ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದಿರುವ ಪ್ರಕರಣ ಸಂಬಂಧ ಜಲಮಂಡಳಿಯ ಸಹಾಯಕ ಎಂಜಿನಿಯರ್ ಕಾರ್ತಿಕ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಟಿ.ಮೋಹನ್ ಕೃಷ್ಣ ಅವರು ದೂರು ನೀಡಿದ್ದಾರೆ. ಕೆರೆ ದಂಡೆ ಒಡೆದವರು ಯಾರು ಎಂಬುದನ್ನು ಪತ್ತೆ ಮಾಡಲು ಹಲವರ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಕೆರೆ ನಿರ್ವಹಣೆ ಉಸ್ತುವಾರಿಯನ್ನುಸಹಾಯಕ ಎಂಜಿನಿಯರ್ ಶಿಲ್ಪಾ ಅವರಿಗೆ ನೀಡಲಾಗಿದೆ. ಪ್ರಕರಣ ಸಂಬಂಧ ಅವರ ಹೇಳಿಕೆಯನ್ನೂ ಪಡೆಯಲಾಗಿದ್ದು, ಕಾರ್ತಿಕ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದರು.
ಅನುಮತಿ ಕೋರಿದ್ದ ಕಾರ್ತಿಕ್: ‘ಇದೇ 20ರಂದು ಶಿಲ್ಪಾ ಅವರಿಗೆ ಕರೆ ಮಾಡಿದ್ದ ಕಾರ್ತಿಕ್, ‘ಜಲಮಂಡಳಿಯಿಂದ ಹುಳಿಮಾವು ಕೆರೆಯ ದಕ್ಷಿಣ ಭಾಗದಲ್ಲಿ ಎಸ್‌ಟಿಪಿ ಕಾಮಗಾರಿ ಮಾಡಿಸಲಾಗುತ್ತಿದೆ. ಕೆರೆಯಲ್ಲಿ ನೀರು ಹೆಚ್ಚಿರುವುದರಿಂದ ಕಾಮಗಾರಿ ಜಾಗದಲ್ಲಿರುವ ದೇವಸ್ಥಾನಕ್ಕೆ ನೀರು ಹರಿಯುತ್ತಿದೆ. ಕೋಡಿ ಮಟ್ಟವನ್ನು ತಗ್ಗಿಸಿ ನೀರನ್ನು ಹೊರಗೆ ಹರಿಸುವಂತೆ ಸಾರ್ವಜನಿಕರು ಕೋರುತ್ತಿದ್ದಾರೆ. ಕೋಡಿ ಮಟ್ಟ ತಗ್ಗಿಸಲು ಅನುಮತಿ ಕೊಡಿ’ ಎಂಬುದಾಗಿ ಕೋರಿದ್ದರು. ಈ ಬಗ್ಗೆ ಶಿಲ್ಪಾ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಬಾಯಿ ಮಾತಿನಲ್ಲಿ ಹೇಳುವುದು ಬೇಡವೆಂದು ಹೇಳಿದ್ದ ಶಿಲ್ಪಾ, ‘ಬರವಣಿಗೆಯಲ್ಲಿ ಮನವಿ ನೀಡಿ ಪರಿಶೀಲಿಸುತ್ತೇನೆ’ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲೇ ಕೆರೆ ದಂಡೆ ಒಡೆದಿದೆ. ಕೋಡಿ ಮಣ್ಣನ್ನು ಜೆ.ಸಿ.ಬಿ ಯಂತ್ರದಿಂದ ಅಗೆದಿರುವುದು ಕಾಣುತ್ತಿದೆ. ಇದಕ್ಕೆ ಕಾರ್ತಿಕ್ ಅಥವಾ ಅವರು ಕಡೆಯವರೇ ಯಾರಾದರೂ ಕಾರಣ ಇರಬಹುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.