ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಜಾಹೀರಾತು: ಹೈಕೋರ್ಟ್‌ ಕಿಡಿ

ಬಿಬಿಎಂಪಿ ಆಯಕ್ತ, ಪೊಲೀಸ್ ಕಮಿಷನರ್‌ಗೆ ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 19:30 IST
Last Updated 26 ಜುಲೈ 2024, 19:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಕ್ರಮ ಜಾಹೀರಾತು ಫಲಕಗಳ ಹಾವಳಿ ಹೆಚ್ಚಾಗುತ್ತಿದೆ’ ಎಂದು ಕಿಡಿ ಕಾರಿರುವ ಹೈಕೋರ್ಟ್‌, ‘ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಪಾಲಿಕೆಯ ಮುಖ್ಯ ಆಯುಕ್ತ ಹಾಗೂ ನಗರ ಪೊಲೀಸ್ ಕಮಿಷನರ್‌ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸಬಾರದು’ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಸಲ್ಲಿಸಿರುವ ಅರ್ಜಿಹಾಗೂ ಹೈಕೋರ್ಟ್‌ ಸ್ವಯಂಪ್ರೇರಣೆಯಿಂದ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ ಹಾಕುವ ಪ್ರವೃತ್ತಿ ಎಗ್ಗಿಲ್ಲದೆ ಮುಂದುವರಿದೆ. ಇದರಿಂದಾಗಿ ವಾಹನ ಸಂಚಾರ ದಟ್ಟಣೆಯೂ ಸೇರಿದಂತೆ ಸಾರ್ವಜನಿಕರು ಹಲವು ತೊಂದರೆಗಳಿಗೆ ಈಡಾಗಿದ್ದಾರೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

‘ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಿಂದಲೂ ನ್ಯಾಯಾಲಯ ಸೂಕ್ತ ಆದೇಶ ಮತ್ತು ನಿರ್ದೇಶನಗಳನ್ನು ನೀಡುತ್ತಾ ಬಂದಿದೆ. ಆದರೂ ಪಾಲಿಕೆಯಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಸರ್ಕಾರಿ ವಕೀಲರು, ‘ಅನಧಿಕೃತ ಫ್ಲೆಕ್ಸ್, ಬ್ಯಾನರ್‌ ಮತ್ತು ಹೋರ್ಡಿಂಗ್‌ಗಳನ್ನು ಅಳವಡಿಸಿದವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಕಮಿಷನರ್‌ ಅವರು ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗಿದವರಿಗೆ ಸೂಕ್ತ ರೀತಿಯ ದಂಡ ವಿಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕ್ರಮಗಳ ಅನುಷ್ಠಾನದ ಅವಶ್ಯಕತೆಯಿದ್ದು, ಅದಕ್ಕೆ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ನಿಮ್ಮ ಪ್ರಕಾರ ಕ್ರಮ ಎಂದರೆ ಮತ್ತಷ್ಟು ಅನಧಿಕೃತ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳು ಮತ್ತು ಹೋರ್ಡಿಂಗ್‌ಗಳ ಅಳವಡಿಕೆಗೆ ಅನುಮತಿ ನೀಡುವುದೇ’ ಎಂದು ಸರ್ಕಾರಿ ವಕೀಲರನ್ನು ಖಾರವಾಗಿ ಪ್ರಶ್ನಿಸಿತು. ‘ಇನ್ನೂ ಕಾಲಾವಕಾಶ ಬೇಕು ಎಂದಾದರೆ ಇಷ್ಟು ದಿನ ಏನು ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

‘ಅನಧಿಕೃತ ಜಾಹಿರಾತು ಫಲಕಗಳ ಅಳವಡಿಕೆ ತಡೆಯುವ ಬಗ್ಗೆ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ ಎಂಬುದರ ಮಾಹಿತಿ ನೀಡಿ’ ಎಂದು ಖಡಕ್‌ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿತು.

ಸ್ವಯಂ ಪ್ರೇರಿತ ಪಿಐಎಲ್‌: ಇದೇ 11ರಂದು ಪ್ರಕರಣದ ವಿಚಾರಣೆ ನಡೆದಿತ್ತು. ಆಗ ಇಂಗ್ಲಿಷ್‌ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಕುರಿತಂತೆ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು.

‘ಹೈಕೋರ್ಟ್‌ನ ಹಲವು ಆದೇಶಗಳ ಹೊರತಾಗಿಯೂ ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳು, ಫ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿ ಮುಂದುವರಿದಿದೆ. ನ್ಯಾಯಾಲಯದ ಅದೇಶಗಳ ಬಗ್ಗೆ ಪಾಲಿಕೆ, ನಗರ ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬುದನ್ನು ಪತ್ರಿಕೆಯ ವರದಿ ಪುಷ್ಟೀಕರಿಸುತ್ತದೆ. ಹಾಗಾಗಿ, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.