ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ವಿರುದ್ಧದ ವಂಚನೆ ಪ್ರಕರಣ ಸಂಬಂಧ ಹನೀಫ್ ಅಫ್ಸರ್ ಅಜೀಜಿ ಎಂಬುವರನ್ನು ಎಸ್‌ಐಟಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
‘ಶಿವಾಜಿನಗರದ ಓಪಿಎಚ್ ರಸ್ತೆಯಲ್ಲಿರುವ ಬೇಪಾರಿಯನ್ ಮಸೀದಿಯ ಮೌಲ್ವಿ (ಧರ್ಮಗುರು) ಆಗಿರುವ ಹನೀಫ್ ಅವರನ್ನು ಸಂಜೆಯಷ್ಟೇ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಕೋರಲಿದ್ದೇವೆ’ ಎಂದು ಎಸ್‌ಐಟಿ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.
‘ಐಎಂಎ ಸಮೂಹ ಕಂಪನಿಯ ಮನ್ಸೂರ್ ಖಾನ್, ಜನರಲ್ಲಿದ್ದ ಧರ್ಮದ ಭಾವನೆಗಳನ್ನೇ ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿ ವಂಚಿಸಿದ್ದಾನೆ. ಕಂಪನಿ ಆರಂಭಿಸಿದ್ದ ದಿನದಿಂದಲೂ ಮೌಲ್ವಿ ಹನೀಫ್ ಜೊತೆಯಲ್ಲಿ ಆತ ಒಡನಾಟ ಇಟ್ಟುಕೊಂಡಿದ್ದ. ಮೌಲ್ವಿ ಅವರನ್ನೇ ಮಧ್ಯವರ್ತಿಯನ್ನಾಗಿ ಬಳಸಿಕೊಂಡು ಜನರಿಂದ ಹಣ ಸಂಗ್ರಹಿಸಿದ್ದ’ ಎಂದು ಮಾಹಿತಿ ನೀಡಿದರು.
‘ಮಸೀದಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಬರುತ್ತಿದ್ದವರ ಎದುರು ಭಾಷಣ ಮಾಡುತ್ತಿದ್ದ ಹನೀಫ್, ‘ಐಎಂಎ ಸಮೂಹ ಕಂಪನಿ ನಮ್ಮದು. ಅಲ್ಲಿ ಹೂಡಿಕೆ ಮಾಡಿದರೆ, ಕಂಪನಿ ಜೊತೆಯಲ್ಲಿ ನಾವೂ ಬೆಳೆಯುತ್ತೇವೆ’ ಎಂದು ಹೇಳುತ್ತಿದ್ದರು. ಧರ್ಮಗುರುವಾಗಿದ್ದರಿಂದ ಅವರ ಮಾತು ನಂಬಿದ್ದ ಸಾವಿರಾರು ಮಂದಿ ಕಂಪನಿಯಲ್ಲಿ ಹಣ ಹೂಡಿದ್ದರು’ ಎಂದು ವಿವರಿಸಿದರು.
‘ಮೌಲ್ವಿ ಹನೀಫ್ ಅವರ ಹೆಸರು ಹೇಳಿಕೊಂಡು ಕಂಪನಿಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. ಮೌಲ್ವಿ ಅವರನ್ನು ಖುಷಿಪಡಿಸುವುದಕ್ಕಾಗಿ ಮನ್ಸೂರ್ ಖಾನ್, ₹ 3 ಕೋಟಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದ.’ ಎಂದೂ ಹೇಳಿದರು.
‘ಉಡುಗೊರೆಯಿಂದ ಮನ್ಸೂರ್ ಖಾನ್ ಹಾಗೂ ಮೌಲ್ವಿ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಅದಾದ ಬಳಿಕವೂ ಮೌಲ್ವಿ, ಹೆಚ್ಚು ಜನರನ್ನು ಹೂಡಿಕೆ ಮಾಡುವಂತೆ ಪ್ರಚೋದಿಸಲಾರಂಭಿಸಿದ್ದರು’ ಎಂದು ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.