ADVERTISEMENT

ಐಎಂಎ ವಂಚನೆ ಪ್ರಕರಣ: 11 ಮಂದಿಗೆ ಜಾಮೀನು

ಐಎಂಎ ವಂಚನೆ ಪ್ರಕರಣ:

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:31 IST
Last Updated 9 ಡಿಸೆಂಬರ್ 2019, 20:31 IST
   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ 21ನೇ ಆರೋಪಿ, ಶಿವಾಜಿನಗರ ಮಸೀದಿ ಇಮಾಮ್‌ ಮೊಹಮ್ಮದ್‌ ಹನೀಫ್‌ ಅಫ್ಸರ್‌ ಅಜೀಜ್‌ ಮತ್ತು 22ನೇ ಆರೋಪಿ ಮಾಲೂರಿನ ಖಲೀಂ ಉಲ್ಲಾ ಜಮಾಲ್‌ ಸೇರಿದಂತೆ 11 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.

ಜಾಮೀನು ಅರ್ಜಿಯ ಮೇಲೆ ಸುದೀರ್ಘವಾದ– ಪ್ರತಿವಾದ ಆಲಿಸಿದ ಬಳಿಕ ಸಿಬಿಐ ಕೋರ್ಟ್‌ನ ನ್ಯಾಯಾಧೀಶ ಶಿವಶಂಕರ್‌ ಬಿ. ಅಮರಣ್ಣನವರ ಜಾಮೀನು ನೀಡಿದರು. ಆರೋಪಿಗಳು ತಲಾ ₹ 5 ಲಕ್ಷದ ಬಾಂಡ್‌ ಹಾಗೂ ಜಾಮೀನುದಾರರೊಬ್ಬರಿಂದ ಅಷ್ಟೇ ಮೊತ್ತದ ಭದ್ರತೆ ಕೊಡಿಸಬೇಕು ಎಂದು ಆದೇಶದಲ್ಲಿ ಹೇಳಿದ್ದಾರೆ.

ಆರೋಪಿಗಳು ತಪ್ಪದೆ ಕೋರ್ಟ್‌ಗೆ ಹಾಜರಾಗಬೇಕು; ಸಿಬಿಐ ತನಿಖೆಗೆ ಸಹಕರಿಸಬೇಕು; ಸಾಕ್ಷ್ಯ ನಾಶಪಡಿಸಬಾರದು; ಬಿಡುಗಡೆ ಆದ 7 ದಿನದೊಳಗೆ ತನಿಖಾಧಿಕಾರಿಗಳಿಗೆ ಪಾಸ್‌ಪೋರ್ಟ್‌ ಒಪ್ಪಿಸಬೇಕು; ಪಾಸ್‌ಪೋರ್ಟ್‌ ಇಲ್ಲದಿದ್ದರೆ ಪ್ರಮಾಣ ಪತ್ರ ಸಲ್ಲಿಸಬೇಕು. ತನಿಖೆ ಮುಗಿಯುವವರೆಗೆ ಪ್ರತಿ ಭಾನುವಾರ ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ADVERTISEMENT

ಐಎಂಎ ವಂಚನೆ ಪ್ರಕರಣದಲ್ಲಿ ಅಜೀಜ್‌ ಹಾಗೂ ಜಮಾಲ್‌ ಅವರ ಪಾತ್ರ ಕುರಿತು ಈಗಾಗಲೇ ಸಿಬಿಐ ತನಿಖೆ ಪೂರ್ಣಗೊಳಿಸಿದೆ. ಈ ಬಗ್ಗೆ ಸೆಪ್ಟೆಂಬರ್‌ 5ರಂದು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಮುಖ ಆರೋಪಿ, ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ₹ 1.05 ಕೋಟಿ ಪಾವತಿಸಿ ಅಜೀಜ್‌ ಹೆಸರಿನಲ್ಲಿ ಎಚ್‌ಬಿಆರ್‌ ಬಡಾವಣೆಯಲ್ಲಿ ಖರೀದಿಸಿರುವ ಮನೆ, ಅವುಗಳ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಜಮಾಲ್‌ ಬಳಸುತ್ತಿದ್ದ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಕಾರಣಕ್ಕೆ ಜಾಮೀನು ಕೊಡಬಹುದಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ನ್ಯಾಯಾಧೀಶರು ತಮ್ಮ ಆದೇಶಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್‌ನ ಕೆಲವು ಆದೇಶಗಳನ್ನು ಉಲ್ಲೇಖಿಸಿದ್ದಾರೆ. ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು ವಂಚನೆ ಪ್ರಕರಣಕ್ಕೂ ತಮ್ಮ ಕಕ್ಷಿಗಾರರಿಗೂ ಸಂಬಂಧವಿಲ್ಲ. ಅವರು ಕಂಪನಿ ಪಾಲುದಾರರಲ್ಲ. ಕಂಪನಿಯಲ್ಲಿ ಹಣ ಹೂಡುವಂತೆ ಸಾರ್ವಜನಿಕರಿಗೆ ಹೇಳಿರಲಿಲ್ಲ. ಕೆಪಿಐಡಿ ಕಾಯ್ದೆ ಸೆಕ್ಷನ್‌ 9 ಇವರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

ಎಚ್‌ಬಿಆರ್‌ ಬಡಾವಣೆಯಲ್ಲಿ ಮನೆ ಖರೀದಿಸಲು ಕಂಪನಿ ಹಣ ಬಳಕೆ ಮಾಡಿಲ್ಲ. ಈ ಹಣವನ್ನು ಪ್ರಮುಖ ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಕೊಟ್ಟಿದ್ದಾರೆ. ಅಲ್ಲದೆ, ಇಬ್ಬರೂ ಆರೋಪಿಗಳು ಗೌರವಾನ್ವಿತ ರಾಗಿದ್ದು, ಜಾಮೀನು ಕೊಟ್ಟರೆ ದೇಶ ಬಿಟ್ಟು ಓಡಿಹೋಗುವುದಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರ ಕುರಿತು ತನಿಖೆ ಮುಗಿದಿರುವುದ ರಿಂದ ಮತ್ತೆ ಅವರ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ‍ಪ್ರತಿಪಾದಿಸಿದ್ದರು.

ಆರೋಪಿಗಳ ವಿರುದ್ಧ ಹೂಡ ಲಾಗಿರುವ ಪ್ರಕರಣಗಳು ಗಂಭೀರ ಸ್ವರೂಪದ್ದಲ್ಲ. ಜಮಾಲ್‌ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಆರೋಪಿ ಕಂಪನಿಯ ಚಿನ್ನಾಭರಣ ಇಡಲು ಬಂಕರ್‌ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದರು. ಅವರು ಮುಷೈರಾಗಳನ್ನು ಏರ್ಪಡಿಸಿ, ಕಂಪನಿಯಲ್ಲಿ ಹಣ ಹೂಡುವಂತೆ ಜನರ ಮನವೊಲಿಸುತ್ತಿದ್ದರು ಎಂಬ ಆರೋಪದಲ್ಲಿ ಹುರುಳಿಲ್ಲ ಎಂದೂ ವಕೀಲರು ಹೇಳಿದ್ದರು.

ಇಮಾಮ್‌ ಅವರನ್ನು ಜುಲೈ 11ರಂದು ಬಂಧಿಸಲಾಗಿತ್ತು.

ಜಾಮೀನು ಪಡೆದ ಇತರರು

ಐಎಂಎ ಕಂಪನಿ ನಿರ್ದೇಶಕರಾದ ನವೀದ್ ಅಹಮದ್, ಅರ್ಷದ್ ಖಾನ್, ಅಪ್ಸರ್ ಪಾಷಾ, ದಾದಾಪೀರ್, ಶದಾಬ್ ಅಹಮದ್ ಖಾನ್, ಇಸ್ರಾರ್ ಅಹಮದ್ ಖಾನ್, ಸೈಲ್ ಅಹಮದ್, ಮೊಹಮದ್ ಇದ್ರೀಸ್ ಮತ್ತು‌ ಉಸ್ಮಾನ್‌ ಅಬ್ರಾಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.