ಬೆಂಗಳೂರು:‘ಕವಿ ಎಚ್.ಎಸ್.ಶಿವಪ್ರಕಾಶ್ ಅವರ ಕಾವ್ಯಗಳಲ್ಲಿ ಮಾತೃ ಹೃದಯದ ದನಿಯನ್ನು ಕಾಣಬಹುದು. ಕಾವ್ಯದಲ್ಲಿ ಅವರ ಒಟ್ಟು ಸಾಧನೆಯನ್ನು ಕನ್ನಡ ವಿಮರ್ಶಕ ಜಗತ್ತು ಸಂಪೂರ್ಣವಾಗಿ ವಿಶ್ಲೇಷಿಸುವ ಅಗತ್ಯವಿದೆ’ ಎಂದುವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.
ಸಮಾಜಮುಖಿ ಪ್ರಕಾಶನವು ಗಾಂಧಿಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಚ್.ಎಸ್.ಶಿವಪ್ರಕಾಶ್ ಅವರ ಸಮಗ್ರ ಕಾವ್ಯ ಚರ್ಚೆ ಮತ್ತು ‘ಸಮಾಜಮುಖಿ’ ವಾರ್ಷಿಕ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾಲ್ಕು ದಶಕಗಳಿಂದ ಕಾವ್ಯ ಕೃಷಿಯಲ್ಲಿ ತೊಡಗಿರುವ ಎಚ್.ಎಸ್.ಶಿವಪ್ರಕಾಶ್ ಅವರು ಕನ್ನಡದಲ್ಲಿ ಕಾವ್ಯ ರಚಿಸುವಾಗ ಬೇರೆ ಭಾಷಾ ಸಾಹಿತ್ಯಗಳನ್ನೂ ತಮ್ಮದಾಗಿಸಿಕೊಂಡವರು.ಕನ್ನಡದ ಶ್ರೇಷ್ಠ ಕವಿಗಳ ಸ್ಥಾನದಲ್ಲಿರುವ ಅವರನ್ನು ಯುಗದ ಕವಿ ಎಂದೂ ಕರೆಯಬಹುದು’ ಎಂದರು.
ಕವಿಎಚ್.ಎಸ್.ಶಿವಪ್ರಕಾಶ್,‘ಕಾವ್ಯ ಒಂದು ಥೆರಪಿ ಹಾಗೂ ಅಶರೀರ ರೂಪದ ಯಾತ್ರೆ. ನೀವು ವಿಶ್ವಯಾತ್ರೆ ಮಾಡದಿದ್ದರೂ ಪರವಾಗಿಲ್ಲ. ನಿಮ್ಮ ಕಾವ್ಯಗಳು ವಿಶ್ವಯಾತ್ರೆ ಮಾಡಬೇಕು’ ಎಂದು ಹೇಳಿದರು.
ಇಂಗ್ಲಿಷ್ ಪ್ರಾಧ್ಯಾಪಕ ಕಮಲಾಕರ ಕಡವೆ, ‘ಎಚ್.ಎಸ್.ಶಿವಪ್ರಕಾಶ್ ಅವರು ಬಹುಭಾಷಿಕ ಮನಸ್ಸಿನ ಕವಿ. ಭಾಷಾವಾರು ರಾಜ್ಯಗಳು ರಚನೆಯಾಗಿ ಹಲವು ದಶಕಗಳು ಕಳೆದರೂ ನಮ್ಮಲ್ಲಿನ ಬಹುಭಾಷಿಕತೆ ವಿಂಗಡಣೆಯಾಗಿಲ್ಲ ಎಂಬುದು ಅವರ ಕಾವ್ಯಗಳಿಂದ ತಿಳಿಯುತ್ತದೆ. ಅವುಆತ್ಮ ಪ್ರಾರ್ಥನೆಯಾಗಿದ್ದು, ಕೇವಲ ಸಾಹಿತ್ಯವಲ್ಲ’ ಎಂದರು.
ಕವಿ ಕೆ.ಸತ್ಯನಾರಾಯಣ,‘ಶಿವಪ್ರಕಾಶ್ ಅವರ ಕಾವ್ಯ ಪಾವಿತ್ರ್ಯವನ್ನು ನಿರಾಕರಿಸುವುದಿಲ್ಲ. ತಮ್ಮ ಕಾವ್ಯಕ್ಕೆ ಅಗತ್ಯವಾದ ಪಾವಿತ್ರ್ಯವನ್ನು ಆ ಸಂದರ್ಭಕ್ಕೆ ಅನುಗುಣವಾಗಿ ನೀಡಿರುತ್ತಾರೆ. ಪ್ರಾರ್ಥನಾ ಮನೋಭಾವದ ಕವಿಯಾದ ಅವರು, ಕಾವ್ಯಗಳಲ್ಲಿ ತಮ್ಮ ಬಗ್ಗೆ ಹಾಗೂ ನಮ್ಮ ಪರವಾಗಿಯೂ ಪ್ರಾರ್ಥಿಸಿಕೊಳ್ಳುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.