ADVERTISEMENT

ಐಎಂಎ: ಆಸ್ತಿ ಮುಟ್ಟುಗೋಲಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:52 IST
Last Updated 18 ಮಾರ್ಚ್ 2021, 19:52 IST
 ಐ ಮಾನಿಟರಿ ಅಡ್ವೈಸರಿ (ಐಎಂಎ)
ಐ ಮಾನಿಟರಿ ಅಡ್ವೈಸರಿ (ಐಎಂಎ)   

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಸಂಬಂಧ ಆಸ್ತಿ ಮುಟ್ಟುಗೋಲು ವಿಷಯದಲ್ಲಿ ಸ್ವತಂತ್ರವಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಮಾಜಿ ಶಾಸಕ ರೋಷನ್ ಬೇಗ್ ಅವರಿಗೆ ಸೇರಿದ ಆಸ್ತಿ ಮುಟ್ಟುಗೋಲು ಆದೇಶ ಹೊರಡಿಸಲು ಸಿಬಿಐನಿಂದ ಕೆಲ ಮಾಹಿತಿ ಕೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಲ್ಲಿಸಿದ್ದ ಅನುಸರಣಾ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಪೀಠ, ‘ಸಿಬಿಐ ಅಂತಿಮ ವರದಿ ನೀಡುವ ತನಕ ರಾಜ್ಯ ಸರ್ಕಾರ ಕಾಯಲು ಆಗುವುದಿಲ್ಲ. ಅಂತಿಮ ವರದಿಗೆ ಕಾಯುತ್ತಿದ್ದರೆ ಅಷ್ಟರಲ್ಲಿ ಆಸ್ತಿಯೇ ಅಸ್ತಿತ್ವದಲ್ಲಿ ಇಲ್ಲದಂತೆ ಆಗಬಹುದು. ಸಿಬಿಐನಿಂದ ಮಾಹಿತಿ ಕೇಳುವ ನಿಲುವು ಸಂಪೂರ್ಣ ತಪ್ಪು. ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆ 2004ರ ಅಡಿಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ’ ಎಂದು ಪೀಠ ಹೇಳಿತು.

ADVERTISEMENT

ಈವರೆಗೆ ₹4.9 ಕೋಟಿಯನ್ನು 3,243 ಹಕ್ಕುದಾರರಿಗೆ ವರ್ಗಾಯಿಸಲಾಗಿದೆ ಎಂದು ಐಎಂಎ ಪ್ರಕರಣದಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರ ಮಾಹಿತಿ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.