ADVERTISEMENT

ವಿಚ್ಛೇದನ ಹೆಚ್ಚಳಕ್ಕೆ ಕಡಿವಾಣ: ಆನಂದಮಯ ದಾಂಪತ್ಯಕ್ಕಾಗಿ ಹೀಗೊಂದು ಕಾರ್ಯಾಗಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2023, 14:38 IST
Last Updated 26 ಮೇ 2023, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ವಿವಾಹ ವಿಚ್ಛೇದನದ ಸಾಕಷ್ಟು ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಪತಿ ಪತ್ನಿಯರ ನಡುವಿನ ಸುದೀರ್ಘ ಕಾಲದ ಸಂಬಂಧಕ್ಕೆ ಹೊಂದಾಣಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ, ನವವಿವಾಹಿತರ ವೈವಾಹಿಕ ಬದುಕನ್ನು ಗಟ್ಟಿಗೊಳಿಸಲು ವಿನೂತನ ಕಾರ್ಯಾಗಾರವೊಂದನ್ನು ಬೆಂಗಳೂರಲ್ಲಿ ಏರ್ಪಡಿಸಲಾಗಿದೆ.

ದೀರ್ಘಾವಧಿಯ ಸುಖವಾದ ದಾಂಪತ್ಯದ ರಹಸ್ಯವೇನು? ವೈವಾಹಿಕ ಜೀವನದ ಏಳುಬೀಳುಗಳನ್ನು ಸುಲಭವಾಗಿ ನಿಭಾಯಿಸಲು ಸೂತ್ರಗಳೇನು? ವೈವಾಹಿಕ ಜೀವನದ ಯಶಸ್ಸಿಗೆ ಪೂರಕವಾಗುವ ಅಂಶಗಳು ಭಾರತೀಯ ಚಿಂತನೆಯಲ್ಲಿ ಸಿಗಬಹುದೇ? ನಿಮ್ಮ ಸಂಗಾತಿಯ ಜೊತೆ ಆನಂದಮಯ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ? ಎಂಬುದರ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಗುತ್ತದೆ.

ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ವಿವಾಹ ವಿಚ್ಛೇದನದ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವಿಶ್ವಸಂಸ್ಥೆಯ ವರದಿ (ಜಾಗತಿಕ ಮಹಿಳಾ ಅಭಿವೃದ್ಧಿ 2019-2020) ಹೇಳಿತ್ತು. ಜಾಗತಿಕ ವಿಚ್ಛೇದನ ಪ್ರಮಾಣದಲ್ಲಿ ಭಾರತದ ಪಾಲು ಶೇ.1.1 ಆದರೂ, ಇತ್ತೀಚಿನ ವರ್ಷಗಳಲ್ಲಿ ವಿಚ್ಛೇದನದ ಪ್ರಮಾಣ ಏರಿಕೆಯಾಗುತ್ತಿದೆ ಎಂಬುದು ಆತಂಕದ ವಿಚಾರ.

ADVERTISEMENT

ಈ ಹಿನ್ನೆಲೆಯಲ್ಲಿ, ಕೌಟುಂಬಿಕ ಮೌಲ್ಯಗಳನ್ನು ಕಾಪಾಡಿಕೊಂಡು, ವೈವಾಹಿಕ ಬದುಕನ್ನು ಸುಸೂತ್ರವಾಗಿಸಲು ನವ ವಿವಾಹಿತರಿಗೆ ಅರಿವು ಮೂಡಿಸುವ ಕಾರ್ಯಾಗಾರವೊಂದನ್ನು ಬೆಂಗಳೂರಿನ ಸಂಹತಿ ಫೌಂಡೇಶನ್ ಏರ್ಪಡಿಸಿದೆ. ಈ ಪ್ರತಿಷ್ಠಾನವು ಕೌಟುಂಬಿಕ ಮೌಲ್ಯಗಳ ರಕ್ಷಣೆ, ಹೆಚ್ಚುತ್ತಿರುವ ವಿಚ್ಛೇದನದ ಪ್ರಮಾಣಕ್ಕೆ ಕಡಿವಾಣ ಹಾಕುವ, ಮಾನಸಿಕ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

"ಆನಂದಮಯ ವೈವಾಹಿಕ ಜೀವನಕ್ಕಾಗಿ ಸುಭದ್ರ ಅಡಿಪಾಯ" ಎಂಬ ವಿಷಯದ ಕುರಿತು ಜೂನ್ 3 ರಂದು ಶನಿವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಜಯನಗರ ನಾಲ್ಕನೇ ಬ್ಲಾಕ್‌ನ ಯುವಪಥದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಡಾ. ಗುರುರಾಜ ಕರಜಗಿ, ಕುಟುಂಬ ಪ್ರಬೋಧನದ ಪೂರ್ವ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮನಃಶಾಸ್ತ್ರಜ್ಞೆ ಡಾ. ಪದ್ಮಶ್ರೀ ರಾವ್, ನ್ಯಾಯವಾದಿ ಕ್ಷಮಾ ನರಗುಂದ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಮದುವೆಯಾಗಿ ಮೂರು ವರ್ಷದೊಳಗಿನ ನವದಂಪತಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, ಹೆಸರು ನೋಂದಾಯಿಸಲು ಹಾಗೂ ಮಾಹಿತಿಗಾಗಿ www.Samhati.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.