ADVERTISEMENT

ಅಕ್ರಮ ಡಿನೋಟಿಫಿಕೇಶನ್‌ ಆರೋಪ | ಅನಾರೋಗ್ಯ: ಹಾಜರಿಗೆ ವಿನಾಯ್ತಿ ಕೋರಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 26 ಮೇ 2022, 2:16 IST
Last Updated 26 ಮೇ 2022, 2:16 IST
   

ಬೆಂಗಳೂರು: ಅಕ್ರಮ ಡಿನೋಟಿಫಿಕೇಶನ್‌ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅನಾರೋಗ್ಯದ ಕಾರಣ ನೀಡಿ ಖುದ್ದು ಹಾಜರಾತಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಾತ್ಕಾಲಿಕವಾಗಿ ದಿನದಮಟ್ಟಿಗೆ ವಿನಾಯಿತಿ ನೀಡಿದೆ.

‘ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯಲ್ಲಿನ ಹಲವು ಜಮೀನುಗಳನ್ನುಯಡಿಯೂರಪ್ಪನವರು 2006ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಾಸುದೇವ ರೆಡ್ಡಿ ಎಂಬುವರು ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಯಂತ ಕುಮಾರ್ ಬುಧವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಯಡಿಯೂರಪ್ಪ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಯಡಿಯೂರಪ್ಪ ಅವರು ಕಳೆದ ಕೆಲವು ದಿನಗಳಿಂದ ಅತಿಯಾದ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದವರು ಚೇತರಿಸಿಕೊಂಡಿದ್ದರು. ಆದರೆ, ಈಗ ಮತ್ತೆ ಕಫ, ಶೀತ ಮತ್ತು ಜ್ವರದಿಂದ ಬಳಲುತ್ತಿದ್ದು ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಆದ್ದರಿಂದ, ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು’ ಎಂದು ಕೋರಿದರು.

ADVERTISEMENT

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ದಿನದ ಹಾಜರಾತಿಗೆ ವಿನಾಯಿತಿ ನೀಡಿ ವಿಚಾರಣೆಯನ್ನು ಜೂನ್‌ 17ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.