ಬೆಂಗಳೂರು: ರಾಜ್ಯ ವಕ್ಫ್ ಮಂಡಳಿ ಖಾತೆಯಿಂದ ₹ 4 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಬಗ್ಗೆ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಎರಡನೇ ಬಾರಿಗೆ ದೂರು ದಾಖಲಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಜುಲೈ 6ರಂದು ಎಫ್‌ಐಆರ್ ದಾಖಲಾಗಿದೆ.
ವಕ್ಫ್ ಮಂಡಳಿಯು ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಝುಲ್ಫಿಕಾರುಲ್ ವಿರುದ್ಧ ಹಣದ ಅಕ್ರಮ ವರ್ಗಾವಣೆ ಕುರಿತು 2017ರಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆಗ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಸಿಐಡಿ ತನಿಖೆ ನಡೆಸಿ ಕೆಲವು ಆರೋಪಿಗಳನ್ನು ಸಹ ಬಂಧಿಸಿತ್ತು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಆದರೆ, ಝುಲ್ಫಿಕಾರುಲ್ ಅವರನ್ನು ಬಂಧಿಸಿರಲಿಲ್ಲ.
ಜುಲೈ 6ರಂದು ವಕ್ಫ್ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಅವರು ಹೊಸದಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಪ್ರಕರಣ ಸಂಬಂಧ ಅಂದಿನ ಸಿಐಡಿ ತಂಡ ಹಣ ವಶಪಡಿಸಿಕೊಂಡು ಕೆಲವರನ್ನು ಬಂಧಿಸಿದೆ. ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ. ಹಾಗಾಗಿ ಝುಲ್ಫಿಕಾರುಲ್ ಅವರನ್ನು ಬಂಧಿಸಲು ಆಗುವುದಿಲ್ಲ. ಸಿಐಡಿಯಿಂದ ವರದಿ ತರಿಸಿಕೊಂಡ ಬಳಿಕ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ದೂರಿನ ಸಾರಾಂಶ: 2016ರಲ್ಲಿ ಸಿಇಒ ಆಗಿದ್ದ ಝುಲ್ಪಿಕಾರುಲ್ ಅವಧಿಯಲ್ಲಿ ಮಂಡಳಿಯ ಅಧೀನದ ಕಲಬುರಗಿಯ ದರ್ಗಾಕ್ಕೆ ಸೇರಿದ ಆಸ್ತಿಯನ್ನು ಸರ್ಕಾರ ಸ್ವಾಧೀನ ಪಡೆದಿತ್ತು. ₹ 2.29 ಕೋಟಿ ಪರಿಹಾರವನ್ನು ಪಾವತಿಸಿತ್ತು. ಮುಜರಾಯಿ ಇಲಾಖೆ ಸಹ ₹1.79 ಕೋಟಿ ಪರಿಹಾರ ನೀಡಿತ್ತು.
ಪರಿಹಾರದ ₹ 4 ಕೋಟಿಯನ್ನು ಮಂಡಳಿಯು ಬೆನ್ಸನ್ ಟೌನ್‌ನ ಇಂಡಿಯನ್ ಬ್ಯಾಂಕ್ ಶಾಖೆಯ ಖಾತೆಗೆ ಜಮಾ ಮಾಡಿತ್ತು. ಆದರೆ, ಝುಲ್ಫಿಕಾರುಲ್ ಅವರು ವಿಜಯಾ ಬ್ಯಾಂಕ್‌ನ ಚಿಂತಾಮಣಿ ಶಾಖೆಯಲ್ಲಿ ಖಾತೆ ತೆರೆದು ಮಂಡಳಿಯ ಗಮನಕ್ಕೆ ತಾರದೆ ಅಕ್ರಮವಾಗಿ ₹ 4 ಕೋಟಿಯನ್ನು ವರ್ಗಾಯಿಸಿದ್ದರು. ನಿಶ್ಚಿತ ಠೇವಣಿಯ ಬಡ್ಡಿ ಸೇರಿ ಮಂಡಳಿಗೆ ₹ 8,03 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
2022ರ ಮಾರ್ಚ್ 31 ರಂದು ನಡೆದ ವಕ್ಫ್ ಮಂಡಳಿ ಸಭೆಯಲ್ಲಿ ಝುಲ್ಪಿಕಾರುಲ್ ವಿರುದ್ಧ ಕಾನೂನು ಕ್ರಮ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಕಾರಣ ಕೇಳಿ ಅವರಿಗೆ ನೋಟಿಸ್ ನೀಡಲಾಗಿತ್ತು. ಅವರು ನೀಡಿದ ಉತ್ತರ ತೃಪ್ತಿಕರವಾಗಿರಲಿಲ್ಲ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಗಮನಕ್ಕೆ ತರಲಾಗಿದ್ದು, ಕಾರ್ಯದರ್ಶಿಯವರ ಸೂಚನೆ ಮೇರೆಗೆ ದೂರು ನೀಡಲಾಗಿದೆ. ಸಿಇಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಬ್ಬಾಸ್ ದೂರಿನಲ್ಲಿ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.