ಬೆಂಗಳೂರು: ‘ಪ್ರೇಮ ಬರಹ ಚಿತ್ರಕ್ಕೆ ನೀಡಿದ್ದ ಮುಂಗಡ ಹಣ ವಾಪಸ್ ನೀಡಲು ಸಾಧ್ಯವಾಗದೆಚೇತನ್ ಹೀಗೆಲ್ಲ ಆಟವಾಡುತ್ತಿದ್ದಾರೆ’ ಎಂದು ಅರ್ಜುನ್ ಸರ್ಜಾ ಸಂಬಂಧಿ ಪ್ರಶಾಂತ್ ಸಂಬರ್ಗಿ ಮಾಡಿದ ಆರೋಪವನ್ನು ಚೇತನ್ ತಳ್ಳಿಹಾಕಿದ್ದಾರೆ.
‘ಅರ್ಜುನ್ ಸರ್ಜಾ ನಿರ್ದೇಶನದ ‘ಪ್ರೇಮ ಬರಹ’ ಚಿತ್ರಕ್ಕೆ ಚೇತನ್ ನಾಯಕನಾಗಿ ಆಯ್ಕೆಯಾಗಿದ್ದರು. ಅದಕ್ಕಾಗಿ ಹತ್ತು ಲಕ್ಷ ಮುಂಗಡ ಹಣವನ್ನೂ ಪಡೆದುಕೊಂಡಿದ್ದರು. ನಂತರ ಅವರ ಅಭಿನಯ ಇಷ್ಟವಾಗದೆ ಚಿತ್ರದ ನಾಯಕನನ್ನು ಬದಲಾಯಿಸಲಾಯಿತು. ಮುಂಗಡ ಹಣವನ್ನು ವಾಪಸ್ ಕೊಡಲು ಸಾಧ್ಯವಾಗದೆ,ಶ್ರುತಿ ಅವರನ್ನು ಮುಂದಿಟ್ಟುಕೊಂಡು ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ. ಜೊತೆಗೆ‘ಹಣ ವಾಪಸ್ ನೀಡುವಂತೆ ಚೇತನ್‌ಗೆ ನೋಟೀಸ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರೋಪನ್ನು ತಳ್ಳಿಹಾಕಿರುವ ಚೇತನ್, ‘ಮುಂಗಡ ಹಣ ತೆಗೆದುಕೊಂಡಿರುವುದು ನಿಜ. ಆದರೆ ಅದಕ್ಕೂ ಶ್ರುತಿ ಹರಿಹರನ್ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಯಾವ ನೋಟೀಸ್ ಕೂಡ ಬಂದಿಲ್ಲ. ಅರ್ಜುನ್ ಅವರು ನನ್ನ ಬಳಿ ನೇರವಾಗಿ ಕೇಳಿದರೆ ಈಗಲೇ ಹಣ ವಾಪಸ್ ಕೊಡಲು ಸಿದ್ಧ’ ಎಂದು ಹೇಳಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಚೇತನ್ ‘ಪ್ರಜಾವಾಣಿ’ ಜತೆಗೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
‘ಸಿನಿಮಾರಂಗದಲ್ಲಿ ಹೀಗೆ ಎಷ್ಟೋ ವರ್ಷಗಳ ಮುಂಚೆಗೆ ಅಡ್ವಾನ್ಸ್ ಹಣವನ್ನು ಕೊಡುವುದು ಮಾಮೂಲು.ಕೆಲವು ವರ್ಷದ ಹಿಂದೆ ನಾನು ಅರ್ಜುನ್ ಸರ್ಜಾ ಅವರ ಜತೆ ಪ್ರೇಮ ಬರಹ ಎಂಬ ಸಿನಿಮಾ ಮಾಡಬೇಕು ಎಂಬ ಪ್ಲ್ಯಾನ್ ಇತ್ತು. ಅವರು ನನ್ನ ಬಳಿ ನಟಿಸುವಂತೆ ಕೇಳಿದ್ದರು. ಒಂಬತ್ತು ಲಕ್ಷ ರೂಪಾಯಿ ಮುಂಗಡ ಹಣವನ್ನೂ ಕೊಟ್ಟರು. ಆಮೇಲೆ ಫೋಟೊ ಶೂಟ್ ಮಾಡಿದ್ವಿ. ಪ್ರೀಶೂಟ್ ಅನ್ನೂ ಮಾಡಿದ್ದೆವು. ಅರ್ಜುನ್ ಸರ್ಜಾ ನನ್ನ ಜತೆಗೆ ಚೆನ್ನಾಗಿಯೇ ನಡೆದುಕೊಂಡಿದ್ದಾರೆ. ಬಹಳ ವೃತ್ತಿಪರವಾಗಿ ನಡೆದುಕೊಂಡಿದ್ದಾರೆ. ಪ್ರೀತಿ ತೋರಿಸಿದ್ದಾರೆ. ಹಾಗಂದ ತಕ್ಷಣ ಶ್ರುತಿ ಹರಿಹರನ್ ವಿಷಯದಲ್ಲಿ ಅವರು ಅಪರಾಧಿನೋ ನಿರಪರಾಧಿನೋ ಎಂದು ನಾನು ತೀರ್ಮಾನಿಸಲುಸಾಧ್ಯವಿಲ್ಲ. ಅವರ ಬಗ್ಗೆ ನನಗೆ ಯಾವುದೇ ವೈಯುಕ್ತಿಕ ದ್ವೇಷ ಇಲ್ಲ’ ಎಂದರು.
‘ನನಗೆ ಆಗ ಕೆಲವು ಪರಭಾಷೆಯ ಸಿನಿಮಾಗಳು ಬಂದಿದ್ದವು. ಆಗ ನಾನು ಅರ್ಜುನ್ ಸರ್ಜಾ ಅವರ ಬಳಿ ಈ ರೀತಿಯ ಸಿನಿಮಾ ಆಫರ್‌ಗಳು ಬರುತ್ತಿವೆ ಏನು ಮಾಡಲಿ?’ ಎಂದು ಕೇಳಿದ್ದೆ. ಆಗ ಅವರು, ‘ಇಲ್ಲ ನನ್ನ ಸಿನಿಮಾ ಮಾಡೋಣ’ ಎಂದಿದ್ದರು. ಅದಾದ ಆರೇಳೂ ತಿಂಗಳ ನಂತರ ನಮ್ಮಲ್ಲ ಕೆಲವು ಸೃಜನಶೀಲ ಭಿನ್ನಾಭಿಪ್ರಾಯಗಳು ಬಂದವು. ಆದ್ದರಿಂದ ಅವರು ‘ಈ ಸಿನಿಮಾ ಬೇಡ, ನಾವು ಮುಂದೆ ಬೇರೆ ಭಾಷೆಗಳಲ್ಲಿಯೂ ಸಿನಿಮಾ ಮಾಡುವ ಯೋಚನೆ ಇದೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡೋಣ. ನಾನು ಕೊಟ್ಟ ಹಣ ಅಡ್ವಾನ್ಸ್ ಹಾಗೆ ಇರಲಿ’ ಎಂದು ಹೇಳಿದ್ದರು.
‘ಈಗ ಇಂಥ ಆರೋಪಗಳು ಕೇಳಿಬರುತ್ತಿರುವುದು ನಿಜಕ್ಕೂ ಬೇಸರ ಉಂಟುಮಾಡಿದೆ. ಯಾಕೆಂದರೆ ಅರ್ಜುನ್ ಸರ್ಜಾ ಮತ್ತು ಅವರ ಕುಟುಂಬ ನನಗೆ ಪರಿಚಯ. ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರ ಜತೆ ನಾನು ಇತ್ತೀಚೆಗಿನವರೆಗೂ ಟಚ್‌ನಲ್ಲಿ ಇದ್ದೇನೆ. ಹಾಗೆಯೇ ಶ್ರುತಿ ಮತ್ತು ಅವರ ಕುಟುಂಬವೂ ನನಗೆ ಪರಿಚಯ, ಅವರ ತಾಯಿಯೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಅರ್ಜುನ್ ಸರ್ಜಾ ಮಾತನಾಡಿಲ್ಲ. ನನಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟ ಇಲ್ಲ. ಹಣವೇ ಮುಖ್ಯ ಎಂದು ನಾನು ಅಂದುಕೊಂಡಿಲ್ಲ. ಹಣಕ್ಕಾಗಿ ನಾನು ಯಾವ ಕೆಲಸವನ್ನೂ ಮಾಡುವುದಿಲ್ಲ. ಅರ್ಜುನ್ ಸರ್ಜಾ ಮುಂದೆ ನನ್ನ ಜತೆ ಕೆಲಸ ಮಾಡುವುದಿಲ್ಲ ಎಂದರೆ ನೇರವಾಗಿ ಬಂದು ಕೇಳಲಿ, ಖಂಡಿತ ನಾನು ಹಣ ವಾಪಸ್ ಕೊಡುತ್ತೇನೆ. ನಾನೇ ಬಡವರ ಬಳಿಗೆ ಹೋಗಿ ಹಣ ಕೊಡುತ್ತಿರುತ್ತೇನೆ. ಹಾಗಿರುವಾಗ ನನಗೆ ಯಾವ ಸಂಕಷ್ಟವೂ ಇಲ್ಲ’ ಎಂದು ಹೇಳಿದರು.
ನನ್ನ ಮಟ್ಟಿಗೆ ವಸ್ತುನಿಷ್ಠತೆ ಇರುವುದು ತುಂಬ ಮುಖ್ಯ. ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ಕಾನೂನಾತ್ಮಕವಾಗಿ ಹೊರಗೆ ಬರಲಿ. ನಮ್ಮ ಫೈರ್ ಸಂಸ್ಥೆ ಮತ್ತು ಆಂತರಿಕ ದೂರು ಸಮಿತಿಯ ಅಗತ್ಯವನ್ನು ತಿಳಿಸಿಕೊಡುವುದಕ್ಕಾಗಿ ಇತ್ತೀಚೆಗೆ ಪ್ರಶ್ನೆ ಮಾಡಿದ್ದೆವು. ಶ್ರುತಿ ಹರಿಹರನ್ಅ ದರ ಸದಸ್ಯೆ ಆಗಿದ್ದರಿಂದ ಆ ಪತ್ರಿಕಾಗೋಷ್ಠಿಗೆ ಬಂದಿದ್ದರು. ನಾನು ಕಳೆದ ನಾಲ್ಕು ವರ್ಷಗಳಿಂದ ಲೈಂಗಿಕ ಕಿರುಕುಳದ ವಿರುದ್ಧ ಹೋರಾಡುತ್ತಿದ್ದೇನೆ. ಮೀ ಟೂ ಆಂದೋಲನ ವ್ಯಾಪಕವಾಗಬೇಕು ಎಂಬ ಉದ್ದೇಶದಿಂದ ಫೈರ್ ಸಂಸ್ಥೆ ಪತ್ರಿಕಾಗೋಷ್ಠಿ ನಡೆಸಿತ್ತು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.