ಬೆಂಗಳೂರು: ನಗರದ ಹೊರವಲಯದಲ್ಲಿ 73 ಕಿಲೋ ಮೀಟರ್ ಉದ್ದದ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ ನಿರ್ಮಾಣಕ್ಕೆ ಸಂಪೂರ್ಣ ಸಾಲ ನೀಡಲು ಹುಡ್ಕೊ ಸಮ್ಮತಿಸಿದೆ.
ಭೂಸ್ವಾಧೀನದಿಂದಾಗಿಯೇ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಅಂತಿಮ ರೂಪ ನೀಡಲಾಗುತ್ತಿದೆ. ಭೂಸ್ವಾಧೀನಕ್ಕಾಗಿ ವಿಶೇಷ ಪ್ಯಾಕೇಜ್ ರೂಪಿಸಲಾಗುತ್ತಿದ್ದು, ಬಿಡಿಎ ಕಾಯ್ದೆ ಹಾಗೂ ಇತ್ತೀಚಿನ ಭೂಸ್ವಾಧೀನ ಪರಿಹಾರ ಮೊತ್ತದ ಮಧ್ಯೆ ಪರಿಹಾರ ಮೊತ್ತವನ್ನು ನಿಗದಿಪಡಿಸಲು ಯೋಜಿಸಲಾಗುತ್ತಿದೆ.
ಪೆರಿಫೆರಲ್ ವರ್ತುಲ ರಸ್ತೆ ಎಂದು ಕರೆಯಲಾಗುತ್ತಿದ್ದ ಯೋಜನೆಗೆ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ ಎಂದು ಹೆಸರಿಸಲಾಗಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಲಾಗಿದ್ದು, ಅದಕ್ಕೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಅಧ್ಯಕ್ಷರಾಗಿದ್ದಾರೆ.
‘ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಸರ್ಕಾರದ ಖಾತರಿ ಮೂಲಕ ಸಾಲ ಪಡೆದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಯೋಜನೆಗೆ ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್ (ಹುಡ್ಕೊ) ಶೇ 9ರಷ್ಟು ಬಡ್ಡಿದರದಲ್ಲಿ ಸಂಪೂರ್ಣ ಸಾಲ ನೀಡಲು ಸಮ್ಮತಿಸಿದೆ. ಬಡ್ಡಿ ಕಡಿಮೆ ಮಾಡಲು ಮಾತುಕತೆ ನಡೆಯುತ್ತಿದೆ. ಇದಲ್ಲದೆ ಇನ್ನೂ ಎರಡು ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, 15 ದಿನಗಳಲ್ಲಿ ಅಂತಿಮವಾಗಲಿದೆ’ ಎಂದು ಎಲ್.ಕೆ. ಅತೀಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಯೋಜನೆಗೆ 2,600 ಎಕರೆ ಭೂಸ್ವಾಧೀನ ಮಾಡಬೇಕಾಗಿದ್ದು, ಅದರಲ್ಲಿ 200 ಎಕರೆ ಸರ್ಕಾರದ ಸಂಸ್ಥೆಗಳಾಗಿದ್ದು, ಅದನ್ನು ಹಸ್ತಾಂತರಿಸಿಕೊಳ್ಳಲಾಗಿದೆ. ಉಳಿದ ಭೂಮಿಗಾಗಿ ರೈತರು ಹಾಗೂ ಭೂಮಾಲೀಕರೊಂದಿಗೆ ಮಾತುಕತೆ ನಡೆಸಿ, ಅವರಿಗೆ ಸಮಾಧಾನವಾಗುವ ರೀತಿಯಲ್ಲಿ ಪರಿಹಾರ ನೀಡಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾವುದು ಎಂದರು.
ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಎಂಟು ಕೆಎಎಸ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧತೆ ಆರಂಭಿಸಲಾಗಿದೆ. ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇನ್ನಾರು ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. ಕಾಮಗಾರಿ ಆರಂಭವಾದ ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ವಾಣಿಜ್ಯ ಪ್ರದೇಶ: ‘100 ಮೀಟರ್ ಕಾರಿಡಾರ್ ನಿರ್ಮಿಸಲು ಹಿಂದೆ ಯೋಜಿಸಲಾಗಿದೆ. ಅದರಂತೆಯೇ ಭೂಸ್ವಾಧೀನವಾಗಲಿದೆ. ಬ್ಯುಸಿನೆಸ್ ಕಾರಿಡಾರ್‌ನಲ್ಲಿ ಎರಡೂ ಬದಿ ವಾಣಿಜ್ಯ ಉದ್ದೇಶಕ್ಕೆ ಭೂಮಿಯನ್ನು ನೀಡಲು ಉದ್ದೇಶಿಸಲಾಗಿದೆ. 50 ಮೀಟರ್‌ನಲ್ಲಿ ಆರು ಪಥ ನಿರ್ಮಿಸಲಾಗುತ್ತದೆ. ಉಳಿದ ಜಾಗವನ್ನು ವಾಣಿಜ್ಯ ಉದ್ಧೇಶಕ್ಕೆ ಮಾರಾಟ ಮಾಡಲಾಗುತ್ತದೆ’ ಎಂದು ಅತೀಕ್ ಹೇಳಿದರು.
‘ಯೋಜನೆಯ ವೆಚ್ಚದಲ್ಲಿ ಶೇ 60ರಷ್ಟು ಹಣ ಭೂಸ್ವಾಧೀನಕ್ಕೇ ಬೇಕಾಗುತ್ತದೆ. ಹೀಗಾಗಿ ಟೋಲ್ ಸಂಗ್ರಹದಿಂದ ಮಾತ್ರ ಸಾಲ ತೀರಿಸಲು ಸಾಧ್ಯವಿಲ್ಲ. ಹೀಗಾಗಿ, ಕಾರಿಡಾರ್‌ನ ಎರಡೂ ಬದಿಯ ಜಾಗವನ್ನು ಮಾರಾಟ ಮಾಡಲಾಗುತ್ತದೆ’ ಎಂದರು.
ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬ್ಯುಸಿನೆಸ್ ಕಾರಿಡಾರ್‌ಗೆ ಇನ್ನು ಆರು ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತದೆಎಲ್.ಕೆ. ಅತೀಕ್, ಅಧ್ಯಕ್ಷ, ಎಸ್‌ಪಿವಿ
₹27 ಸಾವಿರ ಕೋಟಿ ಬ್ಯುಸಿನೆಸ್ ಕಾರಿಡಾರ್ ನಿರ್ಮಾಣದ ವೆಚ್ಚ 2400 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ 3 ವರ್ಷ ಯೋಜನೆ ಮುಗಿಸಲು ಗಡುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.