ಬೆಂಗಳೂರು: ಕಲಬುರ್ಗಿಯಲ್ಲಿ ಮುಂದಿನ ಫೆಬ್ರುವರಿ 5ರಿಂದ 7 ರ ವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆ ಆಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗೊ.ರು.ಚನ್ನಬಸಪ್ಪ, ಕುಂ.ವೀರಭದ್ರಪ್ಪ, ಸಾರಾ ಅಬೂಬಕರ್, ವೈದೇಹಿ ಸೇರಿದಂತೆ 10 ರಿಂದ 12 ಸಾಹಿತಿಗಳ ಹೆಸರು ಸಭೆಯಲ್ಲಿ ಪ್ರಸ್ತಾಪವಾದವು. ಆದರೆ ಅಂತಿಮವಾಗಿ ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಸಭೆಯ ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನ ವೇದಿಕೆ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಧಾನ ವೇದಿಕೆ ನಿರ್ಮಾಣವಾಗಲಿದ್ದು, ಸುಮಾರು 60 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಪ್ರಧಾನ ವೇದಿಕೆ ಜತೆಗೆ ಬಿ.ಆರ್.ಅಂಬೇಡ್ಕರ್ ಭವನ, ಮಹಾತ್ಮಗಾಂಧಿ ಭವನದಲ್ಲಿ ಸಮಾನಾಂತರ ವೇದಿಕೆ ಇರುತ್ತವೆ. ಸಮ್ಮೇಳನಕ್ಕೆ ಸುಮಾರು 1.50 ಲಕ್ಷ ಸಾಹಿತ್ಯಾಸಕ್ತರು ಭಾಗವಹಿಸುವ
ನಿರೀಕ್ಷೆ ಇದೆ ಎಂದು ವಿವರನೀಡಿದರು.
ಗೋಷ್ಠಿಗೆ ಸಮಿತಿ: ಸಮ್ಮೇಳನದ ವಿವಿಧ ಗೋಷ್ಠಿಗಳಿಗೆ ವಿಷಯ ಆಯ್ಕೆ ಮಾಡಲು ವಸಂತ ಕುಷ್ಟಗಿ, ಡಾ.ಎಚ್.ಎಲ್.ಪುಷ್ಪಾ ನೇತೃತ್ವದಲ್ಲಿ ಆರು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರು, ಗೋಷ್ಠಿಗೆ ವಿಷಯ ಆಯ್ಕೆ ಹಾಗೂ ವಿಷಯ ತಜ್ಞರನ್ನು ಆಯ್ಕೆ ಮಾಡಲಿದ್ದಾರೆ ಎಂದರು.
₹10 ಕೋಟಿ ವೆಚ್ಚ:ಮೂರು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ₹10ಕೋಟಿಯಿಂದ ₹12 ಕೋಟಿ ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಅಷ್ಟೂ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸರ್ಕಾರದಿಂದ ಹಣ ಕೊಡಿಸುವ ಭರವಸೆ ನೀಡಿದ್ದಾರೆ. ಸಮ್ಮೇಳನಕ್ಕೆ ಹಣದ ಕೊರತೆಯಾಗುವುದಿಲ್ಲ ಎಂದು ಹೇಳಿದರು. ಈ ಬಾರಿ 700 ಮಳಿಗೆ ನಿರ್ಮಿಸಲು ಉದ್ದೇಶಿಸಿದ್ದು, ಅದರಲ್ಲಿ ಪುಸ್ತಕಗಳ ಮಾರಾಟಕ್ಕೆ 500 ಮಳಿಗೆಗಳನ್ನು ಮೀಸಲಿಡಲಾಗುತ್ತದೆ. ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳಿಗೆ ಇಎಸ್‌ಐ ಆಸ್ಪತ್ರೆ, ಗುಲಬರ್ಗಾ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
‘ಕನ್ನಡ ತಾಯಿಯ ಆಶೀರ್ವಾದ’
ಬೆಂಗಳೂರು: ‘ಕನ್ನಡ ಸಮುದಾಯ ಹಾಗೂ ಕನ್ನಡ ತಾಯಿಯ ಆಶೀರ್ವಾದದ ಕಾರಣದಿಂದಾಗಿ 85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ ಸ್ಥಾನ ನನಗೆ ದೊರೆತಿದೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಸಂತಸ ವ್ಯಕ್ತಪಡಿಸಿದರು.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಈ ಬಾರಿಯ ಅಧ್ಯಕ್ಷ ಸ್ಥಾನ ನನಗೆ ದೊರೆತಿರುವುದು ಖುಷಿ ತಂದಿದೆ. ಸಮ್ಮೇಳನಾಧ್ಯಕ್ಷ ಸ್ಥಾನವನ್ನು ಕನ್ನಡದ ಲೇಖಕರುಬಹಳ ಗೌರವದಿಂದ ಕಂಡಿದ್ದಾರೆ. ಇದು ಕವಿ, ಲೇಖಕರಿಗೆ ಕನ್ನಡದ ಜನ ಕೊಡುವ ಗೌರವ’ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಾವು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಮಾಜದ ಬಗ್ಗೆ ಮಾತನಾಡುವುದಾಗಿ ತಿಳಿಸಿದರು. ‘ಭಾಷೆ, ಸಾಹಿತ್ಯ ಮತ್ತು ಸಮಾಜ ಮೂರು ಮುಖ್ಯ ಬಿಂದುಗಳು. ಇವುಗಳ ನಡುವಿನ ಸಂಬಂಧದಲ್ಲಿ ತಪ್ಪೇನಾದರೂ ಆಗಿದೆಯೇ, ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸುವುದು ಹೇಗೆ ಎಂಬ ನೆಲೆಯಲ್ಲಿ ನಾನು ಮಾತನಾಡಲಿದ್ದೇನೆ’ ಎಂದರು.
‘ಕನ್ನಡವು ಸಾಹಿತ್ಯದ ಹಾಗೂ ಅಧ್ಯಾತ್ಮದ ಭಾಷೆಯಾಗಿ ಬಹಳ ದೊಡ್ಡ ಮಟ್ಟ ತಲುಪಿದೆ. ಆದರೆ, ವಿಜ್ಞಾನದ ಭಾಷೆಯಾಗಿ ಇದು ಬೆಳೆದಿಲ್ಲ. ಕನ್ನಡವು ವಿಜ್ಞಾನದ ಭಾಷೆಯಾಗಿಯೂ ಬೆಳೆಯಬೇಕು. ಅದಕ್ಕೆ ಅಗತ್ಯವಿರುವ ಪಾರಿಭಾಷಿಕ ಪದಗಳ ಸೃಷ್ಟಿ ಆಗಬೇಕು.
ಕನ್ನಡದ ಸರ್ವತೋಮುಖ ಬೆಳವಣಿಗೆಗೆ ಇದು ಅಗತ್ಯ’ ಎಂದು ಹೇಳಿದರು.
‘ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಬಿ.ಜಿ.ಎಲ್. ಸ್ವಾಮಿ, ನಾಗೇಶ ಹೆಗಡೆ ಅವರಂತಹ ಕೆಲವರು ಕನ್ನಡವನ್ನು ವಿಜ್ಞಾನದ ಭಾಷೆಯನ್ನಾಗಿಯೂ ಬೆಳೆಸಿದ್ದಾರೆ. ಆದರೆ ತರುಣರು ಕನ್ನಡವನ್ನು ಈ ನಿಟ್ಟಿನಲ್ಲಿ ಇನ್ನಷ್ಟು ಬೆಳೆಸಬೇಕು ಎಂಬ ನೆಲೆಯಲ್ಲಿ ನಾನು ಅಧ್ಯಕ್ಷನಾಗಿ ನನ್ನ ವಿಚಾರ ಮಂಡಿಸಲಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.