ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡಗಳ ನೆಲ ಸಮ ಮಾಡುವುದಾದರೆ ಶೇ 90 ರಷ್ಟು ಕಟ್ಟಡಗಳನ್ನು ಕೆಡವಬೇಕಾ ಗುತ್ತದೆ...!
ಇದು ಬೆಂಗಳೂರು ಮಹಾ ನಗರದ ಅಕ್ರಮ ಕಟ್ಟಡಗಳ ಕುರಿತಂತೆ ವಕೀಲರು ವ್ಯಕ್ತಪಡಿ ಸುವ ಅಭಿಪ್ರಾಯ. ಒಂದು ವೇಳೆ ಹೈಕೋರ್ಟ್ ಅಕ್ರಮ ಕಟ್ಟಡಗಳ ನೆಲಸಮಕ್ಕೆ ಆದೇಶಿಸಿದರೆ ಆ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವೇ ಎಂಬ ಜಿಜ್ಞಾಸೆ ಕಾನೂನು ವಲಯದಲ್ಲಿ ಕಾಡುತ್ತಿದೆ.
‘ಬೃಹತ್ ಸಂಖ್ಯೆಯ ಅಕ್ರಮ ಕಟ್ಟಡಗಳ ನೆಲಸಮ ಮಾಡುವಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ನವೆಂಬರ್ 15ಕ್ಕೆ ವರದಿ ಸಲ್ಲಿಸಿ’ ಎಂದುಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಇದೇ 21ರಂದು ಆದೇಶಿಸಿದೆ.
ಅಕ್ರಮ ಕಟ್ಟಡಗಳ ಕುರಿತಂತೆ ಪ್ರತಿಕ್ರಿಯಿಸುವ ಬಿಬಿಎಂಪಿ ಪರ ವಕೀಲ ಕೆ.ಎನ್.ಪುಟ್ಟೇಗೌಡ, ‘ನಗರದ ಅಕ್ರಮ ಕಟ್ಟಡಗಳ ಸಮಸ್ಯೆ ನಿವಾರಣೆಗೆ ಈ ಹಿಂದೆ ರೂಪಿಸಲಾಗಿದ್ದ ಅಕ್ರಮ–ಸಕ್ರಮ ಸ್ಕೀಂ ಜಾರಿಗೊಳಿಸುವುದು ಸೂಕ್ತ. ಆದರೆ, ಈ ವ್ಯಾಜ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ಇದೆ’ ಎನ್ನುತ್ತಾರೆ.
‘ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿ ದಂತೆ ಸಿಟಿ ಸಿವಿಲ್ ಕೋರ್ಟ್, ಹೈಕೋರ್ಟ್, ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಬಿಬಿಎಂಪಿ ಮತ್ತು ಮಾಲೀಕರ ನಡುವಿನ ವ್ಯಾಜ್ಯಗಳ ಸಂಖ್ಯೆ 4 ಸಾವಿರಕ್ಕೂ ಹೆಚ್ಚಿವೆ’ ಎಂದು ಅವರು ವಿವರಿಸುತ್ತಾರೆ.
ಅಕ್ರಮ ಕಟ್ಟಡ ಯಾವುವು?: ‘ಸಾಮಾನ್ಯವಾಗಿ ಬಿ ಖಾತಾ ನಿವೇಶನ ಗಳಲ್ಲಿನ ಕಟ್ಟಡಗಳು, ಸೆಟ್ ಬ್ಯಾಕ್ ಬಿಡದೇ ಇರುವುದು, ಫ್ಲೋರ್ ಏರಿಯಾ ಉಲ್ಲಂಘನೆ ಮಾಡಿರುವುದು, ನಿವಾಸಿ ಬಡಾವಣೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆ ತೆರೆದಿರುವುದು, ಕೈಗಾರಿಕೆಗಳಿಗೆ ವ್ಯಾಪಾರ ಪರವಾನಗಿ ಇಲ್ಲದೇ ನಡೆಸುತ್ತಿರುವುದು, ಕೆರೆ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದು ಪ್ರಮುಖ ಉಲ್ಲಂಘನೆ ವಲಯಗಳಾಗಿವೆ’ ಎನ್ನುತ್ತಾರೆ ಪುಟ್ಟೇಗೌಡ.
‘ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಕಾಯ್ದೆ–1976ರ ಕಲಂ 321ರ 1,2ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬಹುದು. ಆದರೆ, ಅಕ್ರಮ ಕಟ್ಟಡಗಳ ಹಾವಳಿ ಇವತ್ತಿನದೇನಲ್ಲ. ಇದು ಮೊದಲಿನಿಂದಲೂ ಇದೆ. ಇವುಗಳನ್ನೆಲ್ಲಾ ಒಡೆಯಲು ಹೋದರೆ ಅವುಗಳ ಅವಶೇಷಗಳನ್ನು ಎಲ್ಲಿಗೆ ಕಳುಹಿಸಬೇಕು ಎಂಬುದೇ ದೊಡ್ಡ ಪ್ರಶ್ನೆ’ ಎನ್ನುತ್ತಾರೆ ವಕೀಲ ಟಿ.ಎಲ್.ಕಿರಣ್ ಕುಮಾರ್.
‘ಇವುಗಳಿಗೆ ದಂಡ ಹಾಕಿ ನಿಯಂತ್ರಿಸಬೇಕು. ಭವಿಷ್ಯದಲ್ಲಿ ಈ ರೀತಿ ಆಗದಂತೆ ನಿಗ್ರಹ ಮಾಡುವುದೊಂದೇ ದಾರಿ. 2–3 ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನುಸಾರ ಯಾವುದೇ ಕಟ್ಟಡ ನೆಲಸಮ ಮಾಡಬೇಕಾದರೆ ಮಾಲೀಕರಿಗೆ ಸಾಕಷ್ಟು ಅವಕಾಶ ಕೊಡಬೇಕು ಮತ್ತು ಕಟ್ಟುನಿಟ್ಟಾಗಿ ಕಾನೂನು ಪ್ರಕಾರ ನಡೆದುಕೊಳ್ಳಬೇಕು’ ಎಂದು ವಿವರಿಸುತ್ತಾರೆ.
ಕೊನೆ ಅವಕಾಶ: ವಿವರ ಸಲ್ಲಿಸಲು ಬಿಬಿಎಂಪಿಗೆ ಕೊನೆಯ ಅವಕಾಶ ನೀಡಿರುವ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದೆ.
ಹೈಕೋರ್ಟ್‌ನಲ್ಲೇ ಇದೆ ಅಕ್ರಮ ಕಟ್ಟಡ!
‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಯಾವುದೇ ಕಟ್ಟಡದ ನೆಲಮಾಳಿಗೆಯನ್ನು ವಾಹನ ನಿಲುಗಡೆ ಅಥವಾ ಉಪಕರಣಗಳ ಶೇಖರಣೆಗೆಂದೇ ಮೀಸಲಿಡಬೇಕು ಆದರೆ, ಹೈಕೋರ್ಟ್‌ನ ನೆಲಮಾಳಿಗೆಯಲ್ಲಿ ಸುಮಾರು 29 ಕಚೇರಿಗಳು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ’ ಎನ್ನುತ್ತಾರೆ ವಕೀಲ ಎನ್.ಪಿ.ಅಮೃತೇಶ್.
‘ಈ ಕಚೇರಿಗಳಲ್ಲಿ ದುಡಿಯುವ ಸರ್ಕಾರಿ ನೌಕರರು, ತಮ್ಮ ಸಂಘದ ಅಡಿಯಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸಿದ್ದರು. ಏನೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಅಮೃತೇಶ್.
ವಾಹನಗಳ ನಿಲುಗಡೆ ಹಾಗೂ ಹೈಕೋರ್ಟ್‌ನ ಉಪಯೋಗಕ್ಕೆ ಬೇಕಾದ ಸಲಕರಣೆ ಅಥವಾ ಸರಂಜಾಮುಗಳನ್ನು ಇಡಲೆಂದು ರೂಪಿಸಲಾದ ಹೈಕೋರ್ಟ್ ನೆಲ ಅಂತಸ್ತು ದಸ್ತಾವೇಜುಗಳ ಶೇಖರಣೆ ಮತ್ತು ನಿರ್ವಹಣೆಯ ಗೂಡಾಗಿದೆ.
ಸಿವಿಲ್, ಕ್ರಿಮಿನಲ್, ಡಿಕ್ರಿ, ಇಂಡೆಕ್ಸ್ ಫೈಲಿಂಗ್ ವಿಭಾಗ, ಫೈಲಿಂಗ್ ವಿಭಾಗ, ಆದೇಶ ಪ್ರತಿಗಳನ್ನು ನೀಡುವ ವಿಭಾಗ, ರಿಟ್ ವಿಭಾಗಗಳೇ ಮಾತ್ರವಲ್ಲದೆ, ನೋಟರಿಗಳು, ಬೆರಳಚ್ಚುಗಾರರು, ಐಎನ್‌ಜಿ ವೈಶ್ಯ ಬ್ಯಾಂಕ್ ಮತ್ತು ಇಂಟರ್‌ನೆಟ್ ಕೆಫೆ ಸೇರಿದಂತೆ ಅನೇಕ ಕಚೇರಿಗಳು ಈ ನೆಲಮಾಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. 1,500ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.