ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಸಮೂಹ ಕಂಪನಿ 35,000ಕ್ಕೂ ಅಧಿಕ ಹೂಡಿಕೆದಾರ
ರಿಂದ ₹ 4,000 ಕೋಟಿ ಹಣ ಸಂಗ್ರಹಿಸಿ ವಂಚಿಸಿರುವ ಸಂಗತಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಿಗೆ ಬಂದಿದೆ.
ಐಎಂಎ ವಂಚನೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಹಿರಿಯ ಅಧಿಕಾರಿಗಳ ವಿಶೇಷ ತಂಡ ಈಗಾಗಲೇ ನ್ಯಾಯಾಲಯದಲ್ಲಿ ‘ಇಸಿಐಆರ್’ ದಾಖಲಿಸಿದೆ. ವಿವಿಧ ಖಾಸಗಿ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿ 105ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿರುವ ಕಂಪನಿ ಹಣ ದುರ್ಬಳಕೆ ಮಾಡಿಕೊಂಡು 20 ಸ್ಥಿರಾಸ್ತಿಗಳನ್ನು ಖರೀದಿಸಿದೆ.
ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ದೇಶ ಬಿಟ್ಟು ಪರಾರಿಯಾಗಿರುವ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಹಾಗೂ ಕೆಲವು ನಿರ್ದೇಶಕರ ಹೆಸರಿನಲ್ಲಿ ಈ ಸ್ಥಿರಾಸ್ತಿಗಳನ್ನು ಖರೀದಿಸಲಾಗಿದೆ. ತನಿಖಾಧಿಕಾರಿಗಳು ಪತ್ತೆ ಹಚ್ಚಿರುವ 20 ಸ್ಥಿರಾಸ್ತಿಗಳ ಒಟ್ಟು ಮೌಲ್ಯ ₹ 200 ಕೋಟಿ ಎಂಬುದಾಗಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೌಲ್ಯ ಮಾಪಕರು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
105 ಖಾತೆಗಳಲ್ಲಿ ಈಗ ₹ 95 ಲಕ್ಷ ಮಾತ್ರ ಉಳಿದಿದೆ. ನೋಟು ರದ್ದತಿ ಬಳಿಕ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಮಯದಲ್ಲಿ ಕಂಪನಿ ಖಾತೆಗಳಲ್ಲಿ ₹ 44 ಕೋಟಿ ಪತ್ತೆಯಾಗಿತ್ತು. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ’ಯಡಿ (ಪಿಎಂಜಿಕೆವೈ)ಘೋಷಿಸಿಕೊಂಡು ₹22 ತೆರಿಗೆ ಕಟ್ಟಲಾಯಿತು. ಉಳಿದ ಹಣದಲ್ಲಿ ₹ 11 ಕೋಟಿ ಬ್ಯಾಂಕಿನಲ್ಲಿ ಇರುವುದನ್ನು ಇ.ಡಿ ಪತ್ತೆ ಹಚ್ಚಿದೆ.
ಸ್ಥಿರಾಸ್ತಿ ಜಪ್ತಿಗೆ ಕ್ರಮ: ಇ.ಡಿ ಪತ್ತೆ ಹಚ್ಚಿರುವ 20 ಸ್ಥಿರಾಸ್ತಿಗಳ ಜಪ್ತಿಗೆ ಕ್ರಮ ಕೈಗೊಂಡಿದ್ದು, ಪ್ರಕ್ರಿಯೆ ಆರಂಭಿಸಿದೆ. ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದೂ ಮೂಲಗಳು ಹೇಳಿವೆ. ಇ.ಡಿ ಒಮ್ಮೆ ಆಸ್ತಿ ಜಪ್ತಿ ಮಾಡಿದರೆ ಯಾರೂ ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಕಂಪನಿ ನಿರ್ದೇಶಕರೂ ಸೇರಿದಂತೆ 16 ಮಂದಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.