ADVERTISEMENT

RSSನ ಸಂಸ್ಥೆಗಳಿಗೆ ನೀಡಿದ ಜಮೀನು ಬಳಸದಿದ್ದರೆ ಸರ್ಕಾರಕ್ಕೆ ವಾಪಸ್: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 11:32 IST
Last Updated 29 ಆಗಸ್ಟ್ 2024, 11:32 IST
ಸಚಿವ ಎಂ.ಬಿ ಪಾಟೀಲ
ಸಚಿವ ಎಂ.ಬಿ ಪಾಟೀಲ   

ಬೆಂಗಳೂರು: ಸಂಘ ಪರಿವಾರದ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಿರುವ ಒಟ್ಟು ಜಮೀನಿನಲ್ಲಿ ಬಳಸಿಕೊಳ್ಳದೇ ಇರುವ ಜಮೀನು, ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಿರುವ ಜಮೀನು ನಿಗದಿತ ಸಮಯಕ್ಕೆ ಬಳಸಿಕೊಳ್ಳದೇ ಇದ್ದರೆ ವಾಪಸ್‌ ಪಡೆಯಲಾಗುವುದು. ಅದೇ ರೀತಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಕೈಗಾರಿಕಾ ಉದ್ದೇಶಕ್ಕೆ ಪಡೆದಿರುವ ಜಮೀನು ಬಳಸಿಕೊಳ್ಳದೇ ಇದ್ದರೆ ಆ ಜಮೀನುಗಳನ್ನೂ ಹಿಂದಕ್ಕೆ ಪಡೆಯಲು ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ನಿವೇಶನ ಹಂಚಿಕೆ ಮಾಡಿರುವುದು ಸಮರ್ಥಿಸಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿ.ಎ. ನಿವೇಶನ ಹಂಚಿಕೆಯನ್ನು ನಾರಾಯಣಸ್ವಾಮಿ ಮತ್ತು ಲಹರ್‌ ಸಿಂಗ್ ಪ್ರಶ್ನಿಸಿರುವುದರಿಂದ ಇವರದೂ (ಬಿಜೆಪಿ) ಹಂತ ಹಂತವಾಗಿ ಬಿಚ್ಚಿಡುತ್ತೇನೆ. ಇವರ್‍ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಚಾಣಕ್ಯ ವಿಶ್ವವಿದ್ಯಾಲಯಕ್ಕೆ ದೇವನಹಳ್ಳಿಯಲ್ಲಿ ಹೈಟೆಕ್‌ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ಪಾರ್ಕ್‌ನಲ್ಲಿ  116 ಎಕರೆ ಜಮೀನು ನೀಡಲಾಗಿದೆ. ಈ ವಿಶ್ವವಿದ್ಯಾಲಯಕ್ಕೆ ಏರೋಸ್ಫೇಸ್‌ ಮತ್ತು ಡಿಫೆನ್ಸ್‌ ಕ್ಷೇತ್ರದಲ್ಲಿ ಅನುಭವ ಇತ್ತೇ?. ಇಷ್ಟು ಜಮೀನಿನ ಬೆಲೆ ₹187 ಕೋಟಿ ಆಗಿತ್ತು. ಬಿಜೆಪಿ ಸರ್ಕಾರ ಇದ್ದಾಗ ಸಚಿವ ಸಂಪುಟ ಸಭೆ ₹50 ಕೋಟಿಗೆ ನಿಗದಿ ಮಾಡಿ ಜಮೀನು ಕೊಟ್ಟಿತ್ತು. ಇದರಿಂದ ಸರ್ಕಾರಕ್ಕೆ ₹137 ಕೋಟಿ ನಷ್ಟ ಆಗಿದೆ. ಅದನ್ನು ಸರ್ಕಾರ ತುಂಬಿಸಿಕೊಡಬೇಕಿದ್ದು, ಬಿಜೆಪಿ ಸರ್ಕಾರ ಆ ಹಣ ಕೊಟ್ಟಿಲ್ಲ. ಅನ್ನು ಪಡೆಯುವ ಬಗ್ಗೆ ಕಾನೂನು ಅಭಿಪ್ರಾಯ ಪಡೆಯಲಾಗುವುದು’ ಎಂದು ಪಾಟೀಲ ಹೇಳಿದರು.

ADVERTISEMENT

‘ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಅಷ್ಟು ಜಮೀನು ಅಗತ್ಯ ಇತ್ತೆ ಎಂಬ ಕುರಿತು ಮೌಲ್ಯಮಾಪನ ಮಾಡಲಾಗುವುದು. 2025 ರ ಜೂನ್‌ ಒಳಗೆ 116 ಎಕರೆಯಲ್ಲಿ ಶೇ 51 ರಷ್ಟು ಜಮೀನು ಬಳಸಿಕೊಂಡಿಲ್ಲವಾದರೆ, ಕಾರ್ಯಾಚರಣೆ ಸ್ಥಿತಿಯಲ್ಲಿ ಇಲ್ಲದಿದ್ದರೆ ಅಷ್ಟೂ ಜಮೀನನ್ನು ವಾಪಸ್‌ ಪಡೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ದೇಶಭಕ್ತಿ ಬಗ್ಗೆ ಮಾತನಾಡುವ ರಾಷ್ಟ್ರೋತ್ಥಾನಕ್ಕೆ ನೀಡಿರುವ 5 ಎಕರೆ ಜಮೀನನ್ನು 2026 ರೊಳಗೆ ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳದಿದ್ದರೆ, ಅದನ್ನೂ ವಾಪಾಸ್‌ ಪಡೆದುಕೊಳ್ಳಲಾಗುವುದು. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಸಕ್ಕರೆ ಕಾರ್ಖಾನೆಗೆಂದು 200 ಎಕರೆ ಜಮೀನು ಪಡೆದಿದ್ದು, ಅದರಲ್ಲಿ 112 ಎಕರೆ ಜಮೀನು ರದ್ದುಪಡಿಸುವ ಷರತ್ತಿಗೆ ಒಳಪಟ್ಟಿದೆ. ಇವರು 2012 ರಲ್ಲಿ ಬಾಗಲಕೋಟೆ ನವನಗರದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ತಮಗೆ ತಾವೇ 25 ಎಕರೆ ಜಮೀನು ಪಡೆದುಕೊಂಡು ಅಲ್ಲಿ ತೇಜಸ್‌ ಇಂಟರ್‌ನ್ಯಾಷನ್‌ ಸ್ಕೂಲ್‌ ಕಟ್ಟಿದರು. ಅವರು ಎರಡನೇ ಬಾರಿ ಕೈಗಾರಿಕಾ ಸಚಿವರಾದ ಮೇಲೆ ಇದೇ ಶಾಲೆಗೆ 6.17 ಎಕರೆ ಹಂಚಿಕೆ ಮಾಡಿಕೊಂಡಿದ್ದಾರೆ. ಇವುಗಳ ಬಗ್ಗೆಯೂ ಕ್ರಮ ಜರುಗಿಸಲಾಗುವುದು’ ಎಂದರು.

‘ನಾರಾಯಣಸ್ವಾಮಿ ಶೆಡ್ ಗಿರಾಕಿ’:

ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ‘ನಾರಾಯಣಸ್ವಾಮಿ ಶೆಡ್‌ ಗಿರಾಕಿ’ ಎಂದು ಎಂ.ಬಿ.ಪಾಟೀಲ ಹೀಗಳೆದರು.

‘ನಾರಾಯಣಸ್ವಾಮಿ ಮೈಸೂರು ಸಮೀಪದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಎರಡು ಎಕರೆ 8,029 ಚದರ ಮೀಟರ್‌ ಜಮೀನು ಪಡೆದುಕೊಂಡಿದ್ದರು. ಬೃಂದಾವನ ಸಾಫ್ಟ್‌ವೇರ್‌ ಟೆಕ್ನಾಲಜಿ ಎಂಬ ಉದ್ಯಮ ಸ್ಥಾಪಿಸುವುದಾಗಿ ಹೇಳಿಕೊಂಡಿದ್ದರು. ಆ ಬಳಿಕ ಗಾರ್ಮೆಂಟ್‌ ಉದ್ಯಮ ಸ್ಥಾಪಿಸುವುದಾಗಿ ಹೇಳಿಕೊಂಡರು. ಈಗ ಅಲ್ಲಿ ಶೆಡ್‌ ನಿರ್ಮಿಸಿ ಬಾಡಿಗೆಗೆ ಕೊಡುವುದಾಗಿ ಬೋರ್ಡ್‌ ಹಾಕಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಶೆಡ್‌ ಕಟ್ಟುವ ಯೋಗ್ಯತೆಯೂ ಇಲ್ಲದ ಈ ವ್ಯಕ್ತಿಗೆ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೆ?. ಹೈಕೋರ್ಟ್‌ ನೀಡಿದ ಸಮಯದ ಒಳಗೆ ಕೈಗಾರಿಕಾ ಜಮೀನು ಬಳಸಿಕೊಳ್ಳದಿದ್ದಾರೆ ವಾಪಸ್‌ ಪಡೆಯುತ್ತೇವೆ’ ಎಂದು ಹೇಳಿದರು.

‘ನೀವು (ಲಹರ್‌ ಸಿಂಗ್‌ ಮತ್ತು ನಾರಾಯಣಸ್ವಾಮಿ) ನಮ್ಮನ್ನು ಪ್ರಶ್ನಿಸಿದ್ದೀರಿ ಅನುಭವಿಸಿ, ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ. ನಾರಾಯಣಸ್ವಾಮಿಗೆ ರಾಜಕೀಯ ಜನ್ಮಕೊಟ್ಟಿದ್ದೇ ಮಲ್ಲಿಕಾರ್ಜುನ ಖರ್ಗೆ. ಈಗ ಖರ್ಗೆ ಅವರನ್ನೇ ಪ್ರಶ್ನಿಸುವ ಭಂಡತನ ಬೆಳೆಸಿಕೊಂಡಿದ್ದಾರೆ. ದಲಿತರ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಹುನ್ನಾರ ಬಿಜೆಪಿ ಮಾಡಿದೆ’ ಎಂದು ಕಿಡಿಕಾರಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅತಿ ಹೆಚ್ಚು ವಿದ್ಯಾವಂತರು. ಎಂಜಿನಿಯರಿಂಗ್‌ ಪದವೀಧರರು. ಅರ್ಹತೆ ಮೂಲಕವೇ ಅವರು ಸಿ.ಎ ನಿವೇಶನ ಪಡೆದುಕೊಂಡಿದ್ದಾರೆ. ನಿವೇಶನಕ್ಕೆ ರಿಯಾಯಿತಿಯನ್ನೂ ಪಡೆದುಕೊಂಡಿಲ್ಲ. ಈ ಬಗ್ಗೆ ಅನಗತ್ಯ ವಿವಾದ ಮಾಡಿದ್ದಾರೆ ಎಂದರು.

ಹೌದು ಸ್ವಾಮಿ ಶೆಡ್‌ ಗಿರಾಕಿನೇ: ಛಲವಾದಿ

‘ಹೌದು ಸ್ವಾಮಿ ನಾನು ಶೆಡ್‌ ಗಿರಾಕಿನೇ. ನಿಮ್ಮಂತೆ ದೊಡ್ಡ ಗಿರಾಕಿ ಅಲ್ಲ. ಲೂಟಿ ಮಾಡಿ ಕೋಟ್ಯಧಿಪತಿ ಆದವನಲ್ಲ. ಕೋಟ್ಯಧಿಪತಿ ಆಗಿದ್ದರೆ ದೊಡ್ಡದಾಗಿ ಕಟ್ಟಬಹುದಿತ್ತು. ಧೂಳಿನಿಂದ ಬಂದ ಮನುಷ್ಯ. ಶ್ರೀಮಂತಿಕೆ ಇಲ್ಲ. ಹೀಗಾಗಿಯೇ ಶೆಡ್‌ ಕಟ್ಟಿದ್ದೇನೆ’ ಎಂದು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ‌ಸ್ವಾಮಿ ಹೇಳಿದರು.

2006 ರಲ್ಲಿ ಬಿಜೆಪಿ ಅವಧಿಯಲ್ಲಿ ಇತರ ಸಾಮಾನ್ಯರಂತೆ ಕೈಗಾರಿಕಾ ನಿವೇಶನಕ್ಕೆ ಬೃಂದಾವನ ಸಾಫ್ಟ್‌ವೇರ್‌ ಹೆಸರಿನಲ್ಲಿ ಅರ್ಜಿ ಹಾಕಿದ್ದೆ. ಯಾವುದೇ ಪ್ರಭಾವ ಇಲ್ಲದೇ ಜಮೀನು ಸಿಕ್ಕಿತ್ತು. ಆಗ ನಾನು ಕಾಂಗ್ರೆಸ್‌  ಪ್ರಧಾನ ಕಾರ್ಯದರ್ಶಿ ಆಗಿದ್ದೆ. ಆಗ ಸಿಕ್ಕ ಕೈಗಾರಿಕಾ ಜಮೀನಿನಲ್ಲಿ ಕನಿಷ್ಠ ಸೌಲಭ್ಯವೂ ಇರಲಿಲ್ಲ. ಕೆಐಎಡಿಬಿ ನಿಯಮ ಪ್ರಕಾರ ಯೋಜನೆ ಬದಲಿಸುವ ಅವಕಾಶ ಇತ್ತು ಬದಲಿಸಿಕೊಂಡೆ. ಗೋದಾಮಿಗಾಗಿ ಶೆಡ್‌ ಹಾಕಿದೆ. ಗೋದಾಮಿಗೆ ಶೆಡ್‌ ಹಾಕದೇ ಇನ್ನೇನು ಹಾಕಬೇಕು. ಗೋದಾಮು ಕಟ್ಟಿದವರು ಅದನ್ನು ಬಾಡಿಗೆ ಕೊಡದೇ ಇನ್ನೇನು ಮಾಡಬೇಕು ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನನ್ನ ನಿವೇಶನವನ್ನು ಹಿಂದಕ್ಕೆ ಪಡೆಯಲಾಯಿತು. ಆಗಲೂ ನಾನು ಕಾಂಗ್ರೆಸ್‌ನಲ್ಲೇ ಇದ್ದೆ. ಅಂದಿನ ಕೈಗಾರಿಕಾ ಸಚಿವ ದೇಶಪಾಂಡೆ ಅವರನ್ನು ಭೇಟಿ ಮಾಡಲು ಹೋದಾಗ ಮಾತನಾಡಿಸಲೇ ಇಲ್ಲ. ಕೊನೆಗೆ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.