ADVERTISEMENT

ಬೆಂಗಳೂರು | ಕಟ್ಟಡ ತ್ಯಾಜ್ಯ ಅಕ್ರಮ ವಿಲೇವಾರಿ: 575 ವಾಹನ ಜಪ್ತಿ

ಆರ್. ಮಂಜುನಾಥ್
Published 24 ಅಕ್ಟೋಬರ್ 2023, 6:23 IST
Last Updated 24 ಅಕ್ಟೋಬರ್ 2023, 6:23 IST
ನಗರದ ಹೊರವಲಯದ ರಸ್ತೆ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ
ನಗರದ ಹೊರವಲಯದ ರಸ್ತೆ ಬದಿಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ   

ಬೆಂಗಳೂರು: ನಗರದಲ್ಲಿ ಖಾಲಿ ನಿವೇಶನ, ಕೆರೆ ಪ್ರದೇಶ ಹಾಗೂ ಹೊರವಲಯದ ರಸ್ತೆಗಳ ಬದಿಯಲ್ಲಿ ಅಕ್ರಮವಾಗಿ ಕಟ್ಟಡ ತ್ಯಾಜ್ಯ ಸುರಿಯುತ್ತಿದ್ದ 575 ವಾಹನಗಳನ್ನು ಒಂದೇ ತಿಂಗಳಲ್ಲಿ ಬಿಬಿಎಂಪಿ ಜಪ್ತಿ ಮಾಡಿದೆ.

ಕಟ್ಟಡ ತ್ಯಾಜ್ಯವನ್ನು (ಸಿ ಆ್ಯಂಡ್‌ ಡಿ) ಸುರಿಯುತ್ತಿದ್ದ ವಾಹನಗಳ ಮೇಲೆ ಸೆಪ್ಟೆಂಬರ್‌ನಲ್ಲಿ ಕಠಿಣ ಕ್ರಮ ಕೈಗೊಂಡಿದ್ದ ಘನತ್ಯಾಜ್ಯ ನಿರ್ವಹಣೆ ವಿಭಾಗ, ₹4 ಲಕ್ಷಕ್ಕೂ ಹೆಚ್ಚು ದಂಡವನ್ನೂ ವಸೂಲಿ ಮಾಡಿತ್ತು. ಹೊರವಲಯದ ರಸ್ತೆಗಳ ಬದಿಯಲ್ಲಿ ಕಟ್ಟಡ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಭಿಯಾನ ಆರಂಭಿಸಿದೆ.

ಕಟ್ಟಡ ತ್ಯಾಜ್ಯ ಅಕ್ರಮ ವಿಲೇವಾರಿಗಾಗಿ ಸಂಚರಿಸುವ ಎಲ್ಲಾ ವಾಹನಗಳನ್ನು ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್‌‌ ಮಾರ್ಷಲ್ಸ್, ಮಾರ್ಷಲ್ ಸೂಪರವೈಸ‌ರ್ ತಪಾಸಣೆ ಮಾಡಬೇಕು. ನಿಯಮಾನುಸಾರ ದಂಡ ವಿಧಿಸಿ, ವಾಹನಗಳನ್ನು ವಶಪಡಿಸಿಕೊಂಡು ಹತ್ತಿರದ ಪೋಲಿಸ್ ಠಾಣೆಯ ಸುಪರ್ದಿಗೆ ನೀಡಬೇಕು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತರು ಸೂಚಿಸಿದ್ದಾರೆ.

ADVERTISEMENT

ನಗರದಲ್ಲಿ ಹಲವೆಡೆ ಕಾಮಗಾರಿಗಳು ನಡೆಯುತ್ತಿದ್ದು, ಸಾವಿರಾರು ಟನ್‌ ‘ಸಿ ಆ್ಯಂಡ್‌ ಡಿ’ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ ಅದನ್ನು ಸಂಸ್ಕರಣೆ ಘಟಕಕ್ಕೆ ಕಳುಹಿಸುತ್ತಿಲ್ಲ. ಚಿಕ್ಕಜಾಲದಲ್ಲಿ ಪ್ರತಿ ದಿನ 1 ಸಾವಿರ ಮೆಟ್ರಿಕ್‌ ಟನ್‌ ಹಾಗೂ ಬಾಗಲೂರು ಬಳಿಯ ಕಣ್ಣೂರಿನಲ್ಲಿ 750 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಸಂಸ್ಕರಣಾ ಘಟಕವಿದೆ. ಇವೆರಡು ಘಟಕಗಳಿಗೆ ದಿನಕ್ಕೆ ತಲಾ 100 ಮೆಟ್ರಿಕ್‌ ಟನ್‌ ‘ಸಿ ಆ್ಯಂಡ್‌ ಡಿ’ ತ್ಯಾಜ್ಯ ಮಾತ್ರ ಸೇರುತ್ತಿತ್ತು. ವಾಹನಗಳ ಜಪ್ತಿ ಹಾಗೂ ನಿಗಾವಹಿಸುವ ಕಾರ್ಯ ಹೆಚ್ಚಾಗಿರುವುದರಿಂದ, ಇದೀಗ 500 ಮೆಟ್ರಿಕ್‌ ಟನ್‌ ಸಂಸ್ಕರಣೆ ಘಟಕಗಳಿಗೆ ತಲುಪುತ್ತಿದೆ. ನಿಯಮದಂತೆ, ಪ‍್ರತಿ ಮೆಟ್ರಿಕ್‌ ಟನ್‌ ‘ಸಿ ಆ್ಯಂಡ್‌ ಡಿ’ ತ್ಯಾಜ್ಯಕ್ಕೆ ₹134 ಶುಲ್ಕ ಪಾವತಿಸಿ, ಸಂಸ್ಕರಣೆ ಘಟಕಕ್ಕೆ ನೀಡಬೇಕು.

ಯಾರಿಗೆ ಅನ್ವಯ?: ಬಿಎಂಆರ್‌ಸಿಎಲ್‌, ಎನ್‌ಎಚ್ಎಐ, ಭಾರತೀಯ ರೈಲ್ವೆ, ವಿಮಾನ ನಿಲ್ದಾಣ ಪ್ರಾಧಿಕಾರಗಳು, ಟೆಲಿಕಾಂ ಆಪರೇಟರ್‌ಗಳು, ಸಿಪಿಡಬ್ಲ್ಯೂಡಿ, ಜಿಎಐಎಲ್‌, ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್‌, ಬಿಡಿಎ, ಪಿಡಬ್ಲ್ಯೂಡಿ  ಇಲಾಖೆಗಳು ‘ಸಿ ಆ್ಯಂಡ್‌ ಡಿ’ ತ್ಯಾಜ್ಯವನ್ನು ಕಡ್ಡಾಯವಾಗಿ ಸಂಸ್ಕರಣೆ ಘಟಕಗಳಿಗೇ ಸಾಗಿಸಬೇಕು. ಆದರೆ, ಈ ಇಲಾಖೆಗಳು ನಿಯಮಗಳನ್ನು ಪಾಲಿಸುತ್ತಿಲ್ಲ. ಜತೆಗೆ ಬೃಹತ್‌ ಕಟ್ಟಡಗಳು, ಮನೆಗಳ ನಿರ್ಮಾಣ ಹಾಗೂ ತೆರವಿನ ನಂತರವೂ ತ್ಯಾಜ್ಯ, ಸಂಸ್ಕರಣೆ ಘಟಕಗಳಿಗೆ ತಲುಪುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ತೀವ್ರ ನಿಗಾವಹಿಸಿದೆ.

ಮರುಬಳಕೆಯೂ ಇಲ್ಲ: ಕಟ್ಟಡ ನಿರ್ಮಾಣ ಕಾಮಗಾರಿ, ರಸ್ತೆ ಕಾಮಗಾರಿಗಳಲ್ಲಿ ಸಂಸ್ಕರಿತ ಮರುಬಳಕೆ ಉತ್ಪನ್ನಗಳಾದ ಸ್ಕ್ರೀನ್ಡ್‌ ಮರಳು ಮತ್ತು ಗ್ರಾನುಲರ್‌ ಸಬ್‌ಬೇಸ್‌ ಅನ್ನು ಕನಿಷ್ಠ ಶೇ 20ರಷ್ಟು ಬಳಸಬೇಕು ಎಂಬ ನಿಯಮವಿದೆ. ಇದನ್ನು ಟೆಂಡರ್‌ಗಳ ಷರತ್ತಿನಲ್ಲಿ ಅಳವಡಿಸ ಬೇಕು. ಈ ನಿಯಮಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದನ್ನು ಉಲ್ಲಂಘಿಸಿದವರ ಮೇಲೆ ಪರಿಸರ ಸಂರಕ್ಷಣೆ ಕಾಯ್ದೆ 1986 ಹಾಗೂ ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯ್ದೆ 1976 ಮತ್ತು ಅನ್ವಯವಾಗುವ ಎಲ್ಲ ಕಾನೂನುಗಳಂತೆ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಲಾಗಿದೆ. ಆದರೆ ಬಿಬಿಎಂಪಿ ಸೇರಿದಂತೆ ಯಾವ ಇಲಾಖೆಗಳೂ ಈ ನಿಯಮವನ್ನು  ಪಾಲಿಸುತ್ತಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎರಡು ‘ಸಿ ಆ್ಯಂಡ್‌ ಡಿ’ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ಮರಳು ಹಾಗೂ ಗ್ರಾನುಲರ್‌ ಸಬ್‌ಬೇಸ್‌ ತಲಾ 7 ಸಾವಿರ ಮೆಟ್ರಿಕ್‌ ಟನ್‌ನಷ್ಟು ಲಭ್ಯವಿದೆ ಎಂದು ಘಟಕದ ಅಧಿಕಾರಿಗಳು ಹೇಳಿದರು.

ಸಿ ಆ್ಯಂಡ್‌ ಡಿ ತ್ಯಾಜ್ಯ ನಿರ್ವಹಣೆಗೆ ಆ್ಯಪ್‌
ಬಿಬಿಎಂಪಿ ಹಾಗೂ ಹೊರವಲಯದ ವ್ಯಾಪ್ತಿಯಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗಾಗಿ ಮೊಬೈಲ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲ್ಲಿ ಕಟ್ಟಡ ತ್ಯಾಜ್ಯ ಉತ್ಪತ್ತಿಯಾಗುತ್ತದೆಯೋ ಅಲ್ಲಿಂದ ಸಂಸ್ಕರಣೆ ಘಟಕಕ್ಕೆ ರವಾನಿಸಲು ಹಾಗೂ ಅದಕ್ಕೆ ಶುಲ್ಕ ಪಾವತಿಸುವ ಸೌಲಭ್ಯ ಇದರಲ್ಲಿ ಇರಲಿದೆ. ಕಟ್ಟಡ ತ್ಯಾಜ್ಯವನ್ನು ಸಂಸ್ಕರಣೆ ಘಟಕಕ್ಕೆ ಕೊಂಡೊಯ್ಯಲು ಈ ಆ್ಯಪ್‌ನಲ್ಲಿ ಆಸ್ತಿ ಮಾಲೀಕರು ಅಥವಾ ಗುತ್ತಿಗೆದಾರರು ಮನವಿ ಸಲ್ಲಿಸಿದರೆ ವಾಹನ ನಿಗದಿಯಿಂದ ಹಿಡಿದು ಎಲ್ಲ ಪ್ರಕ್ರಿಯೆಗಳನ್ನೂ ಇದರಲ್ಲೇ ನಿರ್ವಹಿಸಬಹುದು. ಈ ಆ್ಯಪ್‌ ಪ್ರಾಯೋಗಿಕ ಹಂತದಲ್ಲಿದ್ದು ಶೀಘ್ರವೇ ಎಲ್ಲರ ಬಳಕೆಗೆ ಲಭ್ಯವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಕ್ರಿಮಿನಲ್‌ ಪ್ರಕರಣದ ಎಚ್ಚರಿಕೆ
‘ಸಿ ಆ್ಯಂಡ್‌ ಡಿ’ ತ್ಯಾಜ್ಯ ಅಕ್ರಮ ವಿಲೇವಾರಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಯಾ ಭಾಗದ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಈ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಲು ಬಿಡುವುದಿಲ್ಲ. ನಗರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಜವಾಬ್ದಾರಿ ನಾಗರಿಕರ ಮೇಲೂ ಇದೆ. ಅವರೆಲ್ಲರೂ ನಮ್ಮೊಂದಿಗೆ ಸಹಕರಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್‌ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಘನತ್ಯಾಜ್ಯ ಘಟಕದ ಜಂಟಿ ಆಯುಕ್ತೆ ಆರ್‌. ಪ್ರತಿಭಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.