ಬೆಂಗಳೂರು: ‘ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಭಾರತೀಯ ವಕೀಲರ ಸಂಖ್ಯೆ ತುಂಬಾ ಕಡಿಮೆಯಿದೆ. ಐಸಿಜೆ ವಕೀಲಿಕೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಹೇಗ್ ಅಥವಾ ಜಿನೀವಾದಲ್ಲಿ ಕಾರ್ಯನಿರ್ವಹಿಸುವ ಗುರಿಯನ್ನು ಭಾರತೀಯ ವಕೀಲರು ಹೊಂದಬೇಕು ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು’ ಎಂದು ಐಸಿಜೆ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಸಲಹೆ ನೀಡಿದರು.
ಅಖಿಲ ಭಾರತ ಬುದ್ಧಿಜೀವಿಗಳ ಸಂಸ್ಥೆ (ಎಐಸಿಒಐ) ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಐಸಿಜೆ ಎದುರು ಭಾರತದ ಸಾಕಷ್ಟು ಪ್ರಕರಣಗಳು ಬರುತ್ತವೆ. ಆದರೆ, ನಮ್ಮ ಪ್ರಕರಣಗಳ ಪರ ವಾದ ಮಾಡಲು ಫ್ರಾನ್ಸ್, ಅಮೆರಿಕ ಮತ್ತು ಇಂಗ್ಲೆಂಡ್‌ನ ವಕೀಲರನ್ನು ಅವಲಂಬಿಸುವ ಸ್ಥಿತಿ ಇದೆ’ ಎಂದರು.
ವಿಭಿನ್ನ ಅನುಭವ: ‘ಐಸಿಜೆಯಲ್ಲಿ 15 ನ್ಯಾಯಮೂರ್ತಿಗಳು ಇರುತ್ತಾರೆ. ಅಂತರರಾಷ್ಟ್ರೀಯ ಕಾನೂನಿನ ಅರಿವು ಹೊಂದಿರುವ ಬೇರೆ ಕ್ಷೇತ್ರಗಳ ಗಣ್ಯರು ಇರುತ್ತಾರೆ. ನ್ಯಾಯಾಂಗ ಹಿನ್ನೆಲೆ ಹೊಂದಿದವರಿಗಿಂತ ಬೇರೆ ಹಿನ್ನೆಲೆ ಹೊಂದಿರುವವರ ಯೋಚನೆಗಳು ಭಿನ್ನವಾಗಿರುತ್ತವೆ. ಎಲ್ಲರ ಅಭಿಪ್ರಾಯ, ಸಲಹೆ ಪಡೆದು ತೀರ್ಪು ನೀಡುವುದರಿಂದ ಐಸಿಜೆಯಲ್ಲಿ ಕಾರ್ಯನಿರ್ವಹಿಸುವ ಅನುಭವ ವಿಭಿನ್ನವಾಗಿರುತ್ತದೆ’ ಎಂದು ಹೇಳಿದರು.
ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ, ‘ದೇಶ ಮತ್ತು ಜನರ ನಡುವೆ ವಿವಾದ ಹಾಗೂ ಭಿನ್ನಾಭಿಪ್ರಾಯ ಮೂಡುವುದು ಸಹಜ. ಇದಕ್ಕೆ ಸಂಘರ್ಷ ಮತ್ತು ಯುದ್ಧಗಳೇ ಪರಿಹಾರವಲ್ಲ. ಇಂತಹ ವ್ಯಾಜ್ಯಗಳಿಗೆ ನಿಯಮ ಮತ್ತು ಮಾರ್ಗದರ್ಶನದ ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದರು.
ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ‘ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದೇ ಸಹಜ ನ್ಯಾಯದ ಮೂಲತತ್ವ. ಯಾವುದೇ ನ್ಯಾಯಾಲಯವಾದರೂ ಶಾಂತಿ ಮತ್ತು ನ್ಯಾಯಕ್ಕೆ ಒತ್ತು ನೀಡುತ್ತದೆ’ ಎಂದರು.
ನಿವೃತ್ತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ, ಕೆ.ಶ್ರೀಧರ ರಾವ್, ಅಶೋಕ ಬಿ. ಹಿಂಚಗೇರಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.