ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಕ್ಷಮ ಪ್ರಾಧಿಕಾರದ ವಿಶೇಷ ಅಧಿಕಾರಿ, ಶಿವಾಜಿನಗರದ ನೆಹರೂ ಇಂಗ್ಲಿಷ್ ಪ್ರೌಢಶಾಲೆಗೆ ನೋಟಿಸ್ ನೀಡಿದ್ದಾರೆ.
ವಂಚನೆ ಪ್ರಕರಣದ ಪ್ರಮುಖ ಆರೋಪಿಯೂ ಆದ ಐಎಂಎ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಶಾಲೆ ತೆರೆದಿದ್ದರು. ಎಲ್‌ಕೆಜಿಯಿಂದ 10ನೇ ತರಗತಿಯವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು.
ವಂಚನೆ ಪ್ರಕರಣದಲ್ಲಿ ಕಂಪನಿಯ ಎಲ್ಲ ಆಸ್ತಿಗಳನ್ನು ಸಕ್ಷಮ ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದು, ಇದೀಗ ಶಾಲೆಯನ್ನೂ ಸುಪರ್ದಿಗೆ ಪಡೆಯುವುದಕ್ಕಾಗಿ ನೋಟಿಸ್ ಜಾರಿ ಮಾಡಿದೆ.
‘ಸೇಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿರುವ ಶಾಲೆ ಜಾಗವನ್ನು ಶಾಂತಿಯುತವಾಗಿ ನಮ್ಮ ಸುಪರ್ದಿಗೆ ನೀಡಿ’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೋಟಿಸ್ ಪಡೆದಿರುವ ಆಡಳಿತ ಮಂಡಳಿ, ಶಾಲೆಯನ್ನು ಬಂದ್ ಮಾಡಲು ತೀರ್ಮಾನಿಸಿರುವುದಾಗಿ ಗೊತ್ತಾಗಿದೆ.
ನೋಟಿಸ್ ವಿಷಯ ಗೊತ್ತಾಗುತ್ತಿದ್ದಂತೆ ಶಾಲೆ ಬಳಿ ಶನಿವಾರ ಸೇರಿದ್ದ ಪೋಷಕರು, ‘ಏಕಾಏಕಿ ಶಾಲೆ ಬಂದ್ ಮಾಡಿದರೆ, ಮಕ್ಕಳ ಭವಿಷ್ಯ ಹಾಳಾಗುತ್ತದೆ’ ಎಂದು ಅಳಲು ತೋಡಿಕೊಂಡರು.
ಶಾಲೆಗೆ ಭೇಟಿ ನೀಡಿದ ಶಾಸಕ ರಿಜ್ವಾನ್ ಅರ್ಷದ್, ‘ಮಕ್ಕಳ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ನೋಟಿಸ್ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತನಾಡಿ, ಪರ್ಯಾಯ ಕ್ರಮದ ಬಗ್ಗೆ ತೀರ್ಮಾನಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.