆಸ್ಪತ್ರೆಗಳು ವಾಣಿಜ್ಯೀಕರಣಗೊಂಡಿದ್ದು, ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಿದ್ದಂತೆ ಹತ್ತಾರು ಪರೀಕ್ಷೆಗಳಿಗೆ ಸೂಚಿಸಲಾಗುತ್ತಿದೆ. ಇದರಿಂದ ಜನರಲ್ಲಿ ವೈದ್ಯರ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು.
ಕನಕಪುರ ರಸ್ತೆಯಲ್ಲಿ ಆರಂಭವಾಗಿರುವ ಧೀ ಆಸ್ಪತ್ರೆಯು ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
‘ಲಾಭ–ನಷ್ಟದ ಲೆಕ್ಕಾಚಾರ ಹಾಕುವ ಖಾಸಗಿ ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೇರಿ ವಿವಿಧ ಪರೀಕ್ಷೆ ಹಾಗೂ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ವೈದ್ಯರಿಗೆ ಗುರಿ ನೀಡುತ್ತಿವೆ. ವೈದ್ಯರಲ್ಲಿಯಲ್ಲಿಯೂ ವ್ಯಾಪಾರಿ ಮನೋಭಾವ ಮೂಡುತ್ತಿದೆ. ಇದು ವೈದ್ಯಕೀಯ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ವೈದ್ಯರಾದವರು ಸೇವಾ ಮನೋಭಾವ ರೂಢಿಸಿಕೊಂಡು, ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು’ ಎಂದು ಹೇಳಿದರು.
‘ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಹಾಗೂ ವಿವಿಧ ವ್ಯಸನಗಳಿಂದ ಅಧಿಕ ರಕ್ತದೊತ್ತಡ, ಮಧುಮೇಹದಂತಹ ಅನಾರೋಗ್ಯ ಸಮಸ್ಯೆಗಳು ಹೆಚ್ಚಿನವರನ್ನು ಕಾಡಲಾರಂಭಿಸಿವೆ. ಆರೋಗ್ಯ ಕೆಡುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ‘ಭಾರತೀಯ ಪರಂಪರೆಯಲ್ಲಿ ವೈದ್ಯರನ್ನು ದೇವರಂತೆ ಕಾಣಲಾಗುತ್ತದೆ. ವೈದ್ಯರಾದವರು ಮಾತೃ ಹೃದಯ ಹೊಂದಿರಬೇಕು. ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಚಂದ್ರಶೇಖರ್ ಚಿಕ್ಕಮುನಿಯಪ್ಪ ಮಾತನಾಡಿ, ‘ವಿದೇಶಗಳಲ್ಲಿ ಕಾರ್ಯನಿರ್ವಹಿಸಿ, ತಾಯ್ನಾಡಿನ ಸೆಳೆತದಿಂದ ಇಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ರೋಟರಿ ಸಂಸ್ಥೆಯ ನೆರವಿನಿಂದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈಗಾಗಲೇ ನೂರಕ್ಕೂ ಅಧಿಕ ಮಂದಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.