ADVERTISEMENT

ಐಎಂಎ: ಗ್ರಾಹಕರ ‘ಗುರುತು’ ಪತ್ತೆಗೆ ಸಿದ್ಧತೆ

80 ಸಾವಿರ ಹೂಡಿಕೆದಾರರಿಗೆ ₹ 2,900 ಕೋಟಿ ವಂಚನೆ– ಡಾಟಾ ಬೇಸ್‌ ಮಾಹಿತಿ

ರಾಜೇಶ್ ರೈ ಚಟ್ಲ
Published 27 ಮೇ 2020, 19:25 IST
Last Updated 27 ಮೇ 2020, 19:25 IST
ಐಎಂಎ ಜ್ಯುವೆಲ್ಸ್ ಸಂಗ್ರಹ ಚಿತ್ರ
ಐಎಂಎ ಜ್ಯುವೆಲ್ಸ್ ಸಂಗ್ರಹ ಚಿತ್ರ   

ಬೆಂಗಳೂರು: ಸುಮಾರು 80 ಸಾವಿರ ಗ್ರಾಹಕರಿಗೆಐಎಂಎ (ಐ ಮಾನಿಟರಿ ಅಡ್ವೈಸರಿ) ₹ 2,900 ಕೋಟಿ ವಂಚಿಸಿರುವ ಮಾಹಿತಿ ಆ ಕಂಪನಿಯ ಡಾಟಾಬೇಸ್‌ನಿಂದ ಲಭ್ಯವಾಗಿದ್ದು, ಹಣ ಕಳೆದುಕೊಂಡವರಿಂದ ಶೀಘ್ರದಲ್ಲೇಕ್ಲೈಮ್‌ ಅರ್ಜಿ ಆಹ್ವಾನಿಸಲು ಸಕ್ಷಮ ಪ್ರಾಧಿಕಾರ ಸಿದ್ಧತೆ ನಡೆಸಿದೆ. ಆದರೆ, ಅದಕ್ಕೂ ಮೊದಲು ಪ್ರತಿ ಗ್ರಾಹಕ ತಮ್ಮ ‘ಗುರುತು’ ದೃಢೀಕರಿಸಿಕೊಳ್ಳಬೇಕು.‌

ವಂಚನೆಗೆ ಒಳಗಾದವರ ಪೈಕಿ, ಕೆಲವರಿಗೆ ಹೂಡಿಕೆ ಮೊತ್ತದ ಅರ್ಧ, ಇನ್ನೂ ಕೆಲವರಿಗೆ ಪೂರ್ಣ ಹಣ ಕಂಪನಿ ವಾಪಸ್ ನೀಡಿದೆ. ಅನೇಕರಿಗೆ ಪಾವತಿಸಿರುವ (ಲಾಭಾಂಶ) ಹಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಮರಳಿಸಬೇಕಾದ ಹಣ ಸುಮಾರು ₹ 1,000 ಕೋಟಿ ಆಗುತ್ತದೆ. ಹೂಡಿಕೆ ಮೊತ್ತದಲ್ಲಿ ವಾಪಸ್ ನೀಡಿದ ಮತ್ತು ಪಾವತಿಸಿದ ಲಾಭಾಂಶ ಹಣ ಪರಿಗಣಿಸಿದರೆ, ಕೆಲವರಿಗೆ ಹೂಡಿಕೆಗಿಂತ ಹೆಚ್ಚು ಹಣ ಮರಳಿಸಿರುವುದೂ ಗೊತ್ತಾಗಿದೆ.

‘ಹಣ ಅನ್ಯರ ಪಾಲಾಗಬಾರದೆಂಬ ಕಾರಣಕ್ಕೆ ಗ್ರಾಹಕರನ್ನು ಗುರುತಿಸಿ, ಕ್ಲೈಮ್‌ ಅರ್ಜಿ ಸಲ್ಲಿಸಿ ಮೊತ್ತ ವಾಪಸ್ ಪಡೆಯಲು ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯಗೊಳಿಸಲಾಗುತ್ತದೆ‘ ಎಂದು ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ ‘ಪ್ರಜಾವಾಣಿ’ ತಿಳಿಸಿದರು.

ADVERTISEMENT

‘ನಗದು, ಚಿನ್ನ, ಆಸ್ತಿ ಸೇರಿ ಈವರೆಗೆ ₹ 450 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅದನ್ನು ವಂಚನೆಗೊಳಗಾದವರಿಗೆ ಸಮಾನವಾಗಿ ಹಂಚಿದರೆ, ಹೂಡಿಕೆ ಮೊತ್ತದ ಶೇ 15ರಷ್ಟು ಮಾತ್ರ ವಾಪಸ್ ಸಿಗಲಿದೆ. ಆದರೆ, ಈಗಾಗಲೇ ಪಾವತಿಸಿದ ಹಣವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಮತ್ತು ಕಂಪನಿಯಿಂದ ಹೆಚ್ಚು ಮೊತ್ತ ಪಡೆದವರಿಂದ ವಾಪಸ್ ಪಡೆದು ಮರು ಹಂಚಿದರೆ, ಪ್ರತಿ ಗ್ರಾಹಕನಿಗೆ ಹೂಡಿಕೆಯ ಶೇ 45ರಷ್ಟು ವಾಪಸ್ ಸಿಗಬಹುದು. ಪ್ರಕರಣದ ತ್ವರಿತ ವಿಚಾರಣೆಗೆ ಸ್ಥಾಪಿಸಿದ ನ್ಯಾಯಾಲಯ ಈ ಬಗ್ಗೆ ತೀರ್ಮಾನಿಸಲಿದೆ’ ಎಂದೂ ಅವರು ತಿಳಿಸಿದರು.

ಕ್ಲೈಮ್‌ ಹಣ ಅನ್ಯರಿಗೆ ಸೇರಬಾರದೆಂದು ಗ್ರಾಹಕರ ಹೆಸರು, ಭಾವಚಿತ್ರ, ಆಧಾರ್‌, ರೇಷನ್ ಕಾರ್ಡ್‌, ಬ್ಯಾಂಕ್‌ ಖಾತೆಯನ್ನು ಐಎಂಎ ಡಾಟಾ ಬೇಸ್‌ ಜೊತೆ ಹೊಂದಾಣಿಕೆ ಮಾಡಲಾಗುವುದು ಎಂದುಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥಹರ್ಷ ಗುಪ್ತ ತಿಳಿಸಿದರು.

ಅರ್ಜಿ ಸಲ್ಲಿಕೆ ಹೇಗೆ?

ವಂಚನೆಗೊಳಗಾದ ಗ್ರಾಹಕರು ಕರ್ನಾಟಕ ಒನ್‌ ಅಥವಾ ಬೆಂಗಳೂರು ಒನ್‌ ಸೇವಾ ಕೇಂದ್ರಗಳಲ್ಲಿ ಕ್ಲೈಮ್‌ ಅರ್ಜಿ ಸಲ್ಲಿಸಬಹುದು. ಅದಕ್ಕೂ ಮೊದಲು, ಆಧಾರ್ ಅಥವಾ ರೇಷನ್‌ ಕಾರ್ಡ್ ಸಂಖ್ಯೆ ಕೊಟ್ಟು ಬಯೋಮೆಟ್ರಿಕ್‌ ದೃಢೀಕರಿಸಿಕೊಳ್ಳಬೇಕು.

‘ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವವರು ಆಧಾರ್‌ಗೆ ನೀಡಿದ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ನೀಡಬೇಕು. ಐಎಂಎ ಬ್ಯಾಂಕ್‌ ಖಾತೆ ಇರುವ ಬ್ಯಾಂಕಿನಿಂದ ಪ್ರಾಧಿಕಾರದ ಬ್ಯಾಂಕ್‌ ಖಾತೆಗೆ ₹ 1 ವರ್ಗಾಯಿಸುವ ಮೂಲಕ ಅಥವಾ ಪ್ರಾಧಿಕಾರ ಗೊತ್ತುಪಡಿಸಿದ ಅಧಿಕಾರಿ ಎದುರು ಹಾಜರಾಗಿಯೂ ಗ್ರಾಹಕ ದೃಢೀಕರಿಸಿಕೊಳ್ಳಬಹುದು. ಹೂಡಿಕೆ ಮಾಡಿದ ಹಣದ ವಿವರಗಳನ್ನು ಐಎಂಎ ಡಾಟಾ ಬೇಸ್‌ನಿಂದ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಪಡೆಯಲಾಗುವುದು. ಪ್ಯಾನ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ, ಗ್ರಾಹಕನೆಂಬ ಗುರುತು, ಆಧಾರ್‌ ನಂಬರ್‌, ಬ್ಯಾಂಕ್ ಖಾತೆ ಬದಲಾಗಿದ್ದರೆ ಆ ಮಾಹಿತಿಯನ್ನೂ ಖಚಿತಪಡಿಸಿಕೊಳ್ಳಲಾಗುವುದು’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.