ಬೆಂಗಳೂರು: ಹೈದರಾಬಾದ್ ಕರ್ನಾಟಕ (ಹೈ–ಕ) ಪ್ರದೇಶದ ಸರ್ಕಾರಿ ಹುದ್ದೆಗಳಿಗೆ ಪ್ರತ್ಯೇಕವಾದ ನೇಮಕಾತಿ, ಜೇಷ್ಠತೆ, ಬಡ್ತಿ ಮತ್ತು ವರ್ಗಾವಣೆ ನೀತಿ ಅನುಸರಿಸಬೇಕು. ಹೈ–ಕದ ಅಧಿಕಾರಿ/ನೌಕರರ ವೃಂದವನ್ನು ಪ್ರತ್ಯೇಕ ಘಟಕವನ್ನಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ಕರ್ನಾಟಕದ ಇತರೆ ಭಾಗದ ಯಾವುದೇ ವೃಂದಕ್ಕೂ ಸೇರಿಸಬಾರದು ಎಂದು ಮೈಸೂರು, ಕಿತ್ತೂರು ಮತ್ತು ಕರಾವಳಿ ಕರ್ನಾಟಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ನಿವೃತ್ತ ಐಎಫ್‌ಎಸ್ ಅಧಿಕಾರಿ ಗಾ.ನಂ. ಶ್ರೀಕಂಠಯ್ಯ, ‘ಸಂವಿಧಾನಕ್ಕೆ 371–ಜೆ ಅಡಿ ತಿದ್ದುಪಡಿ ಮಾಡುವುದರ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಇನ್ನಿತರ ವಿಷಯಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮೀಸಲಾತಿ ನೀಡಲಾಗಿದೆ. ಇದರಿಂದ ರಾಜ್ಯದ ಇತರೆ ಭಾಗದವರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.
ಸಮಿತಿಯ ಉಪಾಧ್ಯಕ್ಷರಾದ ನಿವೃತ್ತ ಪೊಲೀಸ್ ಅಧಿಕಾರಿ ಎನ್. ನಾಗರಾಜ್, ‘371–ಜೆ ಪ್ರಕಾರ ಹೈದರಾಬಾದ್ ಕರ್ನಾಟಕದ (ಹೈ–ಕ) ಅಧಿಕಾರಿ/ನೌಕರರ ಪ್ರತ್ಯೇಕವಾದ ವೃಂದ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಹೈ–ಕದ ಎಲ್ಲ ಅಧಿಕಾರಿಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಿ, ವಿವಿಧ ಹುದ್ದೆಗಳಿಗೆ ನೇಮಕಾತಿ ಮತ್ತು ಬಡ್ತಿ ನೀಡುವಾಗ ಆ ಭಾಗಕ್ಕೆ ಮಾತ್ರ ಅನ್ವಯಿಸುವಂತೆ ಮಾಡಬೇಕು. ಆದರೆ, ವಾಸ್ತವದಲ್ಲಿ ಕರ್ನಾಟಕದ ಕೇಡರ್‌ನಲ್ಲಿ ಅವರೆಲ್ಲರನ್ನು ವಿಲೀನಗೊಳಿಸುತ್ತಿರುವುದು 371–ಜೆ ಆಶಯಕ್ಕೆ ವಿರುದ್ಧವಾಗಿದೆ’ ಎಂದರು.
‘ರಾಜ್ಯಮಟ್ಟದ ವಿವಿಧ ಕಚೇರಿ ಮತ್ತು ಸಂಸ್ಥೆಗಳಲ್ಲಿ ಹೈ–ಕ ಭಾಗದವರಿಗೆ ಶೇ 8 ರಷ್ಟು ಮೀಸಲಾಗಿರುವ ಹುದ್ದೆಗಳನ್ನು ರದ್ದುಪಡಿಸಬೇಕು. ಹೈ–ಕ ಭಾಗದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಒಂದೇ ಬಾರಿಗೆ ಪ್ರತ್ಯೇಕವಾಗಿ (ಇತರೆ ಕರ್ನಾಟಕದ ಭಾಗದ ಖಾಲಿ ಹುದ್ದೆಗಳನ್ನು ಬಿಟ್ಟು) ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಹಣಕಾಸು ಇಲಾಖೆಯ ಅನುಮತಿಯೂ ಬೇಕಾಗಿರುವುದಿಲ್ಲ. ರಾಜ್ಯದ ಬೇರೆ ಭಾಗದ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಹಣಕಾಸು ಇಲಾಖೆಯ ಅನುಮತಿ ಪಡೆದುಕೊಳ್ಳಬೇಕೆಂಬ ನಿಯಮವಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.