ಬೆಂಗಳೂರು: ‘ರಾಕ್ಷಸ ಆರ್ಥಿಕತೆಯಿಂದ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಸರ್ಕಾರ ಮತ್ತೆ ಮತ್ತೆ ಈ ಆರ್ಥಿಕತೆಗೆ ₹ 1.40 ಲಕ್ಷ ಕೋಟಿ ತೆರಿಗೆ ವಿನಾಯಿತಿ ನೀಡಿದೆ. ಅದೇ ಪವಿತ್ರ ಆರ್ಥಿಕತೆಗೆ ಒಂದು ರೂಪಾಯಿಯನ್ನೂ ವಿನಾಯಿತಿ ನೀಡಿಲ್ಲ’ ಎಂದುರಂಗಕರ್ಮಿ ಪ್ರಸನ್ನ ಬೇಸರ ವ್ಯಕ್ತಪಡಿಸಿದರು.
ಪವಿತ್ರ ಆರ್ಥಿಕತೆಗಾಗಿ ಗ್ರಾಮಸೇವಾ ಸಂಘವು ನಗರದಲ್ಲಿ ಆರಂಭಿಸಿರುವ ಸತ್ಯಾಗ್ರಹದಲ್ಲಿ ಬೇಡಿಕೆಗಳನ್ನು ಬಿಡುಗಡೆ ಮಾಡಿದ ಪ್ರಸನ್ನ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡರು.
‘ರಾಕ್ಷಸ ಆರ್ಥಿಕತೆಯಿಂದ ಪರಿಸರ ನಾಶವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ 14 ವರ್ಷಗಳಲ್ಲಿ ಅಪಾಯಕಾರಿ ವಾತಾವರಣ ನಿರ್ಮಾಣವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತಿನಿತ್ಯ3 ಲಕ್ಷ ಕಾರ್ಮಿಕರು ದೇಶದಲ್ಲಿ ಬೀದಿಗೆ ಬೀಳುತ್ತಿದ್ದಾರೆ. ಇದರಿಂದಕರಕುಶಲ ನೌಕರರು, ಗಾರ್ಮೆಂಟ್ಸ್ ನೌಕರರು, ಪೌರಕಾರ್ಮಿಕರು, ಸಣ್ಣ ಉದ್ಯಮಿಗಳು, ಬೀದಿಬದಿ ವ್ಯಾಪಾರಿಗಳು, ಅಂಗನವಾಡಿ ನೌಕರರಿಗೆ ದಿಕ್ಕು ತೋಚದಂತಾಗಿದೆ’ ಎಂದು ತಿಳಿಸಿದರು.
‘ಆರ್ಥಿಕ ಕುಸಿತದಿಂದ ಗ್ರಾಮೀಣ ಭಾಗದ ಕೈಗಾರಿಕೆಗಳು ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರಲಾಯಿತು. ಇದು ಗಾಯದ ಮೇಲೆ ಬರೆ ಎಳೆದಂತಾಯಿತು.ಇದರಿಂದ ಕೈಮಗ್ಗ ಉತ್ಪನ್ನಗಳಿಗೆ ಶೂನ್ಯ ತೆರಿಗೆ ತನ್ನಿ ಎಂದು ಹೋರಾಟ ಆರಂಭಿಸಿದೆವು. ಆದರೆ, ಸರ್ಕಾರಗಳು ಮಾತ್ರ ಕಣ್ಣು ತೆರೆಯುತ್ತಿಲ್ಲ’ ಎಂದರು.
ಪಾಪಕ್ಕೆ ಪ್ರಾಯಶ್ಚಿತ್ತ:‘ಉಪವಾಸ ಸತ್ಯಾಗ್ರಹಕ್ಕೆ ಬರಬೇಡಿ ಎಂದು ಜನರಲ್ಲಿ ಕೋರಿಕೊಂಡಿದ್ದೇವೆ. ಜನತೆ ಹಬ್ಬ ಆಚರಿಸಬೇಕು. ಹಬ್ಬ ಆಚರಣೆ ಕೂಡಾ ರಾಕ್ಷಸತೆಯ ವಿರುದ್ಧದ ಹೋರಾಟದಲ್ಲಿ ಪವಿತ್ರತೆಯ ಗೆಲುವಿನ ಸಂಕೇತವಾಗಿದೆ. ಈ ಹೋರಾಟದಲ್ಲಿಒಂದು ವೇಳೆ ನಾವು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ಅದಕ್ಕೆ ಯಾರೂ ಹೊಣೆಗಾರರಲ್ಲ. ನಾವೇ ಮಾಡಿದ ಪಾಪಕ್ಕಾಗಿ ಅನುಭವಿಸುತ್ತಿರುವ ಪ್ರಾಯಶ್ಚಿತ್ತ ಅಂದುಕೊಳ್ಳಲಾಗುವುದು. ಸರ್ಕಾರ ಮತ್ತು ಅಧಿಕಾರಿಗಳ ಕಿವುಡು ನಿವಾರಣೆಯಾದರೆ ಪವಿತ್ರ ಆರ್ಥಿಕತೆಯ ಬಗ್ಗೆ ಮನವರಿಕೆ ಮಾಡುತ್ತೇವೆ’ ಎಂದು ಪ್ರಸನ್ನ ತಿಳಿಸಿದರು.
ಗ್ರಾಮಸೇವಾ ಸಂಘದ ತಜ್ಞರ ಸಮಿತಿಯ ಅಧ್ಯಕ್ಷ ವಿನೋದ್ ವ್ಯಾಸಲು, ‘ಪವಿತ್ರ ಆರ್ಥಿಕತೆ ಎಂಬುದು ಕನಿಷ್ಠ ಶೇ 60 ರಷ್ಟು ಮಾನವಶ್ರಮ ಹಾಗೂ ಗರಿಷ್ಠ ಶೇ 40 ಸ್ವಯಂಚಾಲಿತ ಯಂತ್ರಗಳ ಬಳಕೆ. ಪವಿತ್ರ ಆರ್ಥಿಕತೆಯನ್ನು ಜಾರಿಗೆ ತರುವಲ್ಲಿ ಸರ್ಕಾರದ ಪಾತ್ರ ದೊಡ್ಡದು. ಈ ವಿಚಾರವಾಗಿ ಸರ್ಕಾರಕ್ಕೆ ನೆರವು ನೀಡಲು ಸಿದ್ಧರಿದ್ದೇವೆ’ ಎಂದರು.
*
ಎನ್‌ಆರ್‌ಸಿ ಜಾರಿಗೆ ತರುವುದು ಸರಿಯಲ್ಲ ಗುಡ್ಡಗಾಡು ಪ್ರದೇಶದ ಜನರಲ್ಲಿ ದಾಖಲೆಗಳು ಇರುವುದಿಲ್ಲ. ನನ್ನನ್ನು ಬಂಧಿಸಲು ಮುಂದಾದರೂ ದಾಖಲೆ ನೀಡುವುದಿಲ್ಲ.
-ಪ್ರಸನ್ನ, ರಂಗಕರ್ಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.