ಬೆಂಗಳೂರು: ನಗರದಲ್ಲಿ ಬಿಸಿಲ ಬೇಗೆಗೆ ಜಲಮೂಲಗಳು ಬರಿದಾಗಿರುವುದರಿಂದ ಪ್ರಾಣಿ–ಪಕ್ಷಿಗಳು ಹನಿ ನೀರಿಗೂ ಪರದಾಡುತ್ತಿವೆ. ದಾಹ ನೀಗಿಸಿಕೊಳ್ಳಲು ನೀರು ಸಿಗದೇ ಅಸ್ವಸ್ಥಗೊಳ್ಳುತ್ತಿರುವ ಪಕ್ಷಿಗಳು, ರಸ್ತೆ ಸೇರಿದಂತೆ ಎಲ್ಲೆಂದರೆಲ್ಲಿ ಬೀಳುತ್ತಿವೆ.
ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮಳೆ ಬರದಿದ್ದರಿಂದ ವಾತಾವರದಲ್ಲಿ ಬಿಸಿ ಗಾಳಿ ಹೆಚ್ಚಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ನಗರದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಉಷ್ಣಾಂಶ ಹೆಚ್ಚಳದಿಂದ ಪ್ರಾಣಿ–ಪಕ್ಷಿಗಳು ನೀರಿಗಾಗಿ ಅಲೆದಾಡಿ, ಅಸ್ವಸ್ಥಗೊಳ್ಳುತ್ತಿವೆ. ಇದರಿಂದಾಗಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಘ–ಸಂಸ್ಥೆಗಳಿಗೆ ಪ್ರತಿನಿತ್ಯ ನೂರಕ್ಕೂ ಅಧಿಕ ದೂರವಾಣಿ ಕರೆಗಳು ಬರುತ್ತಿವೆ.
ನಗರದ ಕೆಲವೆಡೆ ಮಡಕೆ, ಪ್ಲಾಸ್ಟಿಕ್ ಟ್ರೇಗಳಂತಹವುಗಳಲ್ಲಿ ನೀರು ಇರಿಸಿದ್ದರೂ ನಿಯಮಿತವಾಗಿ ಆ ನೀರನ್ನು ಬದಲಾಯಿಸದಿದ್ದರಿಂದ ಪಾರಿವಾಳ ಸೇರಿ ವಿವಿಧ ಪಕ್ಷಿಗಳಿಗೆ ಅಗತ್ಯ ನೀರು ಸಿಗದಂತಾಗಿದೆ. ಇನ್ನೂ ಕೆಲವೆಡೆ ಪಕ್ಷಿಗಳು ಕಿರಿದಾದ ಮಡಕೆಗಳಲ್ಲಿ ನೀರು ಕುಡಿಯುವಾಗ ಬಿದ್ದು ಅಸ್ವಸ್ಥಗೊಳ್ಳುತ್ತಿವೆ. ಈ ಅವಧಿಯಲ್ಲಿ ಪಕ್ಷಿಗಳು ಹೆಚ್ಚಾಗಿ ಮರಿಗಳಿಗೆ ಜನ್ಮ ನೀಡುತ್ತಿದ್ದು, ಮರಿಗಳು ಹಾರುವ ವೇಳೆ ಅಸ್ವಸ್ಥಗೊಂಡು ಬೀಳುತ್ತಿವೆ.
‘ಅತಿಯಾದ ತಾಪಮಾನದಿಂದ ಪ್ರಾಣಿ–ಪಕ್ಷಿಗಳು ತತ್ತರಿಸಿವೆ. ನೀರು ಸಿಗದೆ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ನಗರದ ವಿವಿಧೆಡೆ ಅಲ್ಲಲ್ಲಿ ನೀರಿನ ಪಾತ್ರೆಗಳನ್ನು ಇರಿಸಿ, ಎರಡು ದಿನಗಳಿಗೊಮ್ಮೆ ನೀರನ್ನು ಬದಲಾಯಿಸಿದಲ್ಲಿ ಪ್ರಾಣಿ–ಪಕ್ಷಿಗಳನ್ನು ರಕ್ಷಿಸಬಹುದು’ ಎನ್ನುತ್ತಾರೆ ವನ್ಯಜೀವಿ ಸಂರಕ್ಷರು.
ಜೀವನ ಕ್ರಮದಲ್ಲಿ ವ್ಯತ್ಯಾಸ: ಗಿಡ–ಮರಗಳ ನಾಶದಿಂದಾಗಿ ನೀರು ಹಾಗೂ ಆಹಾರದ ಸಮಸ್ಯೆಯಿಂದ ಪ್ರಾಣಿ–ಪಕ್ಷಿಗಳ ಜೀವನ ಕ್ರಮದಲ್ಲಿ ವ್ಯತ್ಯಾಸವಾಗುತ್ತಿದೆ. ನಗರದ ಪ್ರಮುಖ ರಸ್ತೆ ಸೇರಿ ವಿವಿಧೆಡೆ ಇರಿಸಲಾದ ಪಾತ್ರೆಗಳಲ್ಲಿನ ನೀರು ಕುಡಿಯಲು ಪಕ್ಷಿಗಳು ಗುಂಪು ಗುಂಪಾಗಿ ಬಂದು, ವಾಹನಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳೂ ವರದಿಯಾಗುತ್ತಿವೆ. ಬೀದಿ ನಾಯಿಗಳು, ದನ–ಕರುಗಳು ಹಾಗೂ ಮಂಗಗಳಿಗೂ ಈ ಬೇಸಿಗೆ ಸಂಕಷ್ಟವನ್ನು ತಂದೊಡ್ಡಿದೆ.
‘ನಗರದಲ್ಲಿ ಪಕ್ಷಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರತಿನಿತ್ಯ ಸರಾಸರಿ 150 ದೂರವಾಣಿ ಕರೆಗಳು ಬರುತ್ತಿವೆ. ಈ ಅವಧಿಯಲ್ಲಿ ಹದ್ದುಗಳು ಹೆಚ್ಚಾಗಿ ಮರಿ ಮಾಡಿವೆ. ಶಾಖ ತಡೆಯಲಾಗದೆ ಆ ಮರಿಗಳು ಕೆಳಗಡೆ ಬೀಳುತ್ತಿವೆ. ಅಸ್ವಸ್ಥಗೊಂಡ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿವೆ. ಮಾನವ ಚಟುವಟಿಕೆಗಳಿಂದ ನಗರದ ಪರಿಸರಕ್ಕೆ ಹಾನಿಯಾಗಿ, ಪ್ರಾಣಿ–ಪಕ್ಷಿಗಳ ಜೀವನ ಕ್ರಮದಲ್ಲಿ ವ್ಯತ್ಯಾಸವಾಗಿದೆ. ಆದ್ದರಿಂದ ಜನರು ಈ ಅವಧಿಯಲ್ಲಿ ಪ್ರಾಣಿ–ಪಕ್ಷಿಗಳಿಗೆ ನೆರವಾಗಬೇಕು’ ಎಂದು ಬೆಂಗಳೂರು ನಗರ ಜಿಲ್ಲೆಯ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್ ತಿಳಿಸಿದರು.
ಪೀಪಲ್ ಫಾರ್ ಅನಿಮಲ್ ಸಂಸ್ಥೆ ಪ್ರಾಣಿ–ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದೆ. ‘ಆಪರೇಷನ್ ಕ್ವೆಂಚ್’ ಶೀರ್ಷಿಕೆಯಡಿ ವನ್ಯಜೀವಿಗಳ ದಾಹ ತಣಿಸಲು ಶ್ರಮಿಸುವ ಜತೆಗೆ ನೀರನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ತುರಹಳ್ಳಿ ಅರಣ್ಯ ಹಾಗೂ ಬಿಎಂ ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ನೀರು ಒದಗಿಸಲು ಕ್ರಮವಾಗಿ 15 ಹಾಗೂ 10 ಸಿಮೆಂಟ್ ರಿಂಗ್‌ಗಳನ್ನು ಜೋಡಿಸಿದೆ. ಇವುಗಳಿಗೆ ಪ್ರತಿನಿತ್ಯ ಎರಡು ಟ್ಯಾಂಕರ್ ಮೂಲಕ ಸಂಸ್ಥೆಯೇ ನೀರನ್ನು ತುಂಬಿಸುತ್ತಿದೆ. ಪಕ್ಷಿಗಳು ಹಾಗೂ ನಾಯಿಗಳಿಗೆ ಅಗತ್ಯ ನೀರನ್ನು ಒದಗಿಸಲು ಸಂಸ್ಥೆಯು ಉಚಿತವಾಗಿ ಬೌಲ್‌ಗಳನ್ನೂ ವಿತರಿಸುತ್ತಿದೆ. ‘ಏಪ್ರಿಲ್ ತಿಂಗಳಲ್ಲಿ ಸುಮಾರು 500 ವನ್ಯಜೀವಿಗಳನ್ನು ಸಂರಕ್ಷಿಸಿದ್ದೇವೆ. ಇವುಗಳಲ್ಲಿ ಶೇ 60ರಷ್ಟು ವನ್ಯಜೀವಿಗಳು ನಿರ್ಜಲೀಕರಣಗೊಂಡಿದ್ದವು. ಬಿಸಿ ಗಾಳಿಗೆ ಪಕ್ಷಿಗಳೂ ಮರಗಳಿಂದ ಕೆಳಗೆ ಬೀಳುತ್ತಿವೆ. ಅವುಗಳಿಗೂ ನಾವು ನೆರವಾಗುತ್ತಿದ್ದೇವೆ. ಮಳೆ ಬರುವವರೆಗೂ ವನ್ಯಜೀವಿಗಳಿಗೆ ನೀರನ್ನು ಒದಗಿಸುತ್ತೇವೆ. ಜನರು ಸಹ ಸ್ವಯಂ ಪ್ರೇರಿತರಾಗಿ ನೀರನ್ನು ಒದಗಿಸುವ ಕಾರ್ಯ ಮಾಡಬೇಕು’ ಎಂದು ಪೀಪಲ್ ಫಾರ್ ಅನಿಮಲ್ (ಪಿಎಫ್ಎ) ವೈಡ್‌ಲೈಫ್ ಆಸ್ಪತ್ರೆಯ ಮುಖ್ಯ ಪಶುವೈದ್ಯ ಡಾ. ನವಾಜ್ ಶರೀಫ್ ತಿಳಿಸಿದರು.
ಪ್ರಾಣಿ–ಪಕ್ಷಿಗಳಿಗೆ ಅಗಲವಾದ ಮಡಕೆಗಳಲ್ಲಿ ಅಲ್ಲಲ್ಲಿ ನೀರನ್ನು ಇಡಬೇಕು
ಮಡಕೆಗಳ ಮೇಲ್ಭಾಗದಲ್ಲಿ ಅಡ್ಡಲಾಗಿ ಎರಡು ಕೋಲನ್ನು ಹಾಕಬೇಕು. ಇಲ್ಲವಾದಲ್ಲಿ ನೀರು ಕುಡಿಯುವ ವೇಳೆ ಪಕ್ಷಿಗಳು ಕೆಳಗಡೆ ಬೀಳುವ ಸಾಧ್ಯತೆ ಇರುತ್ತದೆ. ಕೋಲು ಇದ್ದಲ್ಲಿ ಅದರ ನೆರವಿನಿಂದ ಮಡಕೆಯ ತಳದಲ್ಲಿನ ನೀರನ್ನೂ ಕುಡಿಯಬಹುದಾಗಿದೆ
ಪ್ರತಿ ಎರಡು ದಿನಕ್ಕೆ ಒಮ್ಮೆ ಮಡಕೆಯಲ್ಲಿನ ನೀರನ್ನು ಬದಲಾಯಿಸಬೇಕು
ನೀರನ್ನು ಇಡಲು ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಯನ್ನು ಬಳಸಬಾರದು. ಈ ಪಾತ್ರೆಗಳು ಸದ್ದು ಬರುವುದರಿಂದ ಪಕ್ಷಿಗಳು ಭಯಬೀಳುವ ಸಾಧ್ಯತೆ ಇರುತ್ತದೆ
ವನ್ಯಜೀವಿ ಸಂರಕ್ಷಣೆಗೆ ಯಾರನ್ನು ಸಂಪರ್ಕಿಸಬೇಕು?
ಪ್ರಸನ್ನ ಕುಮಾರ್ (ವನ್ಯಜೀವಿ ಸಂರಕ್ಷಕ); 9902794711 ಪೀಪಲ್ ಫಾರ್ ಅನಿಮಲ್ (ಪಿಎಫ್ಎ); 9900025370
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.