ADVERTISEMENT

ಮದ್ಯ ಅಕ್ರಮ ಮಾರಾಟ, ಡ್ರಗ್ಸ್ ಪೂರೈಕೆ ಆರೋಪ: ಬಾರ್, ಮದ್ಯದಂಗಡಿ ಮೇಲೆ NCB ಕಣ್ಣು

ಸಂತೋಷ ಜಿಗಳಿಕೊಪ್ಪ
Published 9 ಜೂನ್ 2024, 23:45 IST
Last Updated 9 ಜೂನ್ 2024, 23:45 IST
ಬೆಂಗಳೂರು ರಾಜಾಜಿನಗರ ಬಳಿಯ ಬಾರ್‌ವೊಂದರ ಪ್ರವೇಶ ದ್ವಾರದಲ್ಲಿ ಎನ್‌ಸಿಬಿ ಅಧಿಕಾರಿಗಳು ಭಿತ್ತಿಪತ್ರ ಅಂಟಿಸಿರುವುದು
ಬೆಂಗಳೂರು ರಾಜಾಜಿನಗರ ಬಳಿಯ ಬಾರ್‌ವೊಂದರ ಪ್ರವೇಶ ದ್ವಾರದಲ್ಲಿ ಎನ್‌ಸಿಬಿ ಅಧಿಕಾರಿಗಳು ಭಿತ್ತಿಪತ್ರ ಅಂಟಿಸಿರುವುದು   

ಬೆಂಗಳೂರು: ರಾಜ್ಯದ ಹಲವು ಬಾರ್ ಹಾಗೂ ಮದ್ಯದಂಗಡಿಗಳಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಕೃತ್ಯದಲ್ಲಿ ಭಾಗಿಯಾಗುತ್ತಿರುವವರನ್ನು ಪತ್ತೆ ಮಾಡಲು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ, ಬೆಳಗಾವಿ ಹಾಗೂ ಇತರೆ ನಗರಗಳಲ್ಲಿರುವ ಕೆಲವು ಬಾರ್‌– ಮದ್ಯದಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ. ಜೊತೆಗೆ, ವಿವಿಧ ಬಗೆಯ ಡ್ರಗ್ಸ್ ಮಾರಾಟ ಮಾಡುತ್ತಿರುವ ಮಾಹಿತಿಯನ್ನು ಎನ್‌ಸಿಬಿ ಕಲೆಹಾಕಿದೆ.

‘21 ವರ್ಷ ಒಳಗಿನವರಿಗೆ ಮದ್ಯಪಾನ ನಿಷೇಧಿಸಲಾಗಿದೆ. ಆದರೆ, ಬಹುತೇಕ ಬಾರ್ ಹಾಗೂ ಮದ್ಯದಂಗಡಿಗಳಲ್ಲಿ 21 ವರ್ಷ ವಯಸ್ಸಿನೊಳಗಿನ ಬಾಲಕರು, ಯುವಕ–ಯುವತಿಯರಿಗೆ ಅಕ್ರಮವಾಗಿ ಮದ್ಯ ಮಾರುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದಿದೆ. ಇದರ ಜೊತೆಯಲ್ಲಿ, ಡ್ರಗ್ಸ್ ಸಹ ಪೂರೈಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

ADVERTISEMENT

‘ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಬಾರ್ ಹಾಗೂ ಮದ್ಯದಂಗಡಿ ತೆರೆಯಲಾಗಿದೆ. ಆದರೆ, ಹಲವರು ನಿಯಮ ಪಾಲಿಸುತ್ತಿಲ್ಲ. ಇದರಿಂದಾಗಿ ಯುವಜನರು ದಿಕ್ಕು ತಪ್ಪುತ್ತಿದ್ದಾರೆ. ಹಲವರು, ಮದ್ಯವ್ಯಸನಿ ಹಾಗೂ ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಇಂಥ, ಮದ್ಯ ಅಕ್ರಮ ಮಾರಾಟ ಹಾಗೂ ಡ್ರಗ್ಸ್ ಮಾರಾಟ ಪತ್ತೆಗೆ ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳೀಯ ಪೊಲೀಸರ ನೆರವು ಪಡೆಯಲಾಗುತ್ತಿದೆ’ ಎಂದು ತಿಳಿಸಿವೆ.

ಮಾಲೀಕರು, ವ್ಯವಸ್ಥಾಪಕರಿಗೆ ಎಚ್ಚರಿಕೆ: ರಾಜ್ಯದ ಹಲವು ಬಾರ್ ಹಾಗೂ ಮದ್ಯದಂಗಡಿಗಳಿಗೆ ಎನ್‌ಸಿಬಿಯ ವಿಶೇಷ ತಂಡಗಳು ಭೇಟಿ ನೀಡುತ್ತಿವೆ. ನಿಯಮಗಳ ಬಗ್ಗೆ ಮಾಲೀಕರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗೆ ತಿಳಿಸುತ್ತಿದೆ. ನಿಯಮ ಮೀರಿದರೆ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡುತ್ತಿದೆ.

‘ಮದ್ಯ ಅಕ್ರಮವಾಗಿ ಮಾರುತ್ತಿರುವ ಹಾಗೂ ಡ್ರಗ್ಸ್ ಪೂರೈಸುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿರುವ ಮಾಹಿತಿ ಆಧಾರದಲ್ಲಿ ಕೆಲ ಬಾರ್ ಹಾಗೂ ಮದ್ಯದಂಗಡಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ, ಕೃತ್ಯಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

‘ಡ್ರಗ್ಸ್ ತೆಗೆದುಕೊಳ್ಳುವುದು, ಮಾರುವುದು ಹಾಗೂ ಸಾಗಿಸುವುದು ಕಾನೂನು ಬಾಹಿರ. ಇಂಥ ಕೃತ್ಯದಲ್ಲಿ ತೊಡಗಿದವರಿಗೆ ಕಠಿಣ ಶಿಕ್ಷೆ ಹಾಗೂ ಹೆಚ್ಚಿನ ದಂಡ ವಿಧಿಸಲು ಅವಕಾಶವಿದೆ’ ಎಂಬ ಬರಹವುಳ್ಳ ಪೋಸ್ಟರ್‌ಗಳನ್ನು ಬಾರ್ ಹಾಗೂ ಮದ್ಯದಂಗಡಿ ಎದುರು ಅಂಟಿಸಲಾಗಿದೆ. ‘21 ವರ್ಷ ವಯಸ್ಸಿನೊಳಗಿನವರಿಗೆ ಮದ್ಯಪಾನ ನಿಷೇಧಿಸಲಾಗಿದೆ’ ಎಂಬ ಬರಹವುಳ್ಳ ಭಿತ್ತಿಪತ್ರಗಳನ್ನೂ ಹಚ್ಚಲಾಗಿದೆ’ ಎಂದು ಮೂಲಗಳು ತಿಳಿಸಿವೆ.

24 ಗಂಟೆಯೂ ನಿಗಾ: ‘ಬಾರ್ ಹಾಗೂ ಮದ್ಯದಂಗಡಿಯಲ್ಲಿ ಡ್ರಗ್ಸ್ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಲು ದಿನದ 24 ಗಂಟೆಯೂ ನಿಗಾ ವಹಿಸಲಾಗಿದೆ. ಸೂಕ್ತ ಪುರಾವೆಗಳು ದೊರೆಯುತ್ತಿದ್ದಂತೆ, ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಏನಿದು ಎನ್‌ಸಿಬಿ ?

ದೇಶದಲ್ಲಿ ಡ್ರಗ್ಸ್ ಮಾರಾಟ ಹಾಗೂ ಸಾಗಣೆಯನ್ನು ತಡೆಗಟ್ಟಲು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಸ್ಥಾಪಿಸಲಾಗಿದೆ. ಐಪಿಎಸ್ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಎನ್‌ಸಿಬಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ದೇಶದ ಎಲ್ಲ ರಾಜ್ಯಗಳಲ್ಲಿ ಎನ್‌ಸಿಬಿ ಕಚೇರಿಗಳಿದ್ದು ಆಯಾ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗಳು ನಡೆಯುತ್ತಿವೆ.

₹1235 ಕೋಟಿ ಮೌಲ್ಯದ ಡ್ರಗ್ಸ್ ನಾಶ

ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಆರೋಪಿಗಳಿಂದ ಜಪ್ತಿ ಮಾಡಿದ್ದ ₹1235 ಕೋಟಿ ಮೌಲ್ಯದ 9300 ಕೆ.ಜಿ ಮಾದಕ ವಸ್ತುವನ್ನು (ಡ್ರಗ್ಸ್) ಇತ್ತೀಚೆಗಷ್ಟೇ ನಾಶಪಡಿಸಿದ್ದಾರೆ. ‘ಹಲವು ರಾಜ್ಯಗಳಲ್ಲಿ ಸ್ಥಳೀಯ ಪೊಲೀಸರ ಜೊತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಗಳಿಂದ ₹1235 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿತ್ತು. ನ್ಯಾಯಾಲಯದ ಅನುಮತಿ ಪಡೆದು ಎಲ್ಲ ಡ್ರಗ್ಸ್ ನಾಶಪಡಿಸಲಾಗಿದೆ’ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

ಡ್ರಗ್ಸ್ ಬಗ್ಗೆ ಮಾಹಿತಿ ನೀಡಿ ಇ–ಮೇಲ್: blzu_ncb@nic.in ಹಾಗೂ ddge_ncb@nic.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.