ಬೆಂಗಳೂರು: ‘ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ, ಕೆಲ ನಿಮಿಷಗಳಲ್ಲಿ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿ’ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹರಿಬಿಟ್ಟು ಸೈಬರ್ ವಂಚಕರು ಹಣ ದೋಚುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಕೋರಿದ್ದಾರೆ.
ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದ ನಗರದ ನಿವಾಸಿ ರಕ್ಷಿತ್, ತಮಗಾದ ವಂಚನೆ ಬಗ್ಗೆ ಸಾಮಾಜಿಕ ಮಾಧ್ಯಮ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹಣ ದೋಚಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
‘ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸಲು ಸರ್ಕಾರ ಹೇಳಿದೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿರುವ ಸೈಬರ್ ವಂಚಕರು, ಎಚ್‌ಎಸ್‌ಆರ್‌ಪಿ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಜನರನ್ನು ವಂಚಿಸುತ್ತಿದ್ದಾರೆ. ಜನರು ಯಾವುದೇ ಕಾರಣಕ್ಕೂ ಅಪರಿಚಿತರ ಜೊತೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಸರ್ಕಾರದ ಅಧಿಕೃತ ಜಾಲತಾಣದ ಮೂಲಕವಷ್ಟೇ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಕೊಳ್ಳಬೇಕು. ಯಾವುದೇ ಕ್ಯೂ ಆರ್ ಕೋಡ್ ಹಾಗೂ ಲಿಂಕ್‌ಗಳನ್ನು ನಂಬಬಾರದು. ಅನುಮಾನಾಸ್ಪದ ಲಿಂಕ್‌ಗಳು ಹಾಗೂ ಕ್ಯೂ ಆರ್ ಕೋಡ್‌ಗಳು ಕಂಡುಬಂದರೆ ಪೊಲೀಸರು ಅಥವಾ ಸಾರಿಗೆ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.