ಬೊಮ್ಮನಹಳ್ಳಿ: ಹುಳಿಮಾವು ಕೆರೆ ಕೋಡಿ ಒಡೆದ ಘಟನೆಯಲ್ಲಿ ಎಲ್ಲಾ ಸಂತ್ರಸ್ತರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಆರ್.ಆರ್. ಬಡಾವಣೆ ನಿವಾಸಿಗಳು ಹಾಗೂ ಸಾರ್ವಜನಿಕರು ಹುಳಿಮಾವು ಸಾಯಿಬಾಬಾ ದೇವಸ್ಥಾನದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ಎಲ್ಲರಿಗೂ ಪರಿಹಾರ ನೀಡಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲ ಎಂಬಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಹೇಳಿಕೆಗೆ
ಪ್ರತಿಭಟನಾಕಾರರಿಂದ ಆಕ್ರೋಶ ವ್ಯಕ್ತವಾಯಿತು. ‘ಈ ದುರಂತ ಪ್ರಕೃತಿ ವಿಕೋಪದಿಂದ ಸಂಭವಿಸಿದ್ದಲ್ಲ. ಬದಲಾಗಿ ಕೆಲ ಅಧಿಕಾರಿಗಳ
ಬೇಜವಾಬ್ದಾರಿತನದಿಂದ ಆಗಿದೆ. ಹೀಗಾಗಿ, ಇದಕ್ಕೆ ಬಿಬಿಎಂಪಿಯೇ ಹೊಣೆ ಹೊತ್ತು ಎಲ್ಲರಿಗೂ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಶಾಸಕ ಸತೀಶ್ ರೆಡ್ಡಿ, ‘ವೈಮಾನಿಕ ಪ್ರದರ್ಶನದ ವೇಳೆ ಕಾರುಗಳು ಸುಟ್ಟ ಪ್ರಕರಣದಲ್ಲಿ
ಪರಿಹಾರ ನೀಡಿದ ಮಾದರಿಯಲ್ಲೇ ಇಲ್ಲಿಯೂ ವಿಮಾ ಪರಿಹಾರ ನೀಡಬೇಕೆಂಬ ಸಂತ್ರಸ್ತರ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಒಂದು ವೇಳೆ ವಿಮಾ ಕಂಪನಿಗಳು ಇದಕ್ಕೆ ಒಪ್ಪದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು’ ಎಂದರು.
ಬಿಬಿಎಂಪಿ ವಿಶೇಷ ಆಯುಕ್ತಡಿ. ರಂದೀಪ್, ‘ಕೆರೆ ಒತ್ತುವರಿ ಪ್ರಕರಣ, ನಿಯಮ ಮೀರಿ ಆರಂಭಿಕಪ್ರಮಾಣಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿರುವುದುಹಾಗೂ ವಿಲ್ಲಾಗಳು ಮತ್ತು ವಸತಿ ಸಮುಚ್ಚಯಗಳಿಂದ ಕೊಳಚೆ ನೀರು ಕೆರೆಯನ್ನು ಸೇರುತ್ತಿದೆ ಎಂಬ ಅನೇಕ ದೂರುಗಳು ಬಂದಿವೆ. ಈ ತನಿಖೆನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಪರಿಹಾರಕ್ಕೆ ಮೀನುಗಾರರ ಮನವಿ: ‘ಕೆರೆ ದಂಡೆ ಒಡೆದಿದ್ದರಿಂದ ಕೆರೆಯಲ್ಲಿ ಸಾಕಿದ್ದ ಮೀನುಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ನಮಗೆ ₹10 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಇದನ್ನು ಭರಿಸಿಕೊಡಬೇಕು’ ಎಂದು ಗಂಗಾ ಮೀನುಗಾರರ ಸಹಕಾರ ಸಂಘದ ಸದಸ್ಯರು ಮನವಿ ಮಾಡಿದರು.
ಗುರುತ್ವ ಗೋಡೆ ನಿರ್ಮಾಣ: ‘ಕೆರೆ ದಂಡೆ ಒಡೆದ ಜಾಗದಲ್ಲಿ ಕಾಂಕ್ರೀಟ್ ಗುರುತ್ವ ಗೋಡೆ ನಿರ್ಮಾಣ ಮಾಡಲಾಗುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ಎಂಜಿನಿಯರ್ ಒಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.