ಬೆಂಗಳೂರು: ‘ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ’ ಎಂದು ಜೆಡಿಎಸ್‌ನ ಎಚ್.ಡಿ. ರೇವಣ್ಣ ಅವರು ವಿಧಾನಸಭೆಯಲ್ಲಿ ಮಂಗಳವಾರ ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಅಕ್ರಮದ ಮೇಲಿನ ಚರ್ಚೆ ವೇಳೆ ವಿಶೇಷ ತನಿಖಾ ದಳಗಳ (ಎಸ್‌ಐಟಿ) ಕಾರ್ಯನಿರ್ವಹಣೆ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರಸ್ತಾಪಿಸಿದರು. ‘ಒಂದು ಎಸ್‌ಐಟಿ ರೇವಣ್ಣ, ಅವರ ಪತ್ನಿಯ ಬಂಧನಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತದೆ. ರೇವಣ್ಣ ಅವರನ್ನು ಬೆನ್ನುಹತ್ತಿ ಬಂಧಿಸುತ್ತದೆ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ 40 ದಿನಗಳಾದರೂ ಶಾಸಕ ಬಿ. ನಾಗೇಂದ್ರ ಅವರನ್ನು ಬಂಧಿಸಿರಲಿಲ್ಲ’ ಎಂದರು.
ತಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ರೇವಣ್ಣ, ‘40 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, 25 ವರ್ಷಗಳಿಂದ ಶಾಸಕನಾಗಿದ್ದೇನೆ. ನನ್ನ ವಿರುದ್ಧ ಹೆಣ್ಣು ಮಗಳೊಬ್ಬಳನ್ನು ಕರೆತಂದು ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಯಲ್ಲಿ ದೂರು ಬರೆಸಿಕೊಂಡರು. ಈ ಅಧಿಕಾರಿ ಡಿಜಿಪಿ ಹುದ್ದೆಯಲ್ಲಿರಲು ನಾಲಾಯಕ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇವಣ್ಣ ಕುಟುಂಬದ ಪರವಾಗಿ ಅಶೋಕ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ದೊಡ್ಡದು, ರೇವಣ್ಣ ಮಕ್ಕಳ ಪ್ರಕರಣ ಸಣ್ಣದು ಎಂದು ಸಮರ್ಥನೆ ಮಾಡುತ್ತಿದ್ದೀರಾ’ ಎಂದು ಕೇಳಿದರು.
‘ರೇವಣ್ಣ ಕುಟುಂಬವನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಎರಡು ಎಸ್‌ಐಟಿಯಲ್ಲಿರುವ ಅಧಿಕಾರಿಗಳು ವಿಭಿನ್ನವಾಗಿ ಹೇಗೆ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಉದಾಹರಣೆ ನೀಡಿದೆ’ ಎಂದು ಅಶೋಕ ಸಮಜಾಯಿಷಿ ನೀಡಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಹೋದ ಹಣವನ್ನು ವಾಪಸ್ ತರಬಹುದು. ಆದರೆ, ಹೆಣ್ಣು ಮಕ್ಕಳ ಮಾನ ವಾಪಸ್ ಬರುತ್ತದಾ’ ಎಂದು ಕಾಂಗ್ರೆಸ್‌ನ ಎಸ್.ಎನ್. ನಾರಾಯಣಸ್ವಾಮಿ ಪ್ರಶ್ನಿಸಿದರು.
ಎಸ್‌ಐಟಿ -ಎಸ್‌ಎಸ್‌ಐಟಿ
‘ರೇವಣ್ಣ ಕುಟುಂಬದವರ ವಿರುದ್ಧ ತನಿಖೆ ನಡೆಸುತ್ತಿರುವುದು ವಿಶೇಷ ತನಿಖಾ ದಳ (ಎಸ್‌ಐಟಿ). ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವುದು ‘ಸಿದ್ದರಾಮಯ್ಯ ಶಿವಕುಮಾರ್ ತನಿಖಾ ದಳ’ (ಎಸ್‌ಎಸ್‌ಐಟಿ)’ ಎಂದು ಬಿಜೆಪಿಯ ಎಸ್. ಸುರೇಶ್ ಕುಮಾರ್ ಹೇಳಿದರು. ಅದಕ್ಕೆ ಆಕ್ಷೇಪಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಎಸ್‌ಐಟಿ ಮತ್ತು ಎಸ್‌ಎಸ್‌ಐಟಿ ಎಂಬ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.