ಬೆಂಗಳೂರು: ಕೆ.ಆರ್.ಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿ ಬಹುಮತ ಗಳಿಸಿದ್ದರಿಂದ ಮತ ಎಣಿಕೆಯ ವೇಳೆ ಕುತೂಹಲವೇ ಇರಲಿಲ್ಲ.
ಮಹಾಲಕ್ಷ್ಮೀ ಲೇಔಟ್‌ನ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಮತ್ತು ಕೆ.ಆರ್.ಪುರದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಅವರು ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡರು.
ಪ್ರತಿ ಸುತ್ತಿನ ಎಣಿಕೆ ಮುಗಿದಂತೆ ಅವರ ಮುನ್ನಡೆಯ ಅಂತರವೂ ಹೆಚ್ಚಾಗುತ್ತಾ ಹೋಯಿತು.
ಈ ಅಭ್ಯರ್ಥಿಗಳ ಗೆಲುವು ನಿಚ್ಚಳವಾಗಿದ್ದರಿಂದ ಬೆಂಬಲಿಗರೂ ವಿಠ್ಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿನ ಎಣಿಕಾ ಕೇಂದ್ರದ ಕಡೆಗೆ ಅಷ್ಟಾಗಿ ಸುಳಿಯಲಿಲ್ಲ.
ಗೆಲ್ಲುವುದು ಖಾತರಿಯಾದ ಬಳಿಕ ಗೋಪಾಲಯ್ಯ ಅವರು ಎಣಿಕಾ ಕೇಂದ್ರಕ್ಕೆ ಬಂದರೆ, ಬಸವರಾಜು ಅವರು ಬೆಳಿಗ್ಗೆಯಿಂದಲೇ ಹಾಜರಿದ್ದರು.ಈ ಸಂದರ್ಭದಲ್ಲಿ ಕೆ.ಆರ್.ಪುರದ ಕಾಂಗ್ರೆಸ್ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಎಣಿಕಾ ಕೇಂದ್ರದಿಂದ ನಿರ್ಗಮಿಸಿದರು.
ಪ್ರತಿಕ್ರಿಯೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಪ್ರಯತ್ನಿಸಿದಾಗ, ‘ಕೆಲವೇ ವಾರ್ಡ್‌ಗಳ ಎಣಿಕೆ ಮುಗಿದಿದೆ, ಹೊರಗಡೆ ಹೋಗಿ ಮತ್ತೆ ಬರುತ್ತೇನೆ’ ಎಂದಷ್ಟೇ ಉತ್ತರಿಸಿ ಹೊರ ಹೋದರು. ಎಣಿಕಾ ಕೇಂದ್ರದ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.
ಕಂಠೀರವ ಕ್ರೀಡಾಂಗಣದ ಬಳಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚುನಾವಣಾ ಸಿಬ್ಬಂದಿ ಮೈಕ್ ನಲ್ಲಿ ಪದೇಪದೇ ಹೇಳುತ್ತಿದ್ದರು. ಆದರೆ, ಫಲಿತಾಂಶದ ಕುತೂಹಲ ತಣಿಸಿ ಕೊಳ್ಳಲು ಸಾರ್ವಜನಿಕರಾಗಲೀ, ಅವರ ವಾಹನಗಳಾಗಲೀ ಎಣಿಕಾ ಕೇಂದ್ರದ ಕಡೆಗೆ ಬರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.