ADVERTISEMENT

ಐಎಂಎ ವಂಚನೆ: ಠೇವಣಿದಾರರಿಂದ ₹ 550 ಕೋಟಿ ವಸೂಲಿ?

ಈವರೆಗೆ ₹ 473.71 ಕೋಟಿ ಮೌಲ್ಯದ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 21:00 IST
Last Updated 27 ಡಿಸೆಂಬರ್ 2020, 21:00 IST
ಐ ಮಾನಿಟರಿ ಅಡ್ವೈಸರಿ ಕಂಪನಿ
ಐ ಮಾನಿಟರಿ ಅಡ್ವೈಸರಿ ಕಂಪನಿ   

ಬೆಂಗಳೂರು: ಬಹುಕೋಟಿ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ, ತನ್ನಲ್ಲಿ ಠೇವಣಿ ಇಟ್ಟಿದ್ದ ಕೆಲವು ಗ್ರಾಹಕರಿಗೆ ಲಾಭಾಂಶವಾಗಿ ₹550 ಕೋಟಿಗೂ ಹೆಚ್ಚು ಹಣ ಮರಳಿಸಿದೆ!

ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ, ‘ಠೇವಣಿ ಮೊತ್ತಕ್ಕಿಂತ ಹೆಚ್ಚು ಹಣ ಪಡೆದ ಗ್ರಾಹಕರಿಂದ ಆ ಹಣವನ್ನು ವಸೂಲು ಮಾಡುವ ವಿಷಯದಲ್ಲಿ ನಿರ್ಧರಿಸಬೇಕಿದೆ. ಅಲ್ಲದೆ, ಲಾಭ ಇಲ್ಲದಿದ್ದರೂ ಲಾಭ ಇದೆಯೆಂದು ಲೆಕ್ಕ ತೋರಿಸಿ ಆದಾಯ ತೆರಿಗೆ ಇಲಾಖೆಗೆ ಐಎಂಎ ಪಾವತಿಸಿದ ₹ 137 ಕೋಟಿ ತೆರಿಗೆಯನ್ನೂ ಮರಳಿ ಪಡೆಯಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಐಎಂಎ ಸಮೂಹ ಸಂಸ್ಥೆ ಶಿವಾಜಿನಗರದಲ್ಲಿರುವ ವಿ.ಕೆ. ಒಬೈದುಲ್ಲ ಸರ್ಕಾರಿ ಶಾಲೆಯಲ್ಲಿ ₹ 10 ಕೋಟಿಗೂ ಹೆಚ್ಚು ಬಂಡವಾಳ ಹಾಕಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಈ ಮಾಹಿತಿಯನ್ನು ಸಕ್ಷಮ ಪ್ರಾಧಿಕಾರ ನೀಡಿದೆ.

ADVERTISEMENT

‘ಐಎಂಎಗೆ ಸೇರಿದ ಶಿವಾಜಿನಗರದಲ್ಲಿರುವ ಫ್ರಂಟ್‌ಲೈನ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ₹ 2.08 ಕೋಟಿ ಮೌಲ್ಯದ ವಸ್ತುಗಳು, ₹ 12 ಲಕ್ಷ ಭದ್ರತಾ ಠೇವಣಿ, ಲೇಡಿ ಕರ್ಜನ್‌ ರಸ್ತೆಯಲ್ಲಿರುವ ಎರಡು ಕಚೇರಿಯಿಂದ ₹ 52.30 ಲಕ್ಷ ಮತ್ತು ₹ 34.67 ಲಕ್ಷ ಮೌಲ್ಯದ ವಸ್ತುಗಳು, ₹ 14.60 ಲಕ್ಷದ ನಾಲ್ಕು ವಾಹನಗಳನ್ನು ಇತ್ತೀಚೆಗೆ ವಶಕ್ಕೆ ಪಡೆಯಲಾಗಿದೆ. ಆ ಮೂಲಕ, ಒಟ್ಟು ₹ 473,71,59,365 ಮೌಲ್ಯದ ಆಸ್ತಿಯನ್ನು ಈವರೆಗೆ ಜಪ್ತಿ ಮಾಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ಹರ್ಷ ಗುಪ್ತ ತಿಳಿಸಿದರು.

‘ಐಎಂಎಯಲ್ಲಿ 75 ಸಾವಿರ ಮಂದಿ ಹೂಡಿಕೆ ಮಾಡಿದ್ದಾರೆ. ಹೂಡಿಕೆದಾರರಿಗೆ ಹಣ ಮರಳಿಸುವ ಉದ್ದೇಶದಿಂದ ನ. 25ರಿಂದ ಡಿ. 24 ರವರೆಗೆ ಕ್ಲೈಮ್‌ ಅರ್ಜಿ ಆಹ್ವಾನಿಸಲಾಗಿತ್ತು. ಕ್ಲೈಮ್‌ ಅರ್ಜಿ ಆಹ್ವಾನಿಸಿದ ಬಗ್ಗೆ 71,418 ಠೇವಣಿದಾರರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಲಾಗಿದ್ದು, ಈ ಪೈಕಿ 63,916 ಮಂದಿಗೆ ಈ ಸಂದೇಶ ಯಶಸ್ವಿಯಾಗಿ ರವಾನೆಯಾಗಿದೆ. ಅಷ್ಟೇ ಸಂಖ್ಯೆಯ ಮೊಬೈಲ್‌ಗಳಿಗೆ ಐವಿಆರ್‌ಎಸ್‌ (ಧ್ವನಿ ಸ್ಪಂದನಾ ವ್ಯವಸ್ಥೆ) ಸಂದೇಶ ಕಳುಹಿಸಲಾಗಿದ್ದು, 53,446 ಮಂದಿಗೆ ತಲುಪಿದೆ. 76,576 ಠೇವಣಿದಾರಿಗೆ ವೈಯಕ್ತಿಕವಾಗಿ ಪತ್ರ ಬರೆಯಲಾಗಿದೆ. ಕಾಲ್‌ ಸೆಂಟರ್‌ಗೆ 30,378 ಮಂದಿ ಕರೆ ಮಾಡಿದ್ದಾರೆ. ಈವರೆಗೆ 62 ಸಾವಿರ ಮಂದಿ ಕ್ಲೈಮ್‌ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಜ. 3ರವರೆಗೆ
ವಿಸ್ತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ದೋಷಾರೋಪ ಪಟ್ಟಿಯಲ್ಲಿ ಆರೋಪ ಹೊರಿಸಿರುವ ಪೊಲೀಸ್‌ ಅಧಿಕಾರಿಗಳ ಕುರಿತು ಹಾಗೂ ಐಎಂಎ ಪ್ರಮೋಟರ್‌ ಆಗಿದ್ದ ಮಾಜಿ ಶಾಸಕ ಆರ್‌. ರೋಷನ್‌ ಬೇಗ್‌ ಅವರ ಪಾತ್ರದ ಬಗ್ಗೆ ಪೂರಕ ಪುರಾವೆಗಳನ್ನು ಸಿಬಿಐನಿಂದ ಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದೂ ಅವರು ತಿಳಿಸಿದರು.

*
ಐಎಂಎ ಫಲಾನುಭವಿ ಎನ್ನುವುದು ಖಚಿತವಾದರೆ ಅಂಥವರ ವೈಯಕ್ತಿಕ ಆಸ್ತಿ ಜಪ್ತಿ ಮಾಡಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆಯಡಿ ಅವಕಾಶವಿದೆ.
-ಹರ್ಷ ಗುಪ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.