ADVERTISEMENT

ಶಿವಾಜಿನಗರ: ಸ್ವಚ್ಛತಾ ಸಿಬ್ಬಂದಿ ಕೋವಿಡ್‌ ಸೋಂಕು ಹರಡಿದ್ದು 30 ಮಂದಿಗೆ!

​ಪ್ರಜಾವಾಣಿ ವಾರ್ತೆ
Published 16 ಮೇ 2020, 19:50 IST
Last Updated 16 ಮೇ 2020, 19:50 IST
   

ಬೆಂಗಳೂರು: ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿರುವಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದಹರಡಿದ ಕೊರೊನಾ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

ಸೋಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ನಗರದ ಖಾಸಗಿ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಆತನಿಂದ ಇದೀಗ ಶಿವಾಜಿನಗರದ 39 ಮಂದಿಗೆ ಕೊರೊನಾ ಸೋಂಕು ಹರಡಿದೆ. ಒಟ್ಟು 105 ಮಂದಿ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಶುಕ್ರವಾರ 11 ಮಂದಿಯಲ್ಲಿ ಶನಿವಾರ 14 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

20 ಮಂದಿ ಪರೀಕ್ಷೆ: ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ 14 ಮತ್ತು ಪರೋಕ್ಷ ಸಂಪರ್ಕಿತ 91 ಜನರನ್ನು ಹಂತ ಹಂತವಾಗಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಶನಿವಾರ ಮತ್ತೆ 20 ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ.

ADVERTISEMENT

ಒಂದೇ ಕಟ್ಟಡದಲ್ಲಿ ಇರುವವರಿಗೆ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ, ರ್‍ಯಾಂಡಮ್‌ ಪದ್ಧತಿಯಲ್ಲಿ ಇತರರನ್ನು ಸೋಂಕು ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಶಿವಾಜಿನಗರ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿವಾಜಿನಗರದ ಜನ ಆತಂಕ ಬೇಡ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ‘ಶಿವಾಜಿನಗರದಲ್ಲಿ
ಸೋಂಕಿತನೊಂದಿಗೆ ಸಂಪರ್ಕದಲ್ಲಿ ಇರುವ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಸೋಂಕು ಸಮುದಾಯಕ್ಕೆ ಹರಡಿದೆ ಎಂದುಶಿವಾಜಿನಗರದ ನಿವಾಸಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ’ ಎಂದು ಹೇಳಿದ್ದಾರೆ.

68 ಮಂದಿಗೆ ಸೋಂಕು ಪರೀಕ್ಷೆ

ಪಾದರಾಯನಪುರದಲ್ಲಿ ಶನಿವಾರ 68 ಮಂದಿಯನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪಶ್ಚಿಮ ವಲಯ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಗುರುವಾರದಿಂದ ಇಡೀ ಪ್ರದೇಶದ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಗುರುವಾರ 11 ಮಂದಿ, ಶುಕ್ರವಾರ 15 ಮಂದಿ, ಶನಿವಾರ 38 ಜನ ಹಾಗೂ ಮೊಬೈಲ್ ಕ್ಲಿನಿಕ್ ಮೂಲಕ 30 ಜನ ಸೇರಿ ಒಟ್ಟು 68 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಾ ವರದಿಗೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಮಂಗಮ್ಮನ ಪಾಳ್ಯ: 29 ಮಂದಿ ಪರೀಕ್ಷೆಗೆ

ಇನ್ನು ಮಂಗಮ್ಮನಪಳ್ಯದಲ್ಲಿ ಶುಕ್ರವಾರ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಮತ್ತೆ 29 ಮಂದಿಯನ್ನು ರ್‍ಯಾಂಡಮ್‌ ಪದ್ಧತಿಯಲ್ಲಿ ಆಯ್ಕೆ ಮಾಡಿಕೊಂಡು ಗಂಟಲು ದ್ರವದ ಮಾದರಿ ಪಡೆದು ಕೊರೋನಾ ಸೋಂಕು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.