ಬೆಂಗಳೂರು: ವಿವಿಧ ಇಲಾಖೆಗಳ ತಾಂತ್ರಿಕ ಹುದ್ದೆಗಳಲ್ಲಿ ವಿರಾಜಮಾನರಾಗಿರುವ ಐಎಎಸ್ ಅಧಿಕಾರಿಗಳ ಕಾರುಬಾರಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ.
26 ವರ್ಷಗಳ ಬಳಿಕ ಸಚಿವಾಲಯದ ವೃಂದ ಹಾಗೂ ನೇಮಕಾತಿ ನಿಯಮಗಳಿಗೆ ಸಮಗ್ರ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಿಯಮಗಳನ್ನು 1992ರಲ್ಲಿ ರಚಿಸಲಾಗಿತ್ತು. ಬಳಿಕ ಕೆಲವು ತಿದ್ದುಪಡಿಗಳನ್ನು ಮಾಡಲಾಗಿತ್ತು. ‘ವೃಂದ ಹಾಗೂ ನೇಮಕಾತಿ ನಿಯಮಗಳನ್ನು ಕನಿಷ್ಠ 3 ವರ್ಷಗಳಿಗೊಮ್ಮೆ ಸಮಗ್ರ ಪರಿಷ್ಕರಣೆ ಮಾಡಬೇಕಿತ್ತು. ಆ ಕೆಲಸ ಆಗಿರಲಿಲ್ಲ. ಪ್ರಸ್ತುತ ಕರಡು ನಿಯಮಗಳನ್ನು ಸಿದ್ಧಪಡಿಸಲಾಗಿದೆ. ಇಲಾಖೆಗಳ ಮುಖ್ಯಸ್ಥರು ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ 15 ದಿನಗಳಲ್ಲಿ ಅಭಿಪ್ರಾಯ ತಿಳಿಸಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನಿರ್ದೇಶನದ ಮೇರೆಗೆ ಇಲಾಖೆ ವ್ಯವಸ್ಥೆಯ ಸಮಗ್ರ ಬದಲಾವಣೆಗೆ ಮುಂದಾಗಿದೆ.
ವಿವಿಧ ವೃಂದದ ಹುದ್ದೆಗಳು ಎನ್‌ಕೇಡರ್ (ಐಎಎಸ್, ಐಎಫ್‌ಎಸ್, ಐಪಿಎಸ್, ಕೆಎಎಸ್, ಕೆಇಎಸ್) ಆಗಿರುವ ಬಗ್ಗೆ ಖಚಿತಪಡಿಸಿಕೊಂಡು ಮಾಹಿತಿ ನೀಡಬೇಕು. ಈ ಹುದ್ದೆಗಳನ್ನು ಬೇರೆ ವೃಂದದಿಂದ ಭರ್ತಿ ಮಾಡಲು ಅವಕಾಶ ಇದ್ದರೆ ಈ ಬಗ್ಗೆ ತಿಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಹುದ್ದೆಗಳಿಗೆ ಮುಖ್ಯ ಎಂಜಿನಿಯರ್‌ಗಳನ್ನು ನೇಮಿಸಲು ಪ್ರಸ್ತಾವ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.
ಹುದ್ದೆಗಳಿಗೆ ನಿಗದಿಪಡಿಸಿರುವ ನೇಮಕಾತಿ ವಿಧಾನ ಸರಿಯಾಗಿದೆಯೇ ಅಥವಾ ಬದಲಾಯಿಸಬೇಕೇ ಎಂಬ ಬಗ್ಗೆ ಮಾಹಿತಿ ನೀಡಬೇಕು. ಹುದ್ದೆಗಳ ಹೆಸರು, ವೇತನಶ್ರೇಣಿ, ಹುದ್ದೆಗಳ ಸಂಖ್ಯೆ, ಹುದ್ದೆಗಳ ಹೆಸರಿನಲ್ಲಿ ಬದಲಾವಣೆ ಬೇಕಿದ್ದಲ್ಲಿ ಸೂಕ್ತ ದಾಖಲೆ ಸಲ್ಲಿಸಬೇಕು. ಹುದ್ದೆಗಳು ಕಾಯಂ ಆಗಿ ಮೇಲ್ದರ್ಜೆಗೆ ಏರಿದ ಬಗ್ಗೆಯೂ ವಿವರ ನೀಡಬೇಕು ಎಂದೂ ಸೂಚಿಸಲಾಗಿದೆ.
ಸದ್ಯ ತಾಂತ್ರಿಕ ಹುದ್ದೆಗಳಿಗೂ ಐಎಎಸ್, ಐಎಫ್‌ಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರಿಗೆ ತಾಂತ್ರಿಕ ಪರಿಣತಿ ಕಡಿಮೆ. ಅದರ ಬದಲು ತಾಂತ್ರಿಕ ಅಧಿಕಾರಿಗಳನ್ನು ನೇಮಿಸಿದರೆ ಗುಣಮಟ್ಟ ಹೆಚ್ಚಾಗುತ್ತದೆ ಎಂಬ ವಾದವೂ ಇದೆ. ಈ ಹುದ್ದೆಗಳಿಗೆ ಮುಖ್ಯ ಎಂಜಿನಿಯರ್‌ಗಳನ್ನೇ ನೇಮಕ ಮಾಡಬೇಕು ಎಂದು ಕರ್ನಾಟಕ ಎಂಜಿನಿಯರ್‌ಗಳ ಸಂಘ ಒತ್ತಾಯಿಸಿದೆ. ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ.
‘ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂರು ವಲಯಗಳಲ್ಲಿ ಪ್ರತಿವರ್ಷ ₹ 4 ಸಾವಿರ ಕೋಟಿಯ ಕಾಮಗಾರಿ ನಡೆಯುತ್ತದೆ. ತಾಂತ್ರಿಕವಾಗಿ ಪರಿಶೀಲಿಸಿ ತಾಂತ್ರಿಕ ಅನುಮೋದನೆ ನೀಡಬೇಕಿದೆ. ಈ ಇಲಾಖೆಗೆ ಪ್ರಧಾನ ಎಂಜಿನಿಯರ್ ಮಟ್ಟದ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಿಸಬೇಕು. ಅದೇ ರೀತಿ, ನಗರಾಭಿವೃದ್ಧಿ ಇಲಾಖೆ ಹಾಗೂ ವಸತಿ ಇಲಾಖೆಗೂ ನೇಮಕ ಮಾಡಬೇಕು’ ಎಂದು ಸಂಘ ಒತ್ತಾಯಿಸಿದೆ.
‘ಸ್ಮಾರ್ಟ್ ಸಿಟಿ ಯೋಜನೆಯ ಆಯುಕ್ತರ ಹುದ್ದೆಗೆ ಕಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದು ಸಹ ಯೋಜನೆಯ ಹಿನ್ನಡೆಗೆ ಕಾರಣ. ಅದರ ಬದಲು ಎಂಜಿನಿಯರ್‌ಗಳನ್ನೇ ನೇಮಕ ಮಾಡಬೇಕು’ ಎಂದು ಅಧಿಕಾರಿಯೊಬ್ಬರು ಒತ್ತಾಯಿಸಿದರು.
‘ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ 23 ಕಡೆಗಳಲ್ಲಿ ಪ್ರಧಾನ ಎಂಜಿನಿಯರ್ ವೃಂದದ ಹುದ್ದೆಗಳು ಖಾಲಿ ಇವೆ. ಇಲ್ಲಿಗೆ ತಾಂತ್ರಿಕ ತಜ್ಞರ ನೇಮಿಸಬೇಕು’ ಎಂದು ಅವರು ಆಗ್ರಹಿಸಿದರು.
ಎಲ್ಲೆಲ್ಲಿ ಐಎಎಸ್ ಅಧಿಕಾರಿಗಳು
* ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ
* ಕೆ–ಶಿಪ್ ಮುಖ್ಯ ಯೋಜನಾಧಿಕಾರಿ
* ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಯೋಜನಾಧಿಕಾರಿ
* ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
* ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ
* ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ
* ಕೊಳಚೆ ನಿರ್ಮೂಲನಾ ಮಂಡಳಿ ಆಯುಕ್ತ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿ
* ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ
* ವಸತಿ ಇಲಾಖೆ ಕಾರ್ಯದರ್ಶಿ
* ಕಾಡಾ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.