ಬೆಂಗಳೂರು: ಮನೆಯಲ್ಲಿ, ಅಂಗಳದಲ್ಲಿ, ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ದುರ್ನಾತ ಬೀರುವ ಕೆಸರು. ಕೆಸರನ್ನು ತೊಳೆದು ಸ್ವಚ್ಛಗೊಳಿಸುವಲ್ಲಿ ನಿರತರಾಗಿರುವ ಮನೆ ಮಂದಿ.
ಅರಕೆರೆ ವಾರ್ಡ್‌ನ ಆರ್.ಆರ್.ಬಡಾವಣೆಯಲ್ಲಿ ಸೋಮವಾರ ಕಂಡುಬಂದ ದೃಶ್ಯಗಳಿವು. ಹುಳಿಮಾವು ಕೆರೆಯಿಂದ ಭಾನುವಾರ ಏಕಾಏಕಿ ಹೊರನುಗ್ಗಿದ ನೀರು ಈ ಬಡಾವಣೆಯವರ ಬದುಕನ್ನು ಹೈರಾಣಾಗಿಸಿದೆ. ನೀರಿಳಿದು ಹೋದರೂ ಅವರ ಬವಣೆಗಳು ತೀರಿಲ್ಲ.
ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ, ಗೆಳೆಯರ ಅಥವಾ ಸಂಬಂಧಿಕರ ಮನೆಯಲ್ಲಿ ಭಾನುವಾರ ರಾತ್ರಿ ಆಶ್ರಯ ಪಡೆದಿದ್ದವರು ಸೋಮವಾರ ಮುಂಜಾನೆಯೇ ಮನೆಗೆ ಮರಳಿ ನೀರು ಹೊರಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದರು. ಎಲೆಕ್ಟ್ರಾನಿಕ್ ಪರಿಕರಗಳು, ಪೀಠೋಪಕರಣಗಳು, ಬಟ್ಟೆ ಬರೆಗಳನ್ನು ಬಿಸಿಲಿನಲ್ಲಿ ಒಣ ಹಾಕಿದ್ದರು. ಮಧ್ಯಾಹ್ನವಾದರೂ ಮನೆ ಶುಚಿಗೊಳಿಸುವ ಕೆಲಸ ಮುಂದುವರಿದಿತ್ತು.
ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸಂಪೂರ್ಣ ಕೆಸರುಮಯವಾಗಿದ್ದವು. ಇದರಿಂದ ಇಡೀ ಪ್ರದೇಶ ದುರ್ನಾತ ಬೀರುತ್ತಿತ್ತು. ಇಲ್ಲಿ ರೋಗ-ರುಜಿನ ಹರಡುವ ಭೀತಿ ಎದುರಾಗಿದೆ.
ಇದನ್ನೂ ಓದಿ:ಜೀವ ಉಳಿಯಿತು ದುಡಿಮೆ ಹೋಯಿತು
ನೀರಿಗೂ ಪಡಿಪಾಟಲು: ಅಪಾರ್ಟ್‌ಮೆಂಟ್ ಸಮುಚ್ಚಯಗಳ ತಳಮಹಡಿಯಲ್ಲಿ ನೀರು ನಿಂತಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಇದರಿಂದ ನೀರಿಗೂ ತತ್ವಾರ ಎದುರಾಯಿತು. ಮೂರನೇ ಹಾಗೂ ನಾಲ್ಕನೇ ಮಹಡಿಯಲ್ಲಿರುವವರು ನೀರು ಎತ್ತಿಕೊಂಡು ಹೋಗಲಾರದೇ ಪಡಿಪಾಟಲು ಅನುಭವಿಸಿದರು.
ಮನೆಗಳನ್ನು ಸ್ವಚ್ಛಗೊಳಿಸಲು ಬಿಬಿಎಂಪಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ‘ಒಂದು ವಾರ್ಡ್‌ಗೆ ಕೇವಲ 10 ಜನರನ್ನು ನಿಯೋಜಿಸಿದ್ದಾರೆ. ಇಷ್ಟು ಜನರಿಂದ ಇಡೀ ಬಡಾವಣೆ ಸ್ವಚ್ಛ ಮಾಡಲು ಸಾಧ್ಯವೇ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
‘ಇಡೀ ಬಡಾವಣೆ ಕೆಸರಿನಿಂದಾಗಿ ಗಬ್ಬು ವಾಸನೆ ಹೊಡೆಯುತ್ತಿದೆ. ರಸ್ತೆಯಲ್ಲಿನ ಕೆಸರು ತೆರವುಗೊಳಿಸಿ ಎಂದಷ್ಟೇ ನಾವು ಕೇಳುತ್ತಿದ್ದೇವೆ. ಆದರೆ, ಈವರೆಗೂ ಇತ್ತ ಯಾರೂ ಸುಳಿದಿಲ್ಲ’ ಎಂದು ಆರ್.ಆರ್. ಬಡಾವಣೆ ನಿವಾಸಿ ಕಾವ್ಯಾ ಬೇಸರ ವ್ಯಕ್ತಪಡಿಸಿದರು.
ಎರಡು ತಂಡ ರಚನೆ: ‘ನೆರೆಯಿಂದಾಗಿ ಹಾಳಾದ ರಸ್ತೆ, ಚರಂಡಿಗಳ ದುರಸ್ತಿ ಕಾಮಗಾರಿ, ಹೂಳೆತ್ತುವುದು, ಇತರೆ ಕಾಮಗಾರಿಗಳ ನಿರ್ವಹಣೆಗಾಗಿ ಎಂಜಿನಿಯರ್‌ಗಳ ತಂಡ ಹಾಗೂ ನೆರೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜು ಮಾಡಿ ವರದಿ ನೀಡಲು ಕಂದಾಯ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಮಂಗಳವಾರದಿಂದ ಮೂರು ದಿನದ ಒಳಗೆ ಅಧ್ಯಯನ ನಡೆಸಿ ವರದಿ ನೀಡಲು ಸೂಚಿಸಲಾಗಿದೆ’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ಜಂಟಿ ಆಯುಕ್ತ ಎಂ.ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಸಮಸ್ಯೆ ಆಲಿಸದ ಸಚಿವರು: ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಕೆರೆ ದಂಡೆ ಮತ್ತು ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ, ಸಚಿವರು ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಲಿಲ್ಲ ಎಂದು ಕೆಲ ನಿವಾಸಿಗಳು ದೂರಿದರು.
16 ಹಾವು ರಕ್ಷಣೆ
ಪ್ರವಾಹಪೀಡಿತ ಪ್ರದೇಶದಲ್ಲಿ ಬಿಬಿಎಂಪಿಯ ವನ್ಯಜೀವಿ ಕಾರ್ಯಕರ್ತರ ತಂಡ ಆರು ವಿಷಕಾರಿ ಹಾವು ಸೇರಿದಂತೆ ಒಟ್ಟು 16 ಹಾವುಗಳನ್ನು ಹಿಡಿದಿದೆ.
ನೆರೆಯ ನೀರಿನ ಜೊತೆ ಹಾವುಗಳು ಹಾಗೂ ಆಮೆಗಳೂ ಜನವಸತಿ ಪ್ರದೇಶವನ್ನು ಸೇರಿದ್ದವು. ನಾಗರಹಾವಿನಂತಹ ವಿಷಕಾರಿ ಹಾವುಗಳು ಮನೆಯ ಬಳಿ ಕಾಣಿಸಿಕೊಂಡಿದ್ದರಿಂದ ನಿವಾಸಿಗಳು ಭಯಭೀತರಾಗಿದ್ದರು.
‘ಒಟ್ಟು 16 ಹಾವುಗಳನ್ನು, ಎರಡು ಆಮೆಗಳನ್ನು ರಕ್ಷಿಸಿದ್ದೇವೆ. ಅವುಗಳನ್ನು ಬನ್ನೇರುಘಟ್ಟ ಕಾಡಿನಲ್ಲಿ ಬಿಡುತ್ತೇವೆ’ ಎಂದು ವನ್ಯಜೀವಿ ಕಾರ್ಯಕರ್ತರ ತಂಡದ ಸದಸ್ಯ ಜಯರಾಜ್ ತಿಳಿಸಿದರು.
ರಸ್ತೆಯಲ್ಲಿ ಕಂಡ 4 ಆಮೆಗಳನ್ನು ವನ್ಯಜೀವಿ ತಂಡದವರು ಬರುವ ಮುನ್ನವೇ ಕೆಲವರು ತೆಗೆದುಕೊಂಡು ಹೋಗಿದ್ದರು.
‘ಪಾಲಿಕೆ ವನ್ಯಜೀವಿ ರಕ್ಷಣಾ ತಂಡದ 9 ಸದಸ್ಯರು ಸ್ಥಳದಲ್ಲೇ ಬೀಡುಬಿಟ್ಟಿದ್ದೆವು’ ಎಂದು ಪ್ರಸನ್ನಕುಮಾರ್ ಮಾಹಿತಿ ನೀಡಿದರು.
ಒತ್ತುವರಿ ಮಾಹಿತಿ ಇಲ್ಲ:143 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆ ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಈವರೆಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಂಪ್ ಸ್ವಚ್ಛಗೊಳಿಸಲು ₹1500
ಪ್ರವಾಹದ ನೀರು ಸಂಪ್ ಸೇರಿ, ಅದರ ನೀರೂ ಹಾಳಾಗಿತ್ತು. ಅದನ್ನು ಶುಚಿಗೊಳಿಸುವುದು ಸ್ಥಳೀಯರಿಗೆ ತಲೆನೋವಾಗಿತ್ತು.
‘ಕೊಳಚೆನೀರು ತುಂಬಿದ ನೀರಿನ ಸಂಪ್‌ಗಳನ್ನು ಸ್ವಚ್ಛಗೊಳಿಸಲು ₹1500 ಕೇಳುತ್ತಿದ್ದಾರೆ’ ಎಂದು ಆರ್.ಆರ್ ಬಡಾವಣೆಯ ಕೆಲ ನಿವಾಸಿಗಳು ದೂರಿದರು. ‘ಕುಡಿಯುವ ನೀರಿಗೆ ಈ ಹಿಂದೆ ಟ್ಯಾಂಕರ್‌ಗೆ ₹ 600 ಪಡೆಯುತ್ತಿದ್ದರು. ಟ್ಯಾಂಕರ್ ನೀರಿನ ಬೆಲೆ ಇಂದು ₹ 1000 ಆಗಿತ್ತು. ಸಂತ್ರಸ್ತರನ್ನು ಈ ರೀತಿ ಸುಲಿಗೆ ಮಾಡಬಾರದು’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ನಷ್ಟ ಪರಿಹಾರ ನೀಡುವಲ್ಲಿ ವಿಳಂಬವಾಗುವುದು ಮಾಮೂಲಿ. ಈ ಬಾರಿ ಆ ರೀತಿ ಆಗದಂತೆ ತಕ್ಷಣವೇ ನಷ್ಟ ಪರಿಹಾರ ತುಂಬಿಕೊಡಬೇಕು ಎಂದು ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ ಒತ್ತಾಯಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.