ADVERTISEMENT

ಜಮೀರ್‌ ವಿಲಾಸಿ ಬಂಗಲೆ: ಇ.ಡಿ ಕೆಂಗಣ್ಣು

23 ಗಂಟೆಗಳ ಶೋಧ ಮುಗಿಸಿದ ಇ.ಡಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 20:39 IST
Last Updated 6 ಆಗಸ್ಟ್ 2021, 20:39 IST
ಜಮೀರ್ ಅಹ್ಮದ್ ಖಾನ್ ಅವರ ಭವ್ಯ ಬಂಗಲೆ
ಜಮೀರ್ ಅಹ್ಮದ್ ಖಾನ್ ಅವರ ಭವ್ಯ ಬಂಗಲೆ   

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಶೋಧಕ್ಕೆ ಪ್ರಮುಖ ಕಾರಣವಾಗಿದ್ದು ಅವರು ಕಟ್ಟಿಸಿರುವ ಅರಮನೆಯನ್ನೇ ಹೋಲುವ ಅರೇಬಿಕ್ ಶೈಲಿಯ ವಿಲಾಸಿ ಬಂಗಲೆ!

ಕಂಟೋನ್ಮೆಂಟ್ ರೈಲು ನಿಲ್ದಾಣದ ಎದುರಿನ 33,479 ಚದರ ಅಡಿ ಜಾಗವನ್ನು 2006ರಲ್ಲಿ ಜಮೀರ್ ಖರೀದಿ ಮಾಡಿದ್ದರು. ಅದರಲ್ಲಿ 14,900 ಚರದ ಅಡಿ ಜಾಗದಲ್ಲಿ ಎರಡು ಬಂಗಲೆಗಳನ್ನು ನಿರ್ಮಿಸಲಾಗಿದೆ. ಇವುಗಳ ನಿರ್ಮಾಣಕ್ಕೆ ಏಳು ವರ್ಷ ಹಿಡಿದಿದೆ.

‘ಮನೆಗೆ ಬಳಸಿರುವ ಗ್ರಾನೈಟ್, ಗೋಡೆಯಲ್ಲಿ ಶ್ವೇತ ಶಿಲೆಯ ಕಲಾಕೃತಿಗಳು, ಚಿನ್ನ ಲೇಪಿತ ಎಂದು ಹೇಳಲಾಗುವ ಪೀಠೋಪಕರಣಗಳು ಕೂಡ ಅರೇಬಿಕ್ ಶೈಲಿಯಲ್ಲೇ ಇವೆ. ಒಟ್ಟಾರೆ ಮನೆಯಲ್ಲಿ 40 ಕೊಠಡಿಗಳಿದ್ದು, ಶೋಧ ನಡೆಸಲು ಹೋಗಿದ್ದ ಇ.ಡಿ ಅಧಿಕಾರಿಗಳೇ ಬಂಗಲೆ ನೋಡಿ ಬೆರಗಾಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಮನೆ ವಿನ್ಯಾಸಕ್ಕಾಗಿ ವಾಸ್ತುಶಿಲ್ಪಿಗಳನ್ನೂ ದುಬೈನಿಂದಲೇ ಕರೆಸಲಾಗಿತ್ತು. ಎರಡು ಕಟ್ಟಡ, ಅದರ ಮುಂದಿನ ಉದ್ಯಾನ ಕೂಡ ಅರಮನೆಯ ವೈಭವವನ್ನು ನೆನಪಿಸುವಂತಿವೆ. ಈ ಬಂಗಲೆಯೇ ಜಮೀರ್ ಅಹ್ಮದ್ ಮೇಲೆ ಇ.ಡಿ ಅಧಿಕಾರಿಗಳು ಕೆಂಗಣ್ಣು ಬೀಳಲು ಕಾರಣವಾಯಿತು ಎನ್ನಲಾಗಿದೆ.

ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಗಿನ ಜಾವದ ತನಕ ಸತತ 23 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಇ.ಡಿ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಮೀರ್, ‘ಈ ಬಂಗಲೆ ಮೇಲೆ ಹಲವರು ಕಣ್ಣಿತ್ತು. ರಾಜಕೀಯದಲ್ಲಿರುವ ಕಾರಣ ನನಗೆ ವಿರೋಧಿಗಳಿದ್ದಾರೆ. ಯಾರೋ ಮೂರ್ನಾಲ್ಕು ಜನ ದೂರು ನೀಡಿದ್ದರಿಂದ ಇ.ಡಿ ಅಧಿಕಾರಿಗಳು ಬಂದು ಶೋಧ ನಡೆಸಿದ್ದಾರೆ. ದೂರು ನೀಡಿದವರು ಯಾರು ಎಂದು ಹೇಳಲು ಇ.ಡಿ ಅಧಿಕಾರಿಗಳು ನಿರಾಕರಿಸಿದರು. ಶೋಧ ನಡೆಸಿ ಯಾವುದೇ ತಪ್ಪುಗಳಿಲ್ಲ ಎಂದು ಮನವರಿಕೆ ಮಾಡಿಕೊಂಡು ಹೋಗಿರುವುದು ನಮಗೂ ನಿರಾಳವಾಗಿದೆ’ ಎಂದರು.

‘ಇಷ್ಟು ದೊಡ್ಡ ಮನೆ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂತು, ಎಷ್ಟು ಖರ್ಚು ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದರು. ಎಲ್ಲಾ ವ್ಯವಹಾರವನ್ನೂ ಬ್ಯಾಂಕ್ ಮೂಲಕವೇ ಮಾಡಿದ್ದೇನೆ. ಆ ಎಲ್ಲಾ ದಾಖಲೆಗಳನ್ನೂ ಒದಗಿಸಿದ್ದೇನೆ. ಅವರೂ ಬ್ಯಾಂಕ್‌ಗಳಿಗೆ ಹೋಗಿ ಮಾಹಿತಿ ಪಡೆದುಕೊಂಡರು. ಅವರು ನಿರೀಕ್ಷೆ ಮಾಡಿದಂತೆ ಯಾವ ಲೋಪವೂ ಕಂಡು ಬರಲಿಲ್ಲ’ ಎಂದು ವಿವರಿಸಿದರು.

‘ಐಎಂಎ ಹಗರಣದ ಬಗ್ಗೆ ಯಾವುದೇ ಪ್ರಶ್ನೆ ಅಥವಾ ಮಾಹಿತಿಯನ್ನೂ ಅವರು ಕೇಳಲಿಲ್ಲ. ಮುಂದಿನ ದಿನಗಳಲ್ಲಿ ಕರೆದಾಗ ಕಚೇರಿಗೆ ಬಂದು ಸ್ಪಷ್ಟನೆ ನೀಡಬೇಕು ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ನೋಟಿಸ್ ನೀಡಿಲ್ಲ. ಯಾರನ್ನೂ ವಶಕ್ಕೆ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮನೆ ನಿರ್ಮಾಣಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ಆದಾಯ ತೆರಿಗೆ(ಐ.ಟಿ) ಇಲಾಖೆಗೆ ಮಾಹಿತಿ ನೀಡಿದ್ದೇನೆ. ಮಾಧ್ಯಮಗಳಿಗೆ ಬಹಿರಂಗಪಡಿಸುವ ಅಗತ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪದೇ ಪದೇ ಕೇಳಿದ್ದನ್ನೇ ಕೇಳಿದರು...

ರೋಷನ್ ಬೇಗ್ ಮನೆಯಲ್ಲೂ ಇ.ಡಿ ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವದ ವೇಳೆಗೆ ಶೋಧ ಮುಗಿಸಿ ವಾಪಸ್ ಹೋದರು.

ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಬೇಗ್‌, ‘ಅಕ್ರಮ ಹಣಕಾಸು ವ್ಯವಹಾರ(ಮನಿ ಲಾಂಡ್ರಿಂಗ್) ನಡೆದಿದೆ ಎಂಬ ಅನುಮಾನದಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದರು. ಎರಡು–ಮೂರು ಗಂಟೆಗಳಲ್ಲೇ ನಡೆಯಬೇಕಿದ್ದ ಶೋಧವನ್ನು ಅನಗತ್ಯ ವಿಳಂಬ ಮಾಡಿದರು. ಕೇಳಿದ ಪ್ರಶ್ನೆಗಳನ್ನೇ ಪದೇ ಪದೇ ಕೇಳಿ ಕಾಲಹರಣ ಮಾಡಿದರು’ ಎಂದರು.

‘2004ರಿಂದ ಚುನಾವಣಾ ಆಯೋಗಕ್ಕೆ ಮತ್ತು ಪ್ರತಿವರ್ಷ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡಿದ್ದೇನೆ. ಆ ಎಲ್ಲಾ ದಾಖಲೆಗಳನ್ನು ಅವರಿಗೆ ಹಾಜರುಪಡಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.