ADVERTISEMENT

ಇನ್ನೊಂದು ವರ್ಷದಲ್ಲಿ ನೈರುತ್ಯ ರೈಲ್ವೆಯ ದ್ವಿಪಥ ಕಾಮಗಾರಿ ಪೂರ್ಣ

ಬಾಲಕೃಷ್ಣ ಪಿ.ಎಚ್‌
Published 26 ಅಕ್ಟೋಬರ್ 2023, 19:59 IST
Last Updated 26 ಅಕ್ಟೋಬರ್ 2023, 19:59 IST
ಬೈಯಪ್ಪನಹಳ್ಳಿ–ಹೊಸೂರು ಮಾರ್ಗದಲ್ಲಿ ರೈಲು ಹಳಿ ದ್ವಿಪಥಗೊಳಿಸುವ ಕಾಮಗಾರಿ ನಡೆಯುತ್ತಿದೆ
ಬೈಯಪ್ಪನಹಳ್ಳಿ–ಹೊಸೂರು ಮಾರ್ಗದಲ್ಲಿ ರೈಲು ಹಳಿ ದ್ವಿಪಥಗೊಳಿಸುವ ಕಾಮಗಾರಿ ನಡೆಯುತ್ತಿದೆ   

ಬೆಂಗಳೂರು: ಮೂರು ವರ್ಷಗಳಿಂದ ನಡೆಯುತ್ತಿರುವ ನೈರುತ್ಯ ರೈಲ್ವೆಯ ಎರಡು ಪ್ರದೇಶಗಳಲ್ಲಿನ ದ್ವಿಪಥ(ಡಬ್ಬಲ್‌ ಲೈನ್‌) ಕಾಮಗಾರಿ ಇನ್ನು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ.

ನೈರುತ್ಯ ರೈಲ್ವೆಯೇ ಎಲ್ಲ ಕಡೆಗಳಲ್ಲೂ ದ್ವಿಪಥ ಕಾಮಗಾರಿಗಳನ್ನು ನಡೆಸುತ್ತಿತ್ತು. ಬೆಂಗಳೂರು ನಗರದೊಳಗೆ ಹಾದು ಹೋಗುವ ಬೈಯಪ್ಪನಹಳ್ಳಿ-ಹೊಸೂರು ಮತ್ತು ಯಶವಂತಪುರ–ಚನ್ನಸಂದ್ರ (ಬೈಯಪ್ಪನಹಳ್ಳಿವರೆಗೆ ಮಾತ್ರ) ಮಾರ್ಗಗಳನ್ನು ದ್ವಿಪಥಗೊಳಿಸುವ ಜವಾಬ್ದಾರಿಯನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ (ಕೆ–ರೈಡ್‌) ವಹಿಸಿದೆ. 

ಏಕಪಥದಿಂದಾಗಿ ಸಿಗ್ನಲ್‌ಗಳಿಗಾಗಿ ರೈಲು ಕಾಯುವಂತಾಗಿತ್ತು. ಎದುರಿನಿಂದ ಬರುವ ರೈಲು ದಾಟುವವರೆಗೆ ಸಮಯ ವ್ಯರ್ಥವಾಗುತ್ತಿತ್ತು. ಈ ಎರಡು ಮಾರ್ಗಗಳ ಕಾಮಗಾರಿ ಪೂರ್ಣಗೊಂಡರೆ ನೈರುತ್ಯ ರೈಲ್ವೆಯ ಪ್ರಮುಖ ಮಾರ್ಗಗಳೆಲ್ಲ ದ್ವಿಪಥವಾಗಲಿವೆ. ಕಾಯುವಿಕೆ ತಪ್ಪಲಿದೆ.

ADVERTISEMENT

ಯಶವಂತಪುರ–ಚನ್ನಸಂದ್ರ 21.7 ಕಿ.ಮೀ. ಮಾರ್ಗವನ್ನು ನಾಲ್ಕು ಹಂತಗಳಲ್ಲಿ ಕೆ–ರೈಡ್‌ ದ್ವಿಪಥಗೊಳಿಸಲಿದೆ. ಯಶವಂತಪುರ–ಲೊಟ್ಟೆಗೊಲ್ಲಹಳ್ಳಿವರೆಗಿನ 5.3 ಕಿ.ಮೀ. ಮತ್ತು ಅಲ್ಲಿಂದ ಹೆಬ್ಬಾಳವರೆಗಿನ 2.8 ಕಿ.ಮೀ. ಕಾಮಗಾರಿಯನ್ನು 2024ರ ಜೂನ್‌ ಒಳಗೆ ಪೂರ್ಣಗೊಳಿಸಲಾಗುವುದು. ಹೆಬ್ಬಾಳ–ಬಾಣಸವಾಡಿ 7.6 ಕಿ.ಮೀ. ಹಾಗೂ ಅಲ್ಲಿಂದ ಬೈಯಪ್ಪನಹಳ್ಳಿ ‘ಎ’ ಕ್ಯಾಬಿನ್‌ವರೆಗಿನ 4 ಕಿ.ಮೀ. ಕಾಮಗಾರಿಯನ್ನು 2024ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲಾಗುವುದು. ಬೈಯಪ್ಪನಹಳ್ಳಿಯಿಂದ ಚನ್ನಸಂದ್ರವರೆಗಿನ 2 ಕಿ.ಮೀ. ಕಾಮಗಾರಿಯನ್ನು ನೈರುತ್ಯ ರೈಲ್ವೆಯೇ ಕೈಗೊಳ್ಳಲಿದೆ ಎಂದು ಕೆ–ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ–ಹೊಸೂರು 48 ಕಿ.ಮೀ. ಮಾರ್ಗದಲ್ಲಿ ಕಾರ್ಮೆಲರಾಂ–ಹುಸ್ಕೂರು–ಹೀಲಲಿಗೆವರೆಗೆ 10.3 ಕಿ.ಮೀ. ಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿವೆ. ಬೆಳ್ಳಂದೂರು–ಕಾರ್ಮೆಲರಾಂ ಸಿವಿಲ್‌ ಕೆಲಸಗಳು ನಡೆಯುತ್ತಿದ್ದು, 2024ರ ಮಾರ್ಚ್‌ ಒಳಗೆ ಪೂರ್ಣಗೊಳ್ಳಲಿದೆ. ಬೈಯಪ್ಪನಹಳ್ಳಿ– ಬೆಳ್ಳಂದೂರು, ಹೀಲಲಿಗೆ–ಆನೆಕಲ್‌, ಅಲ್ಲಿಂದ ಮಾರನಾಯಕನಹಳ್ಳಿ–ಹೊಸೂರುವರೆಗಿನ ಕಾಮಗಾರಿಗಳು 2024ರ ಡಿಸೆಂಬರ್‌ ಒಳಗೆ ಹಂತ ಹಂತವಾಗಿ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.

ಏಕಪಥ ಕೆಲವೇ ಮಾರ್ಗಗಳು: ಚಿಕ್ಕಬಾಣಾವರ–ಹಾಸನ ರೈಲ್ವೆ ಮಾರ್ಗ, ಯಲಹಂಕ–ದೇವನಹಳ್ಳಿ–ಚಿಕ್ಕಬಳ್ಳಾಪುರ–ಕೋಲಾರ ಮಾರ್ಗಗಳು ಏಕಪಥವನ್ನೇ ಹೊಂದಿವೆ. ಬೆಂಗಳೂರು–ಮೀರಜ್‌ ಮಾರ್ಗದಲ್ಲಿ ಬೆಂಗಳೂರು ಕಡೆಯಿಂದ ದ್ವಿಪಥಗಳಾಗಿವೆ. ಮೀರಜ್ ಸಮೀಪ 6 ಕಿಲೋಮೀಟರ್‌ ಏಕಪಥ ಇದೆ. ಮಂಗಳೂರಿನಿಂದ ಅಡುಗೆ ಅನಿಲವನ್ನು ಗೂಡ್ಸ್‌ ಟ್ಯಾಂಕ್‌ ರೈಲಿನಲ್ಲಿ ತರುತ್ತಿದ್ದ ಕಾಲದಲ್ಲಿ ದ್ವಿಪಥ ಬೇಕು ಎಂಬ ಕೂಗು ಇತ್ತು. ಈಗ ಪೈಪ್‌ಲೈನ್‌ ಮೂಲಕ ಗ್ಯಾಸ್‌ ಪೂರೈಕೆಯಾಗುತ್ತಿರುವುದರಿಂದ ದ್ವಿಪಥದ ಬೇಡಿಕೆ ಅಷ್ಟಿಲ್ಲ. ಆದರೂ ಎಲ್ಲ ಕಡೆಗಳಲ್ಲಿ ದ್ವಿಪಥವಾದರೆ ಕಾಯುವುದು ತಪ್ಪುತ್ತದೆ. ತಾಂತ್ರಿಕ ಸಮಸ್ಯೆಯಿಂದ ಉಂಟಾಗುವ ಅಪಘಾತ ಸಂಭವವೂ ಇರುವುದಿಲ್ಲ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ಮಾಹಿತಿ ನೀಡಿದರು.

ಅಂಕಿ ಅಂಶ

₹ 498 ಕೋಟಿ: ಬೈಯಪ್ಪನಹಳ್ಳಿ–ಹೊಸೂರು ದ್ವಿಪಥ ಯೋಜನೆಯ ಅಂದಾಜು ವೆಚ್ಚ

₹ 314 ಕೋಟಿ: ಯಶವಂತಪುರ–ಚನ್ನಸಂದ್ರ ದ್ವಿಪಥ ಯೋಜನೆಯ ಅಂದಾಜು ವೆಚ್ಚ

2024ರ ಡಿಸೆಂಬರ್‌: ಎರಡೂ ಪ್ರದೇಶಗಳಲ್ಲಿ ದ್ವಿಪಥ ಕಾಮಗಾರಿ ಪೂರ್ಣಗೊಳಿಸಬೇಕಾದ ಅವಧಿ

ವಾಹನ ದಟ್ಟಣೆ ಕಡಿಮೆಗೊಳಿಸಲು ಅನುಕೂಲ

ಯಶವಂತಪುರ–ಬೈಯಪ್ಪನಹಳ್ಳಿ ಮತ್ತು ಬೈಯಪ್ಪನಹಳ್ಳಿ– ಹೊಸೂರು ನಡುವಿನ ಹಳಿಗಳ ದ್ವಿಪಥ ಕಾಮಗಾರಿಗಳು ನಿಗದಿತ ರೀತಿಯಲ್ಲಿ ಪ್ರಗತಿಯಲ್ಲಿವೆ. ಕಾಮಗಾರಿ ಪೂರ್ಣಗೊಳಿಸಲು 2024ರ ಡಿಸೆಂಬರ್‌ವರೆಗೆ ಅವಕಾಶವಿದೆ. ಅದರ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೇ ಬೈಯಪ್ಪನಹಳ್ಳಿ ಬೆಳ್ಳಂದೂರು ಐಟಿ ಕಾರಿಡಾರ್‌ನಲ್ಲಿ ವಾಹನದಟ್ಟಣೆ ಕಡಿಮೆ ಮಾಡಲು ಕೂಡ ಪ್ರಯೋಜನವಾಗಲಿದೆ. ರಾಜೇಶ್ ಕುಮಾರ್ ಸಿಂಗ್ ಕೆ–ರೈಡ್‌ ನಿರ್ದೇಶಕ (ಪ್ರಾಜೆಕ್ಟ್‌ ಆ್ಯಂಡ್‌ ಪ್ಲಾನಿಂಗ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.