ADVERTISEMENT

ಅಜಯ್ ಹಿಲೋರಿ ವಿರುದ್ಧ ತನಿಖೆ: ಸಿಬಿಐ, ಸರ್ಕಾರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 20:52 IST
Last Updated 30 ಏಪ್ರಿಲ್ 2021, 20:52 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ನೀಡಿರುವ ಅನುಮತಿ ಪ್ರಶ್ನಿಸಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಸಲ್ಲಿಸಿರುವ ರಿಟ್ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಹೈಕೋರ್ಟ್ ನೋಟಿಸ್ ನೀಡಲು ಆದೇಶಿಸಿದೆ.

‘ಈ ವಿಷಯದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಅವರ ವಿರುದ್ಧದ ಎಲ್ಲ ಕ್ರಮಗಳು ರಿಟ್ ಅರ್ಜಿಯ ಫಲಿತಾಂಶಕ್ಕೆ ಒಳಪಟ್ಟಿರುತ್ತವೆ’ ಎಂದು ತಿಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ಧ ಪೀಠ, ಜೂ.4ಕ್ಕೆ ವಿಚಾರಣೆ ಮುಂದೂಡಿತು.

ಸಿಆರ್‌ಪಿಸಿ ಸೆಕ್ಷನ್ 197, ಕರ್ನಾಟಕ ಪೊಲೀಸ್ ಕಾಯ್ದೆ, ಭ್ರಷ್ಟಾಚಾರ ತಡೆ(ಪಿ.ಸಿ) ಕಾಯ್ದೆ, ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಕಾಯ್ದೆಯಡಿ ಕ್ರಮಕ್ಕೆ ಮುಂದಾಗಿರುವುದನ್ನು ಅಜಯ್ ಹಿಲೋರಿ ಪ್ರಶ್ನಿಸಿದ್ದಾರೆ. ಅಲ್ಲದೇ ಅವರ ವಿರುದ್ಧದ ಎಫ್‌ಐಆರ್ ಮತ್ತು ಸಿಬಿಐ ಸಲ್ಲಿಸಿರುವ ದೋಷಾರೋಪಣೆ ವಜಾಗೊಳಿಸಲು ಕೋರಿದ್ದಾರೆ.

ADVERTISEMENT

‘ನನ್ನ ವಿರುದ್ಧ ಕ್ರಮಕ್ಕೆ ಅನುಮತಿ ನೀಡುವಾಗ ಪಿ.ಸಿ ಕಾಯ್ದೆಯ ನಿಬಂಧನೆಯ ಉಲ್ಲಂಘನೆಯಾಗಿದೆ. 2019ರ ನವೆಂಬರ್ 8ರಂದು ನಮ್ಮ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದಾಗ ಆರೋಪಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಆದರೂ, ಪಿ.ಸಿ ಕಾಯ್ದೆಯಡಿ ತನಿಖೆ ನಡೆಸಲು 2020ರ ಜ.7ರಂದು ಅನುಮತಿ ನೀಡಲಾಗಿದೆ’ ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ಸಾರೆ.

‘ಎಫ್‌ಐಆರ್ ಮತ್ತು ದೋಷಾರೋಪ ಪಟ್ಟಿಯಲ್ಲಿ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸುವ ಉದ್ದೇಶ ಇಲ್ಲ. ರಾಜಕೀಯ ಮತ್ತು ಅನ್ಯ ಕಾರಣಗಳು ಇದರಲ್ಲಿ ತೂರಿವೆ’ ಎಂದು ಅವರು ದೂರಿದ್ದಾರೆ.

ಐಎಂಎ ನಡೆಸುತ್ತಿದ್ದ ವ್ಯವಹಾರದ ಬಗ್ಗೆ ಅನುಮಾನಿಸಿ ರಿಸರ್ವ್ ಬ್ಯಾಂಕ್ ಬರೆದ ಪತ್ರ ಆಧರಿಸಿ ಐಎಂಎ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬುದು ಹಿಲೋರಿ ಅವರ ಮೇಲಿರುವ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.