ಬೆಂಗಳೂರು: ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಹುಕ್ಕಾಬಾರ್‌ಗಳ ವಿರುದ್ಧ ಕ್ರಮ, ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಕಾನೂನು ಬಲಗೊಳಿಸುವಿಕೆ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳ ಸೇರಿ ವಿವಿಧ ಒತ್ತಾಯಗಳು ವೈದ್ಯಕೀಯ ಸೇರಿ ವಿವಿಧ ಕ್ಷೇತ್ರಗಳ ತಜ್ಞರಿಂದ ಕೇಳಿ ಬಂದವು.
ಕರ್ನಾಟಕ ನೋ ಫಾರ್ ಟೊಬ್ಯಾಕೊ, ಸರ್ಕಾರೇತರ ಸಂಸ್ಥೆ ಮಾಯಾ ಹಾಗೂ ಎಚ್‌ಸಿಜಿ ಆಸ್ಪತ್ರೆ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ‘ಮಕ್ಕಳು ಹಾಗೂ ಯುವಜನರನ್ನು ತಂಬಾಕು, ಮಾದಕ ವಸ್ತುಗಳ ವ್ಯಸನದಿಂದ ರಕ್ಷಿಸುವಲ್ಲಿ ಮಾಧ್ಯಮದ ಪಾತ್ರ’ ಎಂಬ ವಿಷಯದ ಮೇಲೆ ಚರ್ಚಿಸಲಾಯಿತು.
ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ‘ಚಲನಚಿತ್ರಗಳು ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಧೂಮಪಾನದ ದೃಶ್ಯ ತೋರಿಸುವುದು ಫ್ಯಾಷನ್ ಆಗಿದೆ. ಇದನ್ನು ‘ಹೀರೋಯಿಸಂ’ ಎಂಬಂತೆ ಬಿಂಬಿಸುತ್ತಿರುವುದು ದುರದೃಷ್ಟಕರ. ಇದರಿಂದ ಪ್ರಭಾವಿತರಾಗುವ ಯುವಜನರು ಧೂಮಪಾನ ವ್ಯಸನಿಗಳಾಗುತ್ತಿದ್ದಾರೆ. ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಾ ಇದ್ದಾರೆ. ಮಹಿಳೆಯರಲ್ಲಿಯೂ ಧೂಮಪಾನ ಪ್ರವೃತ್ತಿ ಹೆಚ್ಚಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ವ್ಯಸನ ಮುಕ್ತ ಕೇಂದ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು’ ಎಂದು ಕಳವಳ ವ್ಯಕ್ತಪಡಿಸಿದರು.
ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಗತಿ ಬಿ. ಹೆಬ್ಬಾರ್, ‘ತಂಬಾಕು ಮಾರಾಟಕ್ಕೆ ಸಂಬಂಧಿಸಿದಂತೆ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆಯನ್ನು ಬಲಪಡಿಸಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ ನೋ ಫಾರ್ ಟೊಬ್ಯಾಕೊ ಒಕ್ಕೂಟದ ಸಂಚಾಲಕ ಜಿತಿನ್ ಚಂದ್ರನ್, ‘ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯ. ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಹಾಗೂ ಕೋಲ್ಕತ್ತದಲ್ಲಿ ಈಗಾಗಲೆ ಹುಕ್ಕಾ ಬಾರ್‌ಗಳನ್ನು ನಿರ್ಬಂಧಿಸಲಾಗಿದೆ. ಕರ್ನಾಟಕದಲ್ಲೂ ಈ ಬಗ್ಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆಗೆ ನಡೆದ ಸಂವಾದದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟಕ್ಕೆ ಇರುವ ವಯೋಮಿತಿಯನ್ನು 18ರಿಂದ 24ಕ್ಕೆ ಹೆಚ್ಚಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದರು.
Cut-off box - ‘ಕಡಿಮೆ ಬೆಲೆಗೆ ಲಭ್ಯ’ ‘ತಂಬಾಕು ಉತ್ಪನ್ನಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ. ಅವುಗಳ ಬಳಕೆಯನ್ನು ನಿಯಂತ್ರಿಸುವ ಕ್ರಮಗಳು ಪರಿಣಾಮಕಾರಿಯಾಗಿಲ್ಲ. ತಂಬಾಕು ಉತ್ಪನ್ನಗಳಿಗೆ ನಿಗದಿಪಡಿಸಿದ ತೆರಿಗೆ ಹಣಕ್ಕಿಂತ ಅವುಗಳ ಸೇವನೆಯಿಂದ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳಿಗೆ ವೆಚ್ಚ ಹೆಚ್ಚಾಗಲಿದೆ. ರಾಜ್ಯ ಸರ್ಕಾರವು ವಾರ್ಷಿಕ ಸರಾಸರಿ ₹983 ಕೋಟಿ ಅನ್ನು ತಂಬಾಕು ಸಂಬಂಧಿತ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಖರ್ಚು ಮಾಡುತ್ತಿದೆ. ಅಪಾರ ಪ್ರಮಾದಲ್ಲಿ ಬೀಡಿ ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದನ್ನು ತಡೆಯಲು ನಿಯಮಗಳನ್ನು ರೂಪಿಸಬೇಕು’ ಎಂದು ಆರ್ಥಿಕ ತಜ್ಞ ಹಾಗೂ ಸಾರ್ವಜನಿಕ ಆರೋಗ್ಯ ನೀತಿಯ ವಿಶ್ಲೇಷಕ ಡಾ.ರಿಜೋ ಎಂ. ಜಾನ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.