ಬೆಂಗಳೂರು: ‘ಶಿಕ್ಷಕರು ಸಂತೋಷದಿಂದಿದ್ದರೆ, ಧನಾತ್ಮಕ ವರ್ತನೆಗಳಿಂದ ವಿದ್ಯಾರ್ಥಿಗಳು ಪ್ರೇರೇಪಿತರಾಗಿ ಕಲಿಕೆಯ ಆಸಕ್ತಿಯನ್ನು ವೃದ್ಧಿಸಿಕೊಳ್ಳುತ್ತಾರೆ’ ಎಂದು ‘ಕ್ಯೂಎಸ್ ಐ ಗೇಜ್ ಇನ್‌ಸ್ಟಿಟ್ಯೂಷನ್ ಆಫ್ ಹ್ಯಾಪಿನೆಸ್ ವರದಿ 2024’ಯಲ್ಲಿ ತಿಳಿಸಲಾಗಿದೆ.
ಶೈಕ್ಷಣಿಕ ಪರಿಸರದಲ್ಲಿ ಸಂತೋಷ, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳ ವಿಶ್ಲೇಷಣೆಯನ್ನು ಒಳಗೊಂಡ ವರದಿಯನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅನಾವರಣಗೊಳಿಸಿದರು.
16 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ 108 ಶಿಕ್ಷಣ ಸಂಸ್ಥೆಗಳಲ್ಲಿ 1,60,710 ವಿದ್ಯಾರ್ಥಿಗಳು ಮತ್ತು 20,768 ಅಧ್ಯಾಪಕರಿಂದ ಪ್ರತಿಕ್ರಿಯೆ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಕ್ಯೂಎಸ್ ಐ ಗೇಜ್ ವ್ಯವಸ್ಥಾಪಕ ನಿರ್ದೇಶಕ ರವಿನ್ ನಾಯರ್ ತಿಳಿಸಿದರು.
‘ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನು ಪ್ರೇರೇಪಿಸುವುದು ನಮ್ಮ ಗುರಿ. ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಮತ್ತು ಸಂತೋಷದ ಸಂಸ್ಕೃತಿಯನ್ನು ಬೆಳೆಸಿದರೆ, ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸಬಹುದು’ ಎಂದರು.
ಕ್ಯಾಂಪಸ್‌ನಲ್ಲಿನ ಸುರಕ್ಷತೆಯ ಪ್ರಜ್ಞೆ ವಿದ್ಯಾರ್ಥಿ ಮತ್ತು ಅಧ್ಯಾಪಕರ ತೃಪ್ತಿಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಮಾನಸಿಕ ಆರೋಗ್ಯ ಒತ್ತಡವನ್ನು ನಿವಾರಿಸುತ್ತದೆ ಮತ್ತು ಒಟ್ಟಾರೆ ಸಂತೋಷವನ್ನು ಹೆಚ್ಚಿಸುತ್ತದೆ. ವೃತ್ತಿ ಮಾರ್ಗದರ್ಶನವು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಿರಂತರ ವೃತ್ತಿಪರ ಅಭಿವೃದ್ಧಿಗೆ ಶಿಕ್ಷಕರ ಧಾರಣಾ ಶಕ್ತಿ ಅತ್ಯಗತ್ಯ ಎಂದು ವರದಿಯಲ್ಲಿ ಹೇಳಲಾಗಿದೆ.
ಎ.ಎಸ್.ಎಂ.ಡಿ ಕಾರ್ಯನಿರ್ವಾಹಕ ನಿರ್ದೇಶಕ ಅಶ್ವಿನ್ ಫರ್ನಾಂಡಿಸ್ ಮಾತನಾಡಿ, ‘ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ತಮ್ಮ ವಿಧಾನವನ್ನು ಸುಧಾರಿಸಲು ಬಯಸುವ ಶಿಕ್ಷಣ ಸಂಸ್ಥೆಗಳಿಗೆ ಈ ವರದಿ ಮಾನದಂಡವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.