ADVERTISEMENT

ಬೆಂಗಳೂರು | ಹೋಟೆಲ್‌ ಮಾಲೀಕನ ಕೊಲೆ: ಫೈನಾನ್ಸಿಯರ್‌ ಬಂಧನ

ಮನೆ ನಿರ್ಮಾಣ, ಹೋಟೆಲ್ ಅಭಿವೃದ್ಧಿಗೆ ₹65 ಲಕ್ಷ ಸಾಲ: ಮರು ಪಾವತಿ ವಿಳಂಬ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:17 IST
Last Updated 9 ಜುಲೈ 2024, 15:17 IST
ಕೊಲೆಯಾದ ಕುಮಾರ್‌ 
ಕೊಲೆಯಾದ ಕುಮಾರ್‌    

ಬೆಂಗಳೂರು: ಸಾಲ ವಾಪಸ್ ನೀಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹೋಟೆಲ್‌ ಮಾಲೀಕರೊಬ್ಬನ್ನು ಕೊಲೆ ಮಾಡಿ ಪರಾರಿಯಾಗಿದ್ದ ಫೈನಾನ್ಸಿಯರ್‌ ಅನ್ನು ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಂಪುರದ ಸಾಯಿಬಾಬಾ ನಗರದ ನಿವಾಸಿ ಕುಮಾರ್(38) ಕೊಲೆಯಾದವರು. ಕೃತ್ಯ ಎಸಗಿದ ಆರೋಪಿದಡಿ ದಯಾಳ್(46) ಎಂಬುವವರನ್ನು ಘಟನೆ ನಡೆದ ನಾಲ್ಕು ತಾಸಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಂಗಳವಾರ ಮುಂಜಾನೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ಲಿ ಕೊಲೆ ಮಾಡಿ ಆರೋಪಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

ಕೊಲೆಯಾದ ಕುಮಾರ್ ಹಾಗೂ ಆರೋಪಿ 15 ವರ್ಷದಿಂದ ಸ್ನೇಹಿತರಾಗಿದ್ದರು. ದಯಾಳ್ ಅವರು ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದರೆ, ಕುಮಾರ್ ಮನೆ ಸಮೀಪದಲ್ಲೇ ಹೋಟೆಲ್ ನಡೆಸುತ್ತಿದ್ದರು. ಇಬ್ಬರೂ ಸಾಯಿಬಾಬಾ ನಗರದಲ್ಲೇ ಕುಟುಂಬ ಸಮೇತ ನೆಲೆಸಿದ್ದರು. ಸ್ನೇಹಿತನೇ ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದರಿಂದ ಕುಮಾರ್‌ ಅವರು ₹65 ಲಕ್ಷ ಸಾಲ ಪಡೆದುಕೊಂಡಿದ್ದರು. ಮನೆ ನಿರ್ಮಾಣ, ಹೋಟೆಲ್ ಅಭಿವೃದ್ಧಿಗೆ ಪಡೆದಿದ್ದ ಸಾಲವನ್ನು ವಾಪಸ್‌ ನೀಡಿರಲಿಲ್ಲ. ಸಾಲವನ್ನು ವಾಪಸ್‌ ನೀಡುವಂತೆ ದಯಾಳ್‌ ಅವರು ಆಗಾಗ್ಗೆ ಮನವಿ ಮಾಡುತ್ತಿದ್ದರು. ಸಾಲ ಮರುಪಾವತಿ ಅವಧಿಯನ್ನು ಕೊಲೆಯಾದ ವ್ಯಕ್ತಿ ಮುಂದೂಡುತ್ತಲೇ ಇದ್ದರು. ಇದೇ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದರು.

ಚಾಕು ಖರೀದಿಸಿದ್ದ ಫೈನಾನ್ಸಿಯರ್:

ಆರೋಪಿ ದಯಾಳ್‌ಗೆ ಸಾಲ ಕೊಟ್ಟವರು ಹಣ ಮರಳಿಸುವಂತೆ ಪೀಡಿಸುತ್ತಿದ್ದರು. ಅದರಿಂದ ಕೋಪಗೊಂಡಿದ್ದ ಆರೋಪಿ, ‘ಸಾಲಗಾರರ ಒತ್ತಡ ಹೆಚ್ಚಾಗಿದ್ದು, ಹಣ ವಾಪಸ್ ಕೊಡಲಿಲ್ಲವೆಂದರೆ ಸಮಸ್ಯೆ ಆಗಲಿದೆ’ ಎಂದು ಕುಮಾರ್‌ಗೆ ಎಚ್ಚರಿಸಿದ್ದರು. ಆಗಲೂ ಕುಮಾರ್, ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.

ಇದರಿಂದ ಇನ್ನಷ್ಟು ಆಕ್ರೋಶಗೊಂಡ ಆರೋಪಿ, ಕುಮಾರ್ ಅವರನ್ನು ಕೊಲೆ ಮಾಡಲು ನಿರ್ಧರಿಸಿ, ಸೋಮವಾರ ಮಧ್ಯಾಹ್ನವೇ ತರಕಾರಿ ಕತ್ತರಿಸುವ ಚಾಕು ಖರೀದಿಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿದ್ದ ಕುಮಾರ್‌ನನ್ನು ಜತೆಗೆ ಕರೆದೊಯ್ದು ರಾಜಾಜಿನಗರದ ರಾಮಮಂದಿರದ ಸಮೀಪದ ಬಾರ್‌ನಲ್ಲಿ ತಡರಾತ್ರಿವರೆಗೂ ಮದ್ಯ ಸೇವಿಸಿದ್ದರು. ಬಳಿಕ ಮುಂಜಾನೆ 2.30ರ ಸುಮಾರಿಗೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ಲಿ ಬರುವಾಗ ಕೊಲೆ ಮಾಡಿ ಪರಾರಿ ಆಗಿದ್ದರು ಎಂದು ಪೊಲೀಸರು ತಿಳಿಸಿದರು.

ಶ್ರೀರಾಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.