ಬೆಂಗಳೂರು: ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದಡಿ ಅಜ್ಮೀರಾ ಬಳಗದ ನಿರ್ದೇಶಕ ತಬ್ರೇಜ್‌ನನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಅಜ್ಮೀರಾ ಗ್ರೂಪ್ಸ್ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಈ ಹಿಂದೆಯೇ ತಬ್ರೇಜ್‌ನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಆತನಿಗೆ ಜಾಮೀನು ಸಿಕ್ಕಿತ್ತು. ಇದೀಗ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಮತ್ತೆ ಬಂಧಿಸಲಾಗಿದೆ’ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಬನ್ನೇರುಘಟ್ಟ ಮುಖ್ಯರಸ್ತೆಯ ತಿಲಕ್ ನಗರದ ನಿವಾಸಿ ತಬ್ರೇಜ್, ಹಲವು ದಿನಗಳಿಂದ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ. ಅದನ್ನೇ ತೋರಿಸಿ ಹಲವರಿಗೆ ಬೆದರಿಕೆಯೊಡ್ಡಿದ್ದ. ಆ ಸಂಬಂಧ ಮಾಹಿತಿ ಕಲೆಹಾಕಿ ಆತನ ಮನೆ ಮೇಲೆ ದಾಳಿ ಮಾಡಲಾಗಿತ್ತು’ ಎಂದು ತಿಳಿಸಿದರು.
‘ದಾಳಿ ವೇಳೆಯೇ ಮನೆಯಲ್ಲಿ ಪಿಸ್ತೂಲ್ ಸಿಕ್ಕಿತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪಿಸ್ತೂಲ್ ಸಂಬಂಧ ಯಾವುದೇ ದಾಖಲೆ ಹಾಜರುಪಡಿಸಲಿಲ್ಲ’ ಎಂದರು.
‘ಪಿಸ್ತೂಲ್ ಎಲ್ಲಿಂದ ತರಲಾಗಿತ್ತು ಎಂಬ ಬಗ್ಗೆ ಆರೋಪಿ ಬಾಯಿ ಬಿಡುತ್ತಿಲ್ಲ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.