ಬೆಂಗಳೂರು: ‘ಫಾಸ್ಪೇಟ್‌ಯುಕ್ತ ಡಿಟರ್ಜೆಂಟ್ ನಿಷೇಧದಿಂದ ಮಾತ್ರ ಕೆರೆಗಳು ಮಲಿನ ಆಗುವುದನ್ನು ತಪ್ಪಿಸಲು ಸಾಧ್ಯ’ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ಎಸ್. ರಾಜಾರಾವ್ ಅಭಿಪ್ರಾಯಪಟ್ಟರು.
ಎಂಜಿನಿಯರ್‌ಗಳ ದಿನದ ಅಂಗವಾಗಿ ಕರ್ನಾಟಕ ಎಂಜಿನಿಯರ್‌ಗಳ ಅಕಾಡೆಮಿ ಮತ್ತು ಹಿರಿಯ ಎಂಜಿನಿಯರ್‌ಗಳ ವೇದಿಕೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಗೆ ಪರಿಹಾರಗಳು’ ಕುರಿತು ಅವರು ಉಪನ್ಯಾಸ ನೀಡಿದರು.
‘ಡಿಟರ್ಜೆಂಟ್‌ಗಳಲ್ಲಿ ಶೇ 19ರಿಂದ ಶೇ 23.36ರಷ್ಟು ರಾಸಾಯನಿಕ ಪದಾರ್ಥಗಳಿವೆ. ಭಾರತದಲ್ಲಿ ಗೃಹ ಬಳಕೆ ಡಿಟರ್ಜೆಂಟ್ ಪೌಡರ್‌ಗಳನ್ನು ತಯಾರಿಸುವ ಪ್ರಮುಖ ಸಂಸ್ಥೆಗಳು ಐಎಸ್ ಗುಣಮಟ್ಟ ಅನುಸರಿಸುತ್ತಿಲ್ಲ. ಅಮೆರಿಕ, ಕೆನಡಾ, ಜರ್ಮನಿಯಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 60 ವರ್ಷಗಳ ಹಿಂದೆಯೇ ಫಾಸ್ಪೇಟ್ ಯುಕ್ತ ಡಿಟರ್ಜೆಂಟ್‌ಗಳನ್ನು ನಿಷೇಧಿಸಿವೆ’ ಎಂದರು.
‘ನಗರದಲ್ಲಿನ ಕೆರೆಗಳ ಮಾಲಿನ್ಯಕ್ಕೆ, ಅದರಲ್ಲೂ ಬೆಳ್ಳಂದೂರು ಕೆರೆ ಕಲುಷಿತಗೊಳ್ಳಲು ನೀರಿನಲ್ಲಿ ಫಾಸ್ಪೇಟ್ ಯುಕ್ತ ಡಿಟರ್ಜೆಂಟ್‌ನ ಪ್ರಮಾಣ ಹೆಚ್ಚುತ್ತಿರುವುದೇ ಕಾರಣ. ಈ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಡಿಟರ್ಜೆಂಟ್ ನಿಷೇಧ ಸಂಬಂಧ ಕೇಂದ್ರ ರಾಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಮೇಲೆ ಒತ್ತಡ ಹೇರುವ ಅಗತ್ಯವಿದೆ’ ಎಂದು ಅವರು ಹೇಳಿದರು.
‘ಬೆಳ್ಳಂದೂರು ಕೆರೆಯ ಪುನರುಜ್ಜೀವನಕ್ಕೆ ಕಳೆ ಮತ್ತು ಹೂಳೆತ್ತುವುದು ಅಗತ್ಯ. ಅದಕ್ಕೂ ಮುನ್ನ ಅಲ್ಲಿಗೆ ಸಂಸ್ಕರಿಸದ ತ್ಯಾಜ್ಯ ನೀರು ಹರಿಯುವುದನ್ನು ತಡೆಯಬೇಕು’ ಎಂದು ಅವರು ಸಲಹೆ ನೀಡಿದರು.
‘ಕೆರೆಯ ಹೂಳನ್ನು ಬೇರೆಡೆಗೆ ಸಾಗಿಸುವ ಬದಲು, ಕೆರೆಯ ಸುತ್ತಲ ಶೇ 10ರಷ್ಟು ಜಾಗವನ್ನು ಮಣ್ಣು ಸುರಿಯಲು ಉಪಯೋಗಿಸಬಹುದು. ಆ ಮಣ್ಣು ಕೆರೆ ಸೇರದಂತೆ ಸುತ್ತಲು ತಡೆಗೋಡೆಗಳನ್ನು ನಿರ್ಮಿಸುವುದು ಸೂಕ್ತ. ಹೂಳೆತ್ತಿದ ಮಣ್ಣು ಸಾಗಿಸುವ ವೆಚ್ಚಕ್ಕೆ ಹೋಲಿಸಿದರೆ ಇದಕ್ಕೆ ಕಡಿಮೆ ಹಣ ಖರ್ಚಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.