ADVERTISEMENT

ಆರೋಪಿ ಅಕ್ರಮ ಬಂಧನ: ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 16:24 IST
Last Updated 10 ಫೆಬ್ರುವರಿ 2024, 16:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕಳ್ಳತನ ಪ್ರಕರಣದ ಆರೋಪಿಯನ್ನು 9 ದಿನ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಆರೋಪದಡಿ ಅಮೃತಹಳ್ಳಿ ಠಾಣೆಯ ಮೇಲೆ ಮಾನವ ಹಕ್ಕುಗಳ ಆಯೋಗದ ಪೊಲೀಸರ ತಂಡ ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದೆ.

2022ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದ ಆರೋಪಿ ಯಾಸಿನ್ ಮಕ್ಬುಲ್ ಖಾನ್‌ನನ್ನು (40) ಮುಂಬೈನಲ್ಲಿ ಫೆ. 1ರಂದು ವಶಕ್ಕೆ ಪಡೆದಿದ್ದ ಅಮೃತಹಳ್ಳಿ ಪೊಲೀಸರು, ಠಾಣೆಗೆ ಕರೆತಂದು ಲಾಕಪ್‌ನಲ್ಲಿ ಇರಿಸಿದ್ದರು. ಫೆ. 9ರವರೆಗೂ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ. ಜೊತೆಗೆ, ವಶಕ್ಕೆ ಪಡೆದ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಆರೋಪಿ ಸಂಬಂಧಿಕರಿಗೆ ಮಾಹಿತಿ ನೀಡಿರಲಿಲ್ಲ.

ADVERTISEMENT

ಅಕ್ರಮ ಬಂಧನದ ಬಗ್ಗೆ ಮಾಹಿತಿ ತಿಳಿದಿದ್ದ ವಕೀಲರೊಬ್ಬರು ಸಂಬಂಧಿಕರ ಮೂಲಕ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ತ್ವರಿತ ತನಿಖೆ ಕೈಗೊಂಡ ಆಯೋಗದ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡ, ಶುಕ್ರವಾರ ಸಂಜೆ ಠಾಣೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿತು. ತಂಡ ದಾಳಿ ಮಾಡಿದ್ದ ಸಂದರ್ಭದಲ್ಲಿ ಆರೋಪಿ ಯಾಸಿನ್ ಖಾನ್ ಲಾಕಪ್‌ನಲ್ಲಿದ್ದದ್ದು ಕಂಡುಬಂತು.

‘ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ದಾಬಸ್‌ಪೇಟೆ ನಿವಾಸಿ ಯಾಸಿನ್ ಖಾನ್, ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದ. ನಗರ ತೊರೆದಿದ್ದ ಈತ, ಮುಂಬೈನಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಈತನ ಬಂಧನಕ್ಕಾಗಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು’ ಎಂದು ಮೂಲಗಳು ಹೇಳಿವೆ.

‘ಆರೋಪಿ ಮುಂಬೈನಲ್ಲಿರುವ ಮಾಹಿತಿ ತಿಳಿದಿದ್ದ ಅಮೃತಹಳ್ಳಿ ಪೊಲೀಸರು, ಅಲ್ಲಿಗೆ ಹೋಗಿ ಫೆ. 1ರಂದು ವಶಕ್ಕೆ ಪಡೆದಿದ್ದರು. ವಿಮಾನದಲ್ಲಿ ನಗರಕ್ಕೆ ಕರೆತಂದು, ಅಂದಿನಿಂದಲೇ ಠಾಣೆಯಲ್ಲಿ ಇರಿಸಿದ್ದರು. ವಾರಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ. ಪೊಲೀಸರು ಹಣಕ್ಕಾಗಿ ಯಾಸಿನ್ ಖಾನ್ ಬಳಿ ಬೇಡಿಕೆ ಇರಿಸಿದ್ದ ಆರೋಪವಿದ್ದು, ಈ ಬಗ್ಗೆ ಸದ್ಯಕ್ಕೆ ಪುರಾವೆಗಳು ಸಿಕ್ಕಿಲ್ಲ’ ಎಂದು ತಿಳಿಸಿವೆ.

‘ಅಮೃತಹಳ್ಳಿ ಪೊಲೀಸರು ಮುಂಬೈಗೆ ಹೋಗುವ ಮುನ್ನ ಡಿಸಿಪಿಗೆ ಮಾಹಿತಿ ನೀಡಿರಲಿಲ್ಲ. ವಿಮಾನದಲ್ಲಿ ಪ್ರಯಾಣಿಸಲು ಕಮಿಷನರ್ ಅನುಮತಿ ಪಡೆದಿರಲಿಲ್ಲ. ಯಾಸಿನ್ ಖಾನ್ ವಶಕ್ಕೆ ಪಡೆದ ಬಗ್ಗೆ ಮುಂಬೈ ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ವಶಕ್ಕೆ ಪಡೆದ ಬಗ್ಗೆ ಠಾಣೆಯ ಯಾವ ದಾಖಲೆಗಳಲ್ಲಿಯೂ ಉಲ್ಲೇಖವಿಲ್ಲ’ ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಪೆಕ್ಟರ್‌ಗೆ ನೋಟಿಸ್: ‘ಆರೋಪಿಯನ್ನು ನ್ಯಾಯಾಲಯಕ್ಕೆ ತ್ವರಿತವಾಗಿ ಹಾಜರುಪಡಿಸುವಂತೆ ಇನ್‌ಸ್ಪೆಕ್ಟರ್‌ ಅವರಿಗೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣದ ದಾಖಲೆಗಳ ಸಮೇತ ಆಯೋಗದ ಎದುರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಸಹ ನೀಡಲಾಗಿದೆ. ವಿಚಾರಣೆ ಬಳಿಕ ಕಮಿಷನರ್‌ ಅವರಿಗೆ ವರದಿ ನೀಡಲಾಗುವುದು’ ಎಂದು ಮೂಲಗಳು ಹೇಳಿವೆ.

ತನಿಖೆಗೆ ಆಗ್ರಹ: ‘ಅಕ್ರಮ ಬಂಧನ ಸಂಬಂಧ ಇನ್‌ಸ್ಪೆಕ್ಟರ್ ಹಾಗೂ ತಂಡದವರ ವಿರುದ್ಧ ತನಿಖೆ ನಡೆಸಬೇಕು. ಠಾಣೆಗಳಲ್ಲಿ ಜನರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಪೊಲೀಸ್ ಕಮಿಷನರ್ ಬಿ. ದಯಾನಂದ್  ಕ್ರಮ ಕೈಗೊಳ್ಳಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.