ಬೆಂಗಳೂರು: ‘ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ₹465.21 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆದರೆ, ನ್ಯಾಯಾಲಯದ ನಿರ್ದೇಶನ ಇಲ್ಲದೆ ಹಣ ಕಳೆದುಕೊಂಡವರಿಗೆಅದನ್ನು ಹಂಚಲು ಸಾಧ್ಯವಾಗದು’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ದೂರುಗಳು ಬರುತ್ತಿವೆ. ಆನ್‌ಲೈನ್ ಮೂಲಕವೂ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಇದು ಮುಕ್ತಾಯವಾಗದ ಹೊರತು ಹಗರಣದ ಮೌಲ್ಯ ಎಷ್ಟು ಎಂಬುದು ನಿರ್ಧಾರಕ್ಕೆ ಬರಲು ಆಗದು’ ಎಂದರು.
70 ಸಾವಿರಕ್ಕೂ ಅಧಿಕ ಜನ ಹಣ ಕಳೆದುಕೊಂಡಿರುವುದರಿಂದ ಇದರ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಪ್ರಕರಣಗಳ ವಿಚಾರಣೆ ಬೇಗನೆ ಪೂರ್ಣಗೊಳಿಸಲು ಹೈಕೋರ್ಟ್‌ಗೆ ಕೋರಿಕೆ ಸಲ್ಲಿಸಿದ್ದೇವೆ. ಅನುಮತಿ ಸಿಕ್ಕಿದ ತಕ್ಷಣವೇ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಅಲಿಖಾನ್ ಮತ್ತು ಐಎಂಎ ಅಂಗಸಂಸ್ಥೆಗಳ 49 ನಿರ್ದೇಶಕರ ವಿರುದ್ಧ 14 ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರ ವಿಚಾರಣೆಯನ್ನು ಸಿಬಿಐ ನಡೆಸುತ್ತಿದೆ. ಸಿಬಿಐ ಕಾಲ ಕಾಲಕ್ಕೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುತ್ತಿರುವುದರಿಂದ ಕೆಲವು ಮಾಹಿತಿಗಳನ್ನು ಸದನದಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ತಿಳಿಸಿದರು.
ವಿಷಯ ಪ್ರಸ್ತಾಪಿಸಿದ ರಿಜ್ವಾನ್ ಅರ್ಷದ್ ಅವರು, ‘ಈ ಹಗರಣ ಬಯಲಿಗೆ ಬಂದ ಮೇಲೆ ಸಕ್ಷಮ ಪ್ರಾಧಿಕಾರ ಸ್ಥಾಪಿಸಲು ನ್ಯಾಯಾಲಯ ಸೂಚಿಸಿತ್ತು. ಪ್ರಾಧಿಕಾರ ಸ್ಥಾಪನೆಯಾಗಿ ಮೂರು ತಿಂಗಳಾದರೂ ಕಚೇರಿ ಮತ್ತು ಸಿಬ್ಬಂದಿಯನ್ನು ನೀಡಿರಲಿಲ್ಲ. ಹೈಕೋರ್ಟ್ ಹೇಳಿದ ನಂತರವೇ ಸಿಬ್ಬಂದಿ ಮತ್ತು ಕಚೇರಿ ನೀಡಲಾಯಿತು’ ಎಂದರು.
ಆರೋಪಿಗಳಿಂದ ಮುಟ್ಟುಗೋಲು ಹಾಕಿಕೊಂಡಿರುವ ಹಣವನ್ನು ಕಂಪನಿಯಲ್ಲಿ ಹಣ ತೊಡಗಿಸಿ ಕಳೆದುಕೊಂಡಿರುವ ಬಡವರಿಗೆ ಸರ್ಕಾರವೇ ಹಂಚಬೇಕು ಎಂದು ಕಾಂಗ್ರೆಸ್‌ನ ಜಮೀರ್ ಅಹಮದ್ ಖಾನ್ ಒತ್ತಾಯಿಸಿದರು. ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಮತ್ತಿತರರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.